ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಆದರದ ಆಮಂತ್ರಣ..

ಪ್ರಹವಿಸಲಿ ಪ್ರೀತಿ ಬಾಳೆಂಬ ಯಾನದಲಿ....
ಹಚಾರಿ ನೀನಾಗು ನಾ ನಡೆವ ಹಾದಿಯಲಿ ನಿ
ನ್ನ ಸುಖ ಕಷ್ಟದಲಿ ಸಮಪಾಲು ನನಗಿರಲಿ...
ವಾಸವಾಗಲಿ ನಲಿವು ನಮ್ಮಿಬ್ಬರ ಜೊತೆಯಲ್ಲಿ...ಕ್ಷ
ಣಿಕವಾಗಲಿ ನೋವು ನಿನ್ನ ಸಹಮೈತ್ರಿಯಲಿ
ಶ್ರೀಹರಿಯ ದಯವಿರಲಿ ಮುಂಬರುವ ದಿನಗಳಲಿ...
ಏಳು ಬಣ್ಣಗಳ ಮೂಲ ಒಂದೇ ಬಣ್ಣವಂತೆ..
ಏಳು ಹೆಜ್ಜೆಗಳ ನಂಟು ಏಳು ಜನುಮಕಂತೆ...
ಹೆಜ್ಜೆಗಳ ಬೆಸೆದು ಜೀವ ಒಂದಾಗೋ ಸಮಯ..
ತಾಳಿ, ಕಾಲುಂಗುರ, ತಿಲಕ, ಮಂಗಳ ವಾದ್ಯ,
ಗುರು-ಹಿರಿಯರ ಮಂತ್ರಘೋಷ, ಇಷ್ಟದೇವತೆಯ ಅಭಯ ವಾಣಿ
ಜೊತೆಯಾಗಲು ಹೊಸ ಬಂಧವು, ಮನಸಾಗಲಿ ಪ್ರಸನ್ನ


ವರ್ಷದ ಆರಂಭದಲ್ಲಿ  ಸ್ನೇಹಿತರೆಲ್ಲಾ ಸೇರಿದ್ದ ಮದುವೆಯ ಸಂದರ್ಭದಲ್ಲಿ ನನ್ನ ಕೇಳಿದ ಪ್ರಶ್ನೆಗೆ ನಾನು ತಿರುಗಿ ಉತ್ತರಿಸಿದ್ದು ಇನ್ನೊಂದು ವರ್ಷ ಆ ಬಗ್ಗೆ ಯೋಚನೆ ಇಲ್ಲ, ಮನೆಯಲ್ಲಿ ಹೇಳಿ ಅಗಿದೆ ಏಂದಿದ್ದು ಸುಳ್ಳಲ್ಲ..ಹೇಳಿದ ಮೂರು ತಿಂಗಳೊಳಗೆ,ಒಂದು ಬೆಳಗ್ಗೆ ಹತ್ತಿರದವರಿಗೆಲ್ಲ ಈ ವರ್ಷದ ಕೊನೆಯಲ್ಲಿ ಮದುವೆ ಅಗುತ್ತಿದ್ದೆನೆ ಎಂದಿದ್ದು ಸುಳ್ಳಲ್ಲ. ಹೌದು ಕೊನೆಗೂ ಮಾನಸರಂಗದ ಒಂಟಿ ಮನಸು ಇನ್ನೊಬ್ಬರ ಕನಸಿನೊಂದಿಗೆ ಜಂಟಿ ಆಗಿ ಮದುವೆಯೆಂಬ ಮಧುರ ಬಾಂಧವ್ಯದ ಹೊಸ್ತಿಲಲ್ಲಿ ನಿಂತಿದೆ. ತುಂಬಾ ದಿನ ಬಾಕಿ ಇದೆ ಎಂದು ಹಾರಾಡಿ ಕೊಂಡಿದ್ದ, ಅಂಕೆಯಿಲ್ಲದ ಮನಸು ಮದುವೆ ಹತ್ತಿರ ಬಂದಂತೆ ಅರಿವಾಗುತ್ತಿರುವ , ಮುಂದೆ ಸ್ವಾಗತಿಸುತ್ತಿರುವ ಹೊಸ ಜವಾಬ್ಧಾರಿ,ಹೊಸ ವಾತಾವರಣ,ಹೊಸ  ಕನಸುಗಳ ನಡುವೆ ಇಣುಕಿ ಗೊಂದಲ.ತಳಮಳಗಳ ಸಾಮೀಪ್ಯದಿಂದ ಜೀವನದ ಹೊಸ ಮಜಲನ್ನು ಸ್ವಾಗತಿಸಲು ಸಜ್ಜಾಗಿದೆ.ಮೂರು ಗಂಟಿನೊಂದಿಗೆ ಜೀವನದ ನಂಟು ಬೆಸೆಯುವ ದಿನ ಗೊತ್ತಾಗಿದೆ.ಹತ್ತಿರದವರ, ಅತ್ಮೀಯರ ಬಳಿಗೆ ಕರೆಯೋಲೆಯನ್ನು ನಾನಾ ತರದಲ್ಲಿ ತಲುಪಿಸಿ ಆಗಿದೆ.ಜೀವನವನ್ನು ಹಂಚಿಕೊಳ್ಳುವ ದಿನ ಕೂಡ ಹತ್ತಿರವಾಗಿದೆ.ಇಷ್ಟು ದಿನದ ಕಾಲ್ಪನಿಕ ಬರವಣಿಗೆಗೆ ವಾಸ್ತವಿಕವಾಗಿ ಒಬ್ಬನು ಬಂದು  ನಿಂತಾಗಿದೆ.ಗೆಳತಿಯರ/ಗೆಳೆಯರ ತಮಾಷೆ,ಹಿರಿಯರ ಸಲಹೆ,ಮನದ ಕಲ್ಪನೆ ಎಲ್ಲವನ್ನೂ ಬುತ್ತಿಯಲ್ಲಿ ತುಂಬಿ ಕೊಳ್ಳುತ್ತ, ನಾನು ಮುಂದೆ ಇಡುವ ಹೆಜ್ಜೆಗಳನ್ನು ,ಅವನ ಹೆಜ್ಜೆಯ ಸಪ್ಪಳದೊಂದಿಗೆ ಬೆಸೆಯುವ ಭರವಸೆ ನೀಡಿಆಗಿದೆ.ನನ್ನಂತೆ ಅವನನ್ನೂ ನೋಡಿ ಕೊಳ್ಳುವ ಮಾತು ಕೊಟ್ಟಾಗಿದೆ.ನಿಮ್ಮನ್ನು ಕರಿಯುದಕ್ಕೆ ಇಷ್ಟೆಲ್ಲ ಪೀಠಿಕೆ ಇಟ್ಟಾಗಿದೆ.ಆ ದಿನ ನಿಮ್ಮನ್ನು ಕಣ್ಣುಗಳು ನೀರಿಕ್ಷಿಸುತ್ತಿರುತ್ತವೆ ಎಂಬುದನ್ನು ಕೂಡ ಪರೋಕ್ಷವಾಗಿ ಹೇಳಿ ಆಗಿದೆ.ನಗರದ ಜಂಜಾಟಗಳ ನಡುವೆ ನಿಮಗೆ ಹೀಗೆ ಕರೆಯುತ್ತಿರುವುದನ್ನು ಮನ್ನಿಸಿ,ನಿಮ್ಮ ಮನೆಯವರೊಂದಿಗೆ ಮದುವೆಯ ದಿಬ್ಬಣಕ್ಕೆ ಬಂದು ನಮ್ಮನ್ನು ಹರಸಿ ಹಾರೈಸಿ.
 
ದಿನಾಂಕ: 1-12-2011
ನೀರಿಕ್ಷೆಯಲ್ಲಿ..
ನಿಮ್ಮವಳು..

ನಿರೀಕ್ಷೆ...




  ಕಣ್ಣು ಹಾಯಿಸಿದತ್ತ ಕಾಣುತಿರಲು ಕಪ್ಪು ಬಾನು..
  ಚದುರಿರಲು ಅಲ್ಲಲ್ಲಿ ಮೋಡಗಳು ಚೂರಾಗಿ...
  ಮಳೆಬರುವ ಸೂಚನೆಯೋ,ಇಲ್ಲ ಕವಿದ ಕತ್ತಲೆಯೊ
  ಗುರುತಿಸಲು ಪರಿತಪಿಸೆ ಇದಾವದರ ಪ್ರತಿಬಿಂಬ..

   ಉರಿವ ತಾಪವೇ ಮೇಲೇ ಸೂಚನೆ, ಯಾಚನೆಗಿಂತ..
   ನಿಂತ ಕಾಲ-ಕನ್ನಡಿಯ ಕಣ್ಣು ಸೆರೆಹಿಡಿಯೆ ವಾಸ್ತವವ...
   ದ್ರಷ್ಟಿ ತಪ್ಪಿಸೆ ತಿರುಗಿ ,ಕೂಡಿಡಲು ಹನಿಯೊಂದ..
   ಮತ್ತೆ ಗುಡುಗಿನ ಭಯವೇ ಬರಿ ಭುವಿಯ ತುಂಬ.....

    ಧರೆಯ ಒಡಲಾಳದಲಿ ಎದ್ದ  ಮಿಂಚಿನ ಭೀತಿ....
    ಕರಗುವುದೇ ಕಾರ್ಮೋಡ ನವಿರಾದ ಹನಿಯಾಗಿ..
    ಭೋರ್ಗರೆದು ಸುರಿಯುವುದೇ ಮತ್ತೆ ಬೇಡವಾದಂತೆ..
    ನಿರೀಕ್ಷಣೆಯೋ,ನಿರಾಕರಣೆಯೋ ,ಕಣ್ಣಿನಲಿ ಮತ್ತೆ ಯಾವುದರ ಬಿಂಬ...

ಬರಹ.....

  ಅತ್ತಣದಿಂದ ಒಂದು, ಇತ್ತಣದಿಂದ ಒಂದು 
 ಮನದಿ ಮೂಡಿದ ಕಲ್ಪನೆಗೆ ಇಹುದು ಅರ್ಥವೊಂದು 
 ಹಠ ಬಿಡದೆ ಹಿಡಿದು,ಭಾವ ಮುಷ್ಟಿಯಲಿ ಪಿಡಿದು 
 ಸುರಿದು  ಪೋಣಿಸಿದರೆ ಮೂಡಿತ್ತು ಪದವೊಂದು....                                                   

  
ಪದವೊಂದೇ ಸಾಕೆ ನಿನ್ನ ನೀ ಬಿಂಬಿಸಲು
 ಕಾಡುತ್ತ ಇಣಕಿದವು ಬೆಂಬಿಡದೆ ಮನಸಲ್ಲೂ
 ಸಾಲಾಗಿ ನಿಲ್ಲಿಸಲು,ಸಾಲೊಂದ ಸ್ರಷ್ಟಿಸಲು
 ಭಾವಗಳ ಪರಿಮಳವೇ  ಪ್ರತಿ ಎಸಳಿನಲ್ಲೂ.....



 
ಬನ್ನಿರಿ ಸಾಲುಗಳೇ,ಸಾಲಾಗಿ ನಿಲ್ಲಿರಿ
ಕಟ್ಟಿಹಾಕುವೆ ನಿಮ್ಮ ನನ್ನದೇ ಪರಿಯಲ್ಲಿ
ಪ್ರೀತಿಯಲಿ ಕರೆಯಲು ನಾನಿಟ್ಟ ಹೆಸರಿನಲಿ...
ಸಾರಿರಿ ಹೊಸತನವ ಒಂದಾಗಿ ಬರಹದಲಿ... 




[ಕೊಂಚ ದಿನಗಳ ಬರವಣಿಗೆಯಿಂದ ವಿರಾಮ ಪಡೆದಿದ್ದರೂ ಬರೆಯುತ್ತಿಲ್ಲವೆಂಬ ಕೊರಗು ಕಾಡುತ್ತಲೇ ಇತ್ತು..ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಗದೇ ಮನಸ್ಸು ಪರದಾಡುತ್ತಿತ್ತು.. ದಿನ ಬ್ಲಾಗ್ ತೆರೆದು ನಿಮ್ಮ ಬರಹ ಗಳನ್ನೂ ಓದಿ,ನನ್ನ ಬ್ಲಾಗ್ ನ ಮೇಲೊಮ್ಮೆ ಕಣ್ಣು ಹಾಯಿಸುವಾಗ ನನಗೆ ಗೊತ್ತಿಲ್ಲದೇ ಬರುತ್ತಿದ್ದ ಅಸಹಾಯಕತೆಯ ನಿಟ್ಟುಸಿರು ಒಂದು ನೀರವ ಭಾವ ತರುತ್ತಿತ್ತು.. ಬರಹ ಟೆಕ್ಸ್ಟ್ ತೆಗೆದು ಬರೆಯದೆ ಮುಚ್ಚಿಡುವಾಗ ಬರೆಯುವುದೇ ಮರೆತು ಹೋಯಿತೇ ಎಂಬ ಭಾವ.. ಏನೋ ತಿಳಿಯದೆ ಹೀಗೆ ಬಂದ ಸಾಲುಗಳನ್ನು ಬರಹ ಎಂಬ ಹೆಸರಿನಲ್ಲೇ ನಿಮ್ಮ ಮುಂದಿಡುತ್ತಿದ್ದೇನೆ..ಮತ್ತೆ ಏನೋ ಬರೆದಿದ್ದೇನೆ ಎಂಬ ಸಮಾಧಾನ ದಿಂದ ಮತ್ತೆ ಬ್ಲಾಗ್ ಗೆ ವಾಪಾಸ್ಸಗಿದ್ದೇನೆ....]

ಬಯಸುತಿದೆ ಅಲ್ಪವಿರಾಮ......

ಜೀವನವೆಂಬುದು ಹೀಗೆ ಏನೋ..ಕೆಲವೊಮ್ಮೆ ಇಷ್ಟ ಪಟ್ಟಿದ್ದು ದುಸ್ತರವಾಗುತ್ತದೆ.ಎಲ್ಲವನ್ನು ಬಿಟ್ಟು ದೂರ ಹೋಗಿ ಬಿಡುವ ಮನಸ್ಸಾಗಿ ಬಿಡುತ್ತದೆ.ಅದು ಮಾನಸಿಕ ಒತ್ತಡವೋ,ಸಮಾಜದ, ಸುತ್ತಮುತ್ತಲಿನ ವಾತಾವರಣದ ಪರಿಣಾಮವೋ ಮನಸ್ಸು ಸೊರಗಿ ಕಂಗಾಲಾಗಿ ಬಿಡುತ್ತದೆ.ಏಕಾಂತ ಬಯಸುತ್ತದೆ.ನಮ್ಮ ಇಷ್ಟದ ಕೆಲಸದಿಂದಲೂ ವಿರಾಮ ಬಯಸುತ್ತದೆ.ಅದು ಕೇವಲ ಕಾಲದ ಮಹಿಮೆ ಎನ್ನುವುದು ಅರಿವಿದ್ದರೂ, ಅರಗಿಸಿ ಕೊಳ್ಳುವುದು ಸ್ವಲ್ಪ ಕಷ್ಟವೇ.ಒಂದು ಹಂತದ ವರೆಗೆ ಇವೆಲ್ಲ ಸಹ್ಯ ವಾದರೂ  ಅದರ ಪರಿಣಾಮದ ಕರಿ ಛಾಯೆ ಹಾಗೆಯೇ ಉಳಿದು ಬಿಡುತ್ತದೆ.ಬಹುಶ ನಾನು ಕೂಡ ಇದೆ ಹಂತದಲ್ಲಿದ್ದೇನೆ ಎನ್ನಿಸುತ್ತಿದೆ.ಇಷ್ಟ ಪಟ್ಟು ಬರೆಯುತ್ತಿದ್ದ ಬರವಣಿಗೆಗೆ ನನ್ನಿಂದ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.ಬರೆಯ ಹೊರಟ ಅಕ್ಷರಗಳಲ್ಲೆಲ್ಲ ಮುಷ್ಕರ ಹೂಡಿದಂತೆ ಭಾಸವಾಗುತ್ತ ಇದೆ.ಇದಕ್ಕೆ  ನನ್ನಲ್ಲಿನ ಒತ್ತಡವೋ,ಸಮಯದ ಅಭಾವವೋ ಅಥವಾ ಇದ್ದ ಸಮಯದಲ್ಲಿ ಕಳೆದು ಹೋಗುವ ನನ್ನ ಮನಸ್ಥಿತಿಯೋ ನಾ ಕಾಣೆ.ನನ್ನ ಕೇಳುತ್ತಿರುವ, ನನ್ನ ಬರಹವನ್ನು ತಪ್ಪದೆ ಓದುವ,ಕಳೆದು ಹೋಗುತ್ತಿರುವ ನನಗೆ ನಾನು ಹೇಳ ಹೊರಟಿರುವುದು ಇಷ್ಟೇ.ಇದೆಲ್ಲದರಿಂದ ಕೆಲ ಕಾಲ ವಿರಮಿಸಬೇಕಾಗಿದೆ. ಮತ್ತೆ ಹೊಸತನ ಚಿಗುರುವ ವರೆಗೂ ಮನಸ್ಸು ವಿರಾಮ ಬಯಸುತ್ತಿದೆ.ಮತ್ತೆ ವಾಪಸ್ಸಾಗ ಬೇಕಾಗಿದೆ ಕಾಯುತ್ತಿರುವ  ಸುಂದರ ದಿನಗಳಿಗೆ.ಖಂಡಿತ ಮತ್ತೆ ಬರೆಯುತ್ತೇನೆ.ನಾನು ಬರೆಯದೆ ಹೋದರೂ ನಿಮ್ಮೆಲ್ಲರ ಬರಹಗಳನ್ನು ತಪ್ಪದೆ ಓದುತ್ತೇನೆ.ಆದಷ್ಟು ಬೇಗ ವಾಪಸ್ಸಾಗುವ ಮನಸ್ಸು,ಆಸೆ ನನ್ನಲ್ಲೂ  ಇದೆ. ಆ ದಿನ ನಾಳೆನೇ ಇರಬಹುದು,ತಿಂಗಳಾಗಬಹುದು ಅಥವಾ ಮತ್ಯಾವದೋ ದಿನ ವಾಗಬಹುದು. ಅಲ್ಲಿಯವರೆಗೂ ನಾನು ಇಲ್ಲಿ, ನಿಮ್ಮೆದುರಿನಲ್ಲಿ ಕಾಣಸಿಗುವುದು ಕಷ್ಟವಾಗ ಬಹುದು. ಆದರೆ ಖಂಡಿತ ಮತ್ತೆ, ಮೊದಲಿನಂತೆ,ಹೊಸ ಬರವಣಿಗೆಯೊಂದಿಗೆ ವಾಪಾಸ್ಸಗುತ್ತೇನೆ.ಆಶಯ ನನ್ನದಾಗಿರಲಿ, ಪ್ರೋತ್ಸಾಹ ನಿಮ್ಮದಾಗಿರಲಿ..


ಹೋಗಿ ಬರುವ ಭರವಸೆ ಯೊಂದಿಗೆ ,
ನಿಮ್ಮವಳು.. 




ಮುರಿದ ಗೂಡು..

 [ಹೀಗೆ ಸಿಕ್ಕ ಚಿತ್ರ ನೋಡಿ ನಾನು ಬರೆದ ಸಾಲುಗಳಿವು...]
















ಹಕ್ಕಿಯೊಂದು ಕಟ್ಟಿತ್ತು,ಹೊತ್ತು ತಂದ ಹುಲ್ಲಿನಲಿ
ಪುಟ್ಟದಾದ ಗೂಡೊಂದ ಬಲು ಜತನದಿಂದ.....

ಪ್ರತಿಯೊಂದು ಹುಲ್ಲಿಗೂ ಕನಸೆಂಬ ಉಸಿರಿತ್ತು
ನೆಯ್ದಿತ್ತು ಆಸೆಯಲಿ ,ತುಸು ಪ್ರೀತಿಯಿಂದ...

ತಿಳಿಯಿತು ಬದುಕೆಲ್ಲ,ಬೆಚ್ಚಗೆ ಹಸನಾಗುವುದಿಲ್ಲಿ
ಕಂಡೆಲ್ಲ ಕನಸುಗಳು ನನಸಾಗುವುದರಿಂದ.....

ಮಳೆ ಬರಲಿ,ಬಿಸಿಲಿರಲಿ,ಆಶ್ರಯವೊಂದೆನಗಿಹುದು
ಅಡಗುವೆನು ಗೂಡ ಮಡಿಲಲ್ಲಿ ನೆಮ್ಮದಿಯಿಂದ....

ಮರೆತಿತ್ತು ವಿಧಿಯನ್ನು,ಅದರ ಬಗೆ ಬೆರಿಹುದು
ಒಣಗಬಲ್ಲದು ಹುಲ್ಲಿನಂದದಿ ಕನಸು ಕಾಲನ ಕಣ್ಣಿನಿಂದ...

ತಾ ಕಟ್ಟಿದ ಗೂಡೇ ಕಣ್ಣಮುಂದೆ ಸೊರಗಿಹುದು
ಮತ್ತೆ ಆಶ್ರಯ ತನಗೆ ಕನಸಿನ ಮಾತಿಲ್ಲಿ....

ಜಾರುತಿಹ ಕಣ್ಣೀರ ಬಿಂದುವೆ ಕೇಳಿಲ್ಲಿ..
ಹೊರಗೆ ಇಣುಕುವ ಹಕ್ಕೂ
ನೀ ಪಡೆದಿಲ್ಲ ಇಲ್ಲಿ.....

ಮರೆಯುವುದೇಕೆ ಅರಿಯುವುದನ್ನು...



 ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ,ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....
 
ಅದ್ಭುತವಾದ ಅರ್ಥಪೂರ್ಣ ಸಾಲುಗಳು.ಪ್ರತಿಬಾರಿಯೂ ಈ ಹಾಡು ಕೇಳಿದ ಐದು ನಿಮಿಷ ನನ್ನನ್ನೇ ಮರೆಸುವ ಸಾಲುಗಳಿವು.ಹೌದು.ಈ ಜೀವನದ ಹಲವಾರು ಸನ್ನಿವೇಶಗಳಲ್ಲಿ,ಹಂತದಲ್ಲಿ ಅರಿತು ಕೊಳ್ಳುವುದು ಎನ್ನುವುದು ಎಷ್ಟು ಮುಖ್ಯವಾಗಿರುತ್ತದೆ ಎನ್ನುವುದು ಕೆಲವೊಮ್ಮೆ ನಮ್ಮ ಅನುಭವಕ್ಕೆ ಬಂದಾಗಲೇ ಅರ್ಥವಾಗುವಂತದ್ದು.ಮೊನ್ನೆ ನನ್ನ ಗೆಳೆಯನೊಬ್ಬ ’ಅರಿತು ಕೊಳ್ಳುವುದು ಎಂದರೇನು,ಇದು ಅನಿವಾರ್ಯ ಎಂದೆಕೆ ನಾವು ಅಂದು ಕೊಳ್ಳುತ್ತೇವೆ?’ ಹೀಗೆ ಆಕಸ್ಮಿಕವಾಗಿ ನನ್ನ ಕೇಳಿದಾಗ ಮತ್ತೆ ನನಗೆ ಈ ಹಾಡು ನೆನಪಾಗಿತ್ತು.ಆ ಕ್ಷಣದಲ್ಲಿ ನಾನು ಉತ್ತರಕ್ಕಾಗಿ ಹುಡುಕಾಡಿದರೂ ದಿನ ಮುಗಿಯುವುದರಲ್ಲಿ ನಾನು ತಕ್ಕ ಮಟ್ಟಿನ ಉತ್ತರ ನೀಡುವಲ್ಲಿ ಸಫಲಳಾಗಿದ್ದೆ.ಆದರೆ ಉತ್ತರ ನೀಡಿದ ಮೇಲೂ ಈ ಪ್ರಶ್ನೆ ನನ್ನ ಕಾಡುವುದನ್ನು ನಿಲ್ಲಿಸಲಿಲ್ಲ.ಹೌದಲ್ಲವೇ ಎಷ್ಟೋ ಸಂಗತಿಗಳನ್ನು ಅರಿಯುವದನ್ನು ನಾವು ಮರೆಯುತ್ತೇವೆ.ಮರೆತು ಪೇಚಾಡುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಮೇಲ್ನೊಟಕ್ಕೆ ಸರಳವಾಗಿ ಕಂಡರೂ, ಸಂಬಂಧಗಳ ಪರಿಧಿಯಲ್ಲಿ ಬಂದಾಗ ಇದು ಅತ್ಯಂತ ಸೂಕ್ಷ್ಮವಾದ,ಒಮ್ಮೊಮ್ಮೆ ಬಿಡಿಸಲಾಗದ ಕಗ್ಗಂಟು.ಮಾತು ಎನ್ನುವುದು ಮನುಷ್ಯನಿಗೆ ತನ್ನ ಭಾವನೆಗಳನ್ನು ಒಂದರ್ಥದಲ್ಲಿ ಹೊರ ಹಾಕಲು ಅನುವು ಮಾಡಿ ಕೊಟ್ಟರೂ ಎಲ್ಲವನ್ನು ಮಾತಿನಲ್ಲಿ ವ್ಯಕ್ತಪಡಿಸಲು,ಹೊರ ಪ್ರಪಂಚಕ್ಕೆ ತಿಳಿಯಪಡಿಸಲು ಅವನು ಅಸಮರ್ಥ.ಮೌನವೇ ಕೆಲವೊಂದಕ್ಕೆ ಉತ್ತರ.ಹೀಗಿರುವಾಗ ಅರಿವುದು, ನಾವು ನಿಮ್ಮ ಅರಿತಿದ್ದೇವೆ ಎನ್ನುವುದು ಮತ್ತೊಬ್ಬರ ಕ್ರತಿಯ ಮೂಲಕವೇ ಹೊರಬರಬೇಕು.ನಾವು ನಿತ್ಯ ಹಲವಾರು ಜನರನ್ನು ನೋಡುತ್ತೇವೆ.ಒಬ್ಬರು ಮತ್ತೊಬ್ಬರಿಗಿಂತ ಭಿನ್ನರು.ಒಂದಿಷ್ಟು ಜನ ತಮಗೆ ಅನ್ನಿಸಿದ್ದನ್ನು ಹೇಳಬಲ್ಲರು,ಮತ್ತೊಂದಷ್ಟು ಜನ ತಮ್ಮಲ್ಲೇ ಅನಿಸಿಕೆಯನ್ನು ಇಟ್ಟು ಕೊಳ್ಳುವವರು.ಇಂತಹ ವಿಭಿನ್ನತೆಗಳ ಮಧ್ಯವೇ ನಮ್ಮ ಬದುಕು ಸಾಗಬೇಕು.ಇಂತಹ ಸ್ಥಿತಿಯಲ್ಲಿ ಈ ಅರಿತುಕೊಳ್ಳುವುದು ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಅನಿವಾರ್ಯ ಎನಿಸುತ್ತದೆ.

ಅರಿತು ಕೊಳ್ಳುವುದು ಎನ್ನುವುದಕ್ಕೆ ಅರ್ಥ ಹುಡುಕುವುದು ಸ್ವಲ್ಪ ಕಷ್ಟವೇ.ಕೆಲವೊಮ್ಮೆ ಅರಿವನ್ನೆ ಅರಿತುಕೊಳ್ಳಲು ನಾವು ಹೆಣಗಾಡುತ್ತೇವೆ.ಪ್ರತಿಯೊಬ್ಬನೂ ಅರಿವುದನ್ನು ತಮ್ಮ ಹತ್ತಿರದವರಿಂದ,ಅತ್ಮೀಯರಿಂದ ಒಂದಲ್ಲ ಒಂದು ರೀತಿಯಲ್ಲಿ ಬಯಸುತ್ತಾನೆ.ಛೇ ಅವರು ನನ್ನ ಅರ್ಥ ಮಾಡಿಕೊಳ್ಳುವುದೇ ಇಲ್ಲ ಎಂದು ಅಲವತ್ತು ಕೊಳ್ಳುತ್ತಾನೆ.ನಿಜ. ಸಂಪೂರ್ಣವಾಗಿ ನಾವು ಇನ್ನೊಬ್ಬರ ಮನಸನ್ನು ಅರಿಯಲು ಸಾಧ್ಯವಿಲ್ಲ.ಅದರಂತೆ ಅಲ್ಪವನ್ನಾದರೂ ಅರಿಯದೇ ಹೋಗಲೂ ಸಾಧ್ಯವಿಲ್ಲ.ಅದರ ಪ್ರಮಾಣ ಸಂಬಂಧದ ಅಳೆತೆ ಗೋಲಿನ ಮೇಲೆ ನಿರ್ಧಾರವಾಗುತ್ತದೆ. ಅರಿವುದನ್ನೇ ಮರೆತದ್ದರಿಂದ ಎಷ್ಟೊ ಸಂಬಂಧಗಳು ಹಳಸಿದ್ದನ್ನು,ಮುರಿದದ್ದನ್ನು ನಾವು ಕಾಣುತ್ತೇವೆ,ಕೇಳುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಒಂಥರ  Inbuilt Expectations. .ಇದು ಇರಲೇ ಬೇಕು. ಆದರೆ ಅತಿಯಾದರೇ ಅಮ್ರತವು ವಿಷವಂತೆ.ಎದುರಿಗಿರುವ ವ್ಯಕ್ತಿ ನಮ್ಮನ್ನೂ ಸಂಪೂರ್ಣವಾಗಿ ಅರಿಯಲಾರ ಎನ್ನುವ ಸತ್ಯದ ಅರಿವು ನಮಗಿರಬೇಕು.ಬಯಸುವುದು ಕೇವಲ ಕೋರಿಕೆಯಾಗಿರಬೇಕೆ ಹೊರತು ಹೇರುವಿಕೆ ಆಗಬಾರದು.ಪರಿಸ್ಥಿತಿ,ಕಾಲ,ಸಮಾಜ ಇವೆಲ್ಲದರ ಮಧ್ಯೆ ನಾವಿದ್ದಾಗ ನಮ್ಮತನದೊಂದಿಗೆ ಇತರರ ಮನಸ್ಸನ್ನೂ ನಾವು ಅರಿತಾಗ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ.ಇದೊಂದು ಉತ್ತರವಿಲ್ಲದ ಪ್ರಶ್ನೆಯೋ ಅಥವಾ ಉತ್ತರವನ್ನು ಅರಿತುಕೊಳ್ಳುವಲ್ಲಿ ನಾವು ಹೆಡ್ಡರೋ ಇದು ಇನ್ನೂ ನನ್ನಲ್ಲಿ ಪ್ರಶ್ನೆಯೆ.ಹೌದು ನಮ್ಮ ಎಷ್ಟೋ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿಲ್ಲ.

ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವಾ....??!!!!!

ಮತ್ತೊಮ್ಮೆ ಮತ್ತೊಂದು ಬರಹದೊಂದಿಗೆ ವಾಪಸ್ಸಾಗುತ್ತೇನೆ.

ಹೊಸದಾರಿ...

[ಬಹಳದಿನದಿಂದ ಬರೆಯಬೇಕು ಅಂದು ಕೊಳ್ಳುತ್ತಿದ್ದೇನೆ..ಬರೆಯಲು ಕುಳಿತುಕೊಳ್ಳುತ್ತೇನೆ..ಬರೆಯಲು ಸಾಧ್ಯವಾಗುತ್ತಿಲ್ಲ.ಎಲ್ಲೋ ಅಕ್ಷರಗಳು ನನ್ನಿಂದ ಜಾರುತ್ತಿವೆ.ಹಿಡಿಯಲು ಬಯಸಿದಂತೆ ಮತ್ತೆ ಮತ್ತೆ ಅಡಗುತ್ತಿವೆ.ಸಾಲೊಂದು ನೆನಪಾಗುತ್ತೆ.ಮತ್ತೆ ಕೈಗೆ ಸಿಗದೇ ತಪ್ಪಿಸಿ ಕೊಳ್ಳುತ್ತಿದೆ.ಮತ್ತೆ ಮೊದಲಿನಂತೆ ಬರೆಯ ಬೇಕಾಗಿದೆ..ಬರೆಯ ಬಲ್ಲೆ ಎಂಬ ಛಲವಿದೆ ಕಷ್ಟಪಟ್ಟು ಬಹಳ ದಿನಗಳಿಂದ ಕಾಡುತ್ತಿದ್ದ ಒಂದಿಷ್ಟು ಸಾಲನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.ಓದಿ ಅಭಿಪ್ರಾಯ ತಿಳಿಸಿ ]
 ಎಂದಿನಂತೆ ಜೋರು ಜಡಿಮಳೆ ಹಟಬಿಡದೆ ಸುರಿಯುತ್ತಿತ್ತು.ಕಿಟಕಿಯ ಪಕ್ಕ ಹಾಗೆ ಎಂದಿನಂತೆ ಕಾಫಿ ಹಿಡಿದ ಆಕೆಯ ಕಂಗಳು ದೂರದ ಹಾದಿಯನ್ನು ದಿಟ್ಟಿಸುತ್ತಿದ್ದರೂ ಮನಸು ಸವೆದ ಬದುಕಿನ ದಿನಗಳ ಮೆಲುಕು ಹಾಕುತ್ತಿತ್ತು.ಬರೋಬ್ಬರಿ ಆರು ವರ್ಷಗಳ ಇಂತದ್ದೆ ಜಡಿಮಳೆಯಲ್ಲಿ ಅಲ್ಲವೇ ಅವನು ಸಿಕ್ಕಿದ್ದು.ಸದಾ ಲೈಬ್ರರಿಯಲ್ಲಿ ಕಳೆಯುತ್ತಿದ್ದವಳಿಗೆ ಆ ದಿನವು ಹೊರತಾಗಿರಲಿಲ್ಲ."ನಿರಾಕರಣ"ದ ಒಳಗೆ ಇಳಿದು ಹೋಗಿದ್ದ ಅವಳಿಗೆ ಸುರಿಯುವ ಮಳೆಯೂ ಜೊತೆಗೂಡಿ ಸಮಯವನ್ನು ಮರೆಸಿತ್ತು.ಲೈಬ್ರರಿಯಿಂದ ಹೊರ ಬಂದಾಗ ಇಳಿಸಂಜೆಯ ಸೋಭಗಿಗೆ ಮಳೆಯ ಮೆರುಗು ಸೇರಿ ವಾತಾವರಣ ಕಳೆ ಕಟ್ಟಿತ್ತು.ತಂದಿದ್ದ ಬ್ಯಾಗ್ ನೊಳಕ್ಕೆ ಇಣುಕಿ ನೋಡಿದಾಗಲೇ ಗೊತ್ತಾಗಿದ್ದು ಎಂದು ಮರೆಯದ ಕೊಡೆಯನ್ನು ಇಂದು ಮರೆತು ಬಂದಿದ್ದು.ತನ್ನ ಮರೆವನ್ನು ಹಳಿಯುತ್ತ ಆಗಸ ನೋಡಿದವಳಿಗೆ ಮಳೆ ಜೋರಾಗಿ ಸುರಿವುವ ಹಂಬಲವನ್ನು ಸೂಚಿಸಿತ್ತು..ಹೊರಡಲೇ ಬೇಕಾದ ಅನಿವಾರ್ಯತೆ,ಜೊತೆಗೆ ಯಾರಿಲ್ಲವೆಂಬ ಹೆದರಿಕೆ ಸುತ್ತಲೂ ಕಣ್ಣು ಹಾಯಿಸಿ ಹುಡುಕ ಹೊರಟವಳಿಗೆ ಪಕ್ಕದಲ್ಲಿ ನಿಂತಿದ್ದ ಅವನು ಕಂಡಿದ್ದು.ಇವತ್ತಲ್ಲದೆ ಅವನನ್ನು ಹಲವು ಬಾರಿ ನೋಡಿದ್ದಳು.ತನ್ನಂತೆ ಅವನು ಲೈಬ್ರರಿಗೆ ಬರುವುದನ್ನು ಗಮನಿಸಿದ್ದಳು.ಆಗೊಮ್ಮೆ,ಈಗೊಮ್ಮೆ ತಾನು ದಿನ ನಡೆದು ಬರುವ ಹಾದಿಯಲ್ಲೂ ಅವನನ್ನು ಕಂಡಿದ್ದಳು.ತಟ್ಟನೆ ಏನೋ ನೆನಪಾದಂತೆ ಅವನೆಡೆಗೆ ನೋಡಿದ್ದಳು.ಅವನೊಮ್ಮೆ ಅವಳೆಡೆಗೆ ನೋಡಿ ನಕ್ಕು ತಾನು ನಿಮ್ಮ ಪರಿಸ್ಥಿತಿಯಲ್ಲೇ ಇದ್ದೆನೆಂಬ ಸೂಚನೆ ಕೊಟ್ಟಿದ್ದ.ನಗು ಮಾತಾಗಿ ಇಬ್ಬರು ಅದೇ ಹಾದಿಯಲ್ಲಿ ಹೋಗುವರೆಂಬದು ಗೊತ್ತಾಗಿ ಜೊತೆಗೆ ನಡೆಯುವ ಮನಸ್ಸು ಮಾಡಿದ್ದರು.ಹೆಜ್ಜೆಯ ಜೊತೆಗೆ,ಮಾತು ಕೂಡಿ ಹಾದಿ ಕಳೆದಿದ್ದು ಇಬ್ಬರಿಗೂ ತಿಳಿದಿರಲಿಲ್ಲ.ಅಂದಿನ ಪರಿಚಯ ಸ್ನೇಹವಾಗಿ ತಿರುಗಿದ್ದು,ಇಬ್ಬರ ಅಭಿರುಚಿಗಳು ಒಂದೇ ಎನಿಸಿದ್ದು,ಓದಿದ,ಓದುವ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತಿದ್ದದು,ಆಗೊಮ್ಮೆ ಈಗೊಮ್ಮೆ ಜೊತೆಗೆ ತಿಂದ ಜೋಳದ ಸಿಹಿ,ಐಸ್ಕ್ರೀಂನತಂಪುಪ್ರೇಮಕ್ಕೆತಿರುಗಲು  ಜಾಸ್ತಿಸಮಯಬೇಕಾಗಿರಲಿಲ್ಲ.ಮನಸ್ಸು ಬೆರೆತಿದ್ದರೂ ಜಾತಿಯ ಅಡ್ಡಗೋಡೆ ಇಬ್ಬರನ್ನೂ ಕಾಡಿತ್ತು.
ಆದರೆ  ಒಪ್ಪಿಸಿ ಮದುವೆ ಆಗುವ ಧೈರ್ಯ ಇಬ್ಬರಲ್ಲೂ ಇರಲಿಲ್ಲ..ಎದುರಿಸಿ ಮದುವೆ ಆಗುವ ಹುಂಬ ಹಠವೂ ಇರಲಿಲ್ಲ.ಎಲ್ಲರ ಬದುಕಿನಿಂದ ದೂರ ಹೋಗುವುದೊಂದೇ ಇಬ್ಬರಿಗೂ ಉಳಿದ ದಾರಿ.ಆರಿಸಿ ಆಗಿತ್ತು.ಆಯ್ದುಕೊಳ್ಳುವುದು ಬಾಕಿ ಇತ್ತು.ದೂರದ ಊರಿನ ಬಸ್ ಹತ್ತುವಾಗ ಇಬ್ಬರಲ್ಲಿ ಇದ್ದಿದ್ದು,ತಂದಿದ್ದ ಬ್ಯಾಗ್,ಕಣ್ಣು ತುಂಬಾ ಕನವರಿಸುತ್ತಿದ್ದ ಮುಂದಿನ ಬದುಕು,ಬೊಗಸೆಯ ತುಂಬಾ ತುಂಬಿ ಕೊಂಡಿದ್ದ ಹುಚ್ಚು ಪ್ರೀತಿ.

ಅಂದಿನಿಂದ ಇಂದಿನವರೆಗೂ ಪಡೆದಿದ್ದು,ಗಳಿಸಿದ್ದು ಎಲ್ಲ ಬರಿ ನೆನಪು,ಮತ್ತೆ ಮತ್ತೆ ಮೆಲುಕು ಹಾಕುವ ನನಸಾದ ಕನಸು.ಇದೆಲ್ಲ ಅವಳಿಗೆ ನೆನಪಾದದ್ದು ಇಂದು ದಾರಿಯಲ್ಲಿ ಸಿಕ್ಕ ತನ್ನಗೆಳತಿತನ್ನತವರನೆನಪಿಸಿದಾಗಲೇ.ಅವನಹುಚ್ಚುಪ್ರೀತಿಯಲ್ಲಿಕಳೆದುಹೋಗಿದ್ದು ನೆನಪಾಗಿದ್ದು ಅವಳು ಎಚ್ಚರಿಸಿದಾಗಲೇ
.ತವರುತನ್ನ ಮರೆಯದೆಇದ್ದಿದ್ದು,ಜೊತೆ ಹುಟ್ಟಿದವರು ತನಗಾಗಿ ಪರಿತಪಿಸುತ್ತಿದ್ದದು,ಹಾಸಿಗೆ ಹಿಡಿದ ಅಪ್ಪ ತನ್ನ ಬರುವಿಕೆಯನ್ನು
ಕಾಯುತ್ತಿದ್ದದು ,ತನಗಾಗಿ ಹುಡುಕಾಟ ನಡೆಸಿದ್ದು ಎಲ್ಲ ಅವಳ ಇಷ್ಟು ದಿನದ ಮುಚ್ಚಿಟ್ಟ ನೋವನ್ನು ಒಮ್ಮೆಲೇನುಂಗಿ ಮರೆಯಾಗಿದ್ದವು.
ಕಣ್ಣು ತನ್ನವನ ಬರುವಿಕೆಯನ್ನು ದಿಟ್ಟಿಸುತ್ತಿತ್ತು.ಕಾಲುಗಳು ತನ್ನವರ ಸೇರಲು ಕಾಯುತ್ತಿದ್ದವು.ಖುಷಿಯ ಕಂಗಳು ಮತ್ತೆ ಪಡೆಯಲಿದ್ದ ದಿನಗಳ ಕಾಣುವ ಕಾತುರತೆಯಲ್ಲಿದ್ದವು.ನೆನಪುಗಳಲ್ಲಿ ಕಳೆದು ಹೋಗಿದ್ದವಳನ್ನು ಎಚ್ಚರಿಸಿತ್ತು ಮನೆಯ ಕಾಲಿಂಗ್ ಬೆಲ್.ಎಷ್ಟೋ ಹೊತ್ತಿನಿಂದ ನಿಂತಿದ್ದ ಆಕೆಯ ಕಾಲ್ಗಳು ಇಷ್ಟನ್ನೂ ಹೇಳಿಬಿಡುವ ಹಂಬಲದಲ್ಲಿ ಮನೆಯ ಬಾಗಿಲಕಡೆ ಎಂದಿನಂತಿರದೇ ಹೊಸ ದಾರಿ ಹುಡುಕಿ ಹೊರಟಿವೆಯೋ ಎನ್ನುವಂತೆ ಹೊರಟಿದ್ದವು........

ಒಂಟಿ ಬಯಲು....


ಹೀಗೆ ಬೆಳಗ್ಗೆ ಒಮ್ಮೆ ಮಾತಿಗೆ ಸಿಕ್ಕಿದ ಕರಾವಳಿ ರೈಲು ಬ್ಲಾಗಿನ ತಮ್ಮ " ವಾಣಿ ಅಕ್ಕ ಒಂದು ಕವನ ಬರಿತ್ಯನೆ ಈ ಫೋಟೋ ನೋಡಿ, ನಂಗ ೩ ಜನ ಈಗಲೇ ಬರದ್ಯ"ಎಂದಾಗ ಒಮ್ಮೆಲೇ ಕಸಿವಿಸಿ ಆದರೂ ಏಕೆ ಬರೆಯಬಾರದು ಅನ್ನಿಸಿದ್ದು ಸುಳ್ಳಲ್ಲ..ಇಲ್ಲಿಯವರೆಗೆ ನಾನು ನನಗನ್ನಿಸಿದ್ದನ್ನು ಬರೆದಿದ್ದೇನೆಯೇ ಹೊರತು ಒಂದು ಚೌಕಟ್ಟಿನ ಒಳಗೆ ಬರೆಯುವ ಪ್ರಯತ್ನ ಮಾಡಿರಲಿಲ್ಲ.ಅದು ಫೋಟೋ ನೋಡಿ ಬರೆಯುವ ಸಾಹಸ ಮಾಡಿರಲಿಲ್ಲ.ಕೊನೆಗೂ ಅವನ ಕೋರಿಕೆಗೆ ಮಣಿದು ಅವ ಕಳುಹಿಸಿದ  ಪ್ರವೀಣ್[http://nenapinasaalu.blogspot.com] ತೆಗೆದ ಫೋಟೋ ನೋಡಿ ನನ್ನ ಮನಸಿಗೆ ಬಂದ ಒಂದಷ್ಟು ಸಾಲುಗಳನ್ನು ಬರೆದಿದ್ದೇನೆ..ಈಗಾಗಲೇ ಇದು ಕರಾವಳಿ ರೈಲು ಬ್ಲಾಗಿನಲ್ಲಿ ಹಾಕಿದೆ[ಬರೆದ ನಾಲ್ಕು ಕವನ ಗಳು 'ಒಂದು ಜೀವ ,ನಾಲ್ಕು ಭಾವ  'ಎಂಬ ಹೆಸರಿನಲ್ಲಿ http://karavalirail.blogspot.com].ನಾನು ಬರೆದ ಸಾಲುಗಳನ್ನು ಇಲ್ಲಿ ಹಾಕಿದ್ದೇನೆ.ಓದಿ ಹೇಗಿದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ...

















ನೆತ್ತಿ ಸುಡುವ ಬಿಸಿಲಿನಲಿ
ನೆರಳ ಹುಡುಕಿಹ ಜೀವವೇ
ಕುಸಿದು ಕುಳಿತೇಯಾ ಬದುಕ ವಾಸ್ತವವ ನೆನೆದು..


ಹಸಿರಾದ ಪೈರು,ಮಾಗಿ ಸೊಂಪಾದ ಕಾಳು
ಜಳ್ಳಾಗಿ ಉರುಳಿ ಹಾರಿದವೇ
ವಿಧಿಯ ಕ್ರೌರ್ಯಕ್ಕೆ ತಲೆಬಾಗಿ ಮಣಿದು...


ಒಂಟಿ ಬಯಲಿನಲಿ,ಒಂಟಿ ಮರದ ಅಳಲು
ಸೋತ ರಟ್ಟೆಯ ಕಷ್ಟ ಕೇಳುವವರಾರಿಲ್ಲ
ಹರಿದ ಕಣ್ಣೀರು,ಕರಗಿ ಸೊರಗಿ ಬೆವರಾಗಿ ಸುರಿದು....


ಮರುಗದಿರು ಜೀವವೇ,ಮತ್ತೆ ಚಿಗುರದು ಹುಲ್ಲು
ಸಾಗಿ ಸವೆಯಲೇ ಬೇಕು ಬದುಕ ದಾರಿ...
ಹುಟ್ಟಿಸಿದ ದೇವರು ಹುಲ್ಲನೀಯುವ ತನಕ
ಸಲ್ಲಬೇಕು ಬರಡು ಭೂಮಿಗೂ ನೀರು ನ್ಯಾಯದಲ್ಲಿ......

ಮಡಿಲು...











ನಿನ್ನ ನೋವಿನಲಿ ನನ್ನ ನಗು ಅಡಗಿತ್ತು
ಹೊತ್ತು ಹೆತ್ತು ನೀ ಜಗಕೆ ನನ್ನ ತಂದಾಗ

ಸುತ್ತ ಜನ ನೂರು,ಸಂತಸದಿ ನಲಿವಾಗ
ನನ್ನ ಅಳು ಅಡಗಿತ್ತು ನೀ ಸವರಿದಾಗ...

ಲಾಲಿ ಕೇಳುತ ನನ್ನೇ ನಾ ಮರೆತಿದ್ದೆ
ನಿನ್ನ ನಿದ್ದೆಯ ಕದ್ದು ನಾ ಮಲಗುವಾಗ....

ಹತ್ತು ಜನರ ನಡುವೆ ಮತ್ತೆ ನಾ ಹುಡುಕಿದ್ದೆ
ನಗುವೊಂದು ಮೊಗದಲ್ಲಿ ನಿನ್ನ ಕಂಡಾಗ..

ಉರುಳಲಿ ವರುಷ,ಬದಲಾಗಲಿ ಎಲ್ಲ
ನಿನ್ನ ಪ್ರೀತಿಯಲಿ ಮಾತ್ರ ಕಲ್ಮಷವೇ ಇಲ್ಲ....

ಜಗನಾಳುವ ದೇವ,ಸೂಚಿಸಿದ ತನ್ನ ಇರುವ
ನಿನ್ನ ತೋಳಲಿ ತುಂಬಿ ಮಾಸದ ಮಮತೆ ಒಲವ....

ನೂರು ಜನುಮವೇ ಬರಲಿ,ಕೋರುವೆನು ಅವನಲ್ಲಿ
ಮತ್ತೆ ಹುಟ್ಟುವೆನು ನಾ ನಿನ್ನ ಮಡಿಲಿನಲ್ಲಿ....... 







[ಅಮ್ಮಂದಿರ ದಿನದ ಸಲುವಾಗಿ ಬರೆದ ಈ ಕವನ ನನ್ನ ಪ್ರೀತಿಯ ಅಮ್ಮನಿಗೆ ಪುಟ್ಟ ಕಾಣಿಕೆ...]

ಭಾವ ಬಂಧಿಯಾದಾಗ...

[ಸುಮ್ಮನೆ  ಕುಳಿತವಳಿಗೆ  ತಟ್ಟನೆ  ನೆನಪಾದ ಸಾಲುಗಳಿವು..ಓದಿ ಹೇಗಿದೆ ಹೇಳಿ..]

ಅದೇ ಭೂಮಿ, ಅದೇ  ಭಾನು ಈ ನಯನ ನೂತನ....
ಅದೇ ದಾರಿ,ಅದೇ ತಿರುವು ಈ ಪಯಣ ನೂತನ...

ನಾನು ಪದೆ ಪದೆ ಕೇಳುವ 'ಈ ಬಂಧನ' ಸಿನೆಮಾದ ಹಾಡಿನ ಸಾಲುಗಳು ಹಳೆಯದಾಗಿದ್ದರೂ ಇಂದು ಹೊಸ ಅರ್ಥ ಪಡೆದಿದ್ದವು..ನಿಜ. ಪ್ರತಿಯೊಂದು ಹಾಗೆಯೇ ಇದೆ.ಆದರೆ ನನ್ನ ಬದುಕಿನ ತಿರುವು  ಹೊಸದಾಗಿದೆ.ಹೊಸತರಲ್ಲಿ ಏನೋ ಪುಳಕವಿದೆ.ಸ್ಪಷ್ಟ ವಾಗದ ಭಾವವಿದೆ.ಹೇಗೋ ಇದ್ದ ಅಷ್ಟೊಂದು ನಿನ್ನೆಗಳು ಇಂದಿನಲ್ಲಿ ಕನಸಂತೆ ಕರಗಿ ಹೋಗಿವೆ.ಆದರೂ ಹೊಸತನ್ನು ಸ್ವಾಗತಿಸಲು ಮನಸ್ಸಿನಲ್ಲೊಂದು ಸಣ್ಣ ಅಳುಕಿದೆ.ಅದಕ್ಕೆ ಕಾರಣವು ನೀನೆ,ಪರಿಹಾರವು ನೀನೆ.ಮೊದಲ ಬಾರಿಗೆ ನಾನು ಬೆಳೆದು ನಿಂತಂತೆ ಭಾಸವಾಗುತ್ತಿದೆ.ಹುಚ್ಚು ಮನಸ್ಸು ಲಗಾಮು ಬೇಡುತ್ತಿದೆ.ಪ್ರತಿಯೊಂದು ಪದಗಳಿಗೂ ಸುತ್ತಲಿನವರು ಅರ್ಥ ಕಲ್ಪಿಸುವಾಗ ಇದು ನಾನೇನ ಎನ್ನುವ ಸಂಶಯ ನನ್ನ ಕಾಡುತ್ತಿದೆ.ಸಂಶಯ ಸತ್ಯ ಅನ್ನೋದೇ ನನಗೆ ಅರಿವಾಗುವಾಗ ಲಜ್ಜೆಯೊಂದು ನನ್ನ ಕಾಡುತ್ತಿದೆ.ಒಂಟಿ ಕನಸುಗಳು ನಿನ್ನ ಕನಸುಗಳಿಗೆ ಜಂಟಿ ಯಾಗಿ ನಮ್ಮ ಕನಸಾಗಿ ನನಸಾಗುವ ಪರಿಯೇ ಹೀಗಿರಬೇಕು.ಅದರೂ ಇದು ಹೊಸತಾಗಿದೆ.ಹೊಸತನ್ನು ಸವಿಯುವ ಮನಸಾಗಿದೆ.

ನನ್ನ ಪ್ರಪಂಚದಲ್ಲಿ ಬರಿ ನಾನಿದ್ದೆ,ಕೇವಲ ನನ್ನ ಅಸೆಗಳಿದ್ದವು.ನನ್ನದೇ ಕನಸುಗಳಿದ್ದವು.ಅದಕ್ಕೆ ನಾನೊಬ್ಬಳೇ ಕೊಡುತ್ತಿದ್ದ ಅರ್ಥಗಳಿದ್ದವು.ಪಯಣದಲ್ಲಿ ಬರಿ ನನ್ನ ಹೆಜ್ಜೆ ಗುರುತುಗಳಿದ್ದವು.ಎಲ್ಲದರಲ್ಲೂ  ಬರಿ ನಾನು ಮಾತ್ರ ಇದ್ದೆ.ಆದರೆ ಇಂದು ನಾನೆಂಬುದು ನಾವಾಗುತ್ತಿದೆ.ನನ್ನ ಪುಟ್ಟ ಪ್ರೀತಿಯ ಪ್ರಪಂಚಕ್ಕೆ ನಿನ್ನ ಮತ್ತು ನಿಮ್ಮವರ ಆಗಮನ ಮತ್ತಷ್ಟು ಖುಷಿಯನ್ನು ಕೊಟ್ಟಿದೆ.ನನ್ನ ಜಗತ್ತು ಹಿಂದಿಗಿಂತ ದೊಡ್ಡದಾಗಿದೆ.ನನ್ನ ಬದುಕಿನ ಖಾಲಿ ಜಾಗವೊಂದು ನಿನ್ನದಾಗಿದೆ.ಅದೆಷ್ಟೋ ಅಪೂರ್ಣ ಸಾಲುಗಳು ನಿನ್ನಿಂದ ಪೂರ್ಣವಾಗ ಬೇಕಿದೆ.ಅದೆಷ್ಟೋ ಸಂಜೆಗಳು ಸುಂದರವಾಗಿ ಅರಳಬೇಕಾಗಿದೆ..ಅದೆಷ್ಟೋ ಹಾದಿಗಳನ್ನು ಜೊತೆಯಾಗಿ ನಡೆಯಬೇಕಾಗಿದೆ..ಅದೆಷ್ಟೋ ಮೌನಗಳು ಮಾತಾಗಬೇಕಿದೆ.ಅದೆಷ್ಟೋ ಕನಸುಗಳು ನನಸಾಗಿ ಕರಗಬೇಕಾಗಿದೆ. ನಿನ್ನೆಯ ನಗು, ನಾಳೆಯ ನೀರಿಕ್ಷೆ,ಕಳೆಯುತ್ತಿರುವ ಇವತ್ತು ಎಲ್ಲಾ ಹೊಸತರಂತೆ ತೋರುತ್ತಿದೆ. ಹತ್ತಿರದವರ ಸಂಭ್ರಮ ನೋಡುವಾಗ ಮನಸ್ಸು ಮುಗುಳ್ನಗುತ್ತಿದೆ.ಮತ್ತೆ ಮತ್ತೆ ಅನುಮಾನ ನನ್ನ ಆವರಿಸುತ್ತಿದೆ.ಮನಸ್ಸು ಉತ್ತರ ಹುಡುಕಾಡುತ್ತಿದೆ..ಎಂದಿನಂತೆ ನೆಚ್ಚಿನ ಹಾಡಿನ ಸಾಲೊಂದು ನನ್ನ ಕಾಡುತ್ತಿದೆ.

ಇದು ಮೊದಲನೇ ಹಾಡು ಹೇಗೋ ಏನೋ ತಿಳಿಯೆ..
ನನ್ನ ನಲುಮೆಯ ಮಾತು,ರೀತಿ ನೀತಿ ಸರಿಯೇ...??

ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ

ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ
ಬರೋಬ್ಬರಿ ಆರು ವರ್ಷಗಳ ಹಿಂದೆ ನನ್ನ ಸೆಳೆದ ಸಾಲುಗಳಿವು...ಮನೆಯ ಬೆಚ್ಚನೆಯ  ಪ್ರೀತಿಯಿಂದ ಹೊರಬಂದು ಜಗತ್ತನ್ನು ಕಾಣುವಂತೆ ಮಾಡಿದ್ದೆ ಈ ಪದಗಳು..ಹೌದು ಉತ್ತರ ಕನ್ನಡದ ಮೂಲ,ದಕ್ಷಿಣ ಕನ್ನಡದ ಹಾದಿ ಹಿಡಿದು ನಾನು ನನ್ನ ಗುರುತಿಸಿ ಕೊಂಡಿದ್ದೆ ಇಲ್ಲಿ. ಅಪ್ಪನ ಕೈ ಹಿಡಿದು ಬಸ್
ಇಳಿಯುವಾಗ,ಮಾರುದ್ದಕ್ಕೆ ಪಸರಿಸಿದ್ದ ಚಂದನೆಯ ಕಟ್ಟಡ,ಮುಂದೆ ಕಾಣುವ ಹೆಸರಾಂತ ಗಡಾಯಿ ಕಲ್ಲು,ಸುತ್ತಲು ತುಂಬಿರುವ ವಿದ್ಯಾ ಸಂಸ್ಥೆಗಳು ಇವೆಲ್ಲದರ ಜೊತೆ ನಾನು ಕಳಿಯ ಬೇಕಾಗಿದ್ದ ಭವಿಷ್ಯ ರೂಪಿಸುವ ಎರಡು ವರ್ಷಗಳು ಇವಿಷ್ಟೇ ನನ್ನ ಗಮನದಲ್ಲಿದ್ದಿದ್ದು..ನಾನು ಹೇಳುತ್ತಿರುವುದು ನಮ್ಮ ಕರ್ನಾಟಕದ ಪ್ರಸಿದ್ಧ ವಿದ್ಯಾ ಸಂಸ್ಥೆ ಗಳಲ್ಲೊಂದಾದ SDM  ಎಜುಕೇಶನ್ ಟ್ರಸ್ಟ್ ನ ತವರು ಉಜಿರೆ ಬಗ್ಗೆ..ಅಲ್ಲಿ ಕಲಿತಿದ್ದು,ಅಳವಡಿಸಿ ಕೊಂಡಿದ್ದು ನನ್ನ ಬದುಕಿನ ಉದ್ದಕ್ಕೂ ನನಗೆ ಮಾರ್ಗದರ್ಶಿ.ಬಹುಷಃ ಅಲ್ಲಿಯ ನೀರು ಕುಡಿದ ಪ್ರತಿಯೊಬ್ಬರೂ ಈ ಮಾತನ್ನು ಒಪ್ಪಬಹುದು..ಸೀಟ್ ಪಡೆಯಲು ಇರುತ್ತಿದ್ದ ಉದ್ದನೆಯ ಸಾಲಿನಲ್ಲಿ ನಮ್ಮವರ ಮಾತು ಕೇಳಿದರೆ ಸಾಕೆಂಬ ಭಾವ ಅಲ್ಲಿ ಸೇರಲು ಬರುತ್ತಿದ್ದ ಪ್ರತಿಯೊಬ್ಬರಿಗೂ..ಕೊನೆಗೆ ಹಾಸ್ಟೆಲಿನಲ್ಲಿ ಬೇಕಂತಲೇ ರೂಂ ಕೊಡುತ್ತಿದ್ದದು ನಮ್ಮವರ ಬಿಟ್ಟೆ.:)ಯಾಕೆಂದರೆ ಅದು ಅಲ್ಲಿನ ಪದ್ಧತಿ.ಬೆರೆಯುವ,ಅರಿಯುವ ಮನಸ್ಸು ನಮ್ಮದಾಗಬೇಕಂಬ ಆಶಯ ಅವರದು..ಶಿಸ್ತು, ಸ್ವಚ್ಛತೆ ಅಲ್ಲಿ ನೋಡಿ ಬೆರಗಾಗಬೇಕು..ಸ್ವಂತಿಕೆ ಅನ್ನೋದನ್ನು ಅಲ್ಲಿ ನೋಡಿ ಕಲಿಯಬೇಕು..ಇದು ಉತ್ಪ್ರೇಕ್ಷೆ ಅಲ್ಲ.ಅಲ್ಲಿ ಬೆರೆತು ಹೋಗಿರುವ ಅಂಶ.

ಅಲ್ಲಿ ಕಳೆದ ಎರಡು ವರ್ಷಗಳು ಸಾಕಷ್ಟು ನೆನಪು,ಅನುಭವ,ಮೌಲ್ಯಗಳನ್ನು ಕೊಟ್ಟಿದೆ.ಪ್ರಸಿದ್ಧ ತೀರ್ಥಕ್ಷೇತ್ರದಲ್ಲೊಂದಾದ ಧರ್ಮಸ್ಥಳಕ್ಕೆ ಸರಿಯಾಗಿ 5km ಹಿಂದೆ ಸಿಗುವ ಊರೇ ಉಜಿರೆ.ನಾನು ಓದುವಾಗ ಅದು ತುಂಬಾ ಚಿಕ್ಕ ,ಇತ್ತ ಹಳ್ಳಿಯೂ ಅಲ್ಲದ ಪಟ್ಟಣವು ಅಲ್ಲದ ಊರು.ಅಲ್ಲಿ ಇದ್ದಿದ್ದು ಬರಿ ಕಾಲೇಜ್, ಶಾಲೆ,ಹಾಸ್ಟೆಲ್ ಇಷ್ಟೇ.ಅಲ್ಲೋ ಇಲ್ಲೋ ಇದ್ದ ಅಂಗಡಿಗಳು.ಇದ್ದಿದ್ದು ಒಂದೇ ಫೇಮಸ್ ಅಮೃತ ಚಾಟ್ಸ್. ಆದ್ರೆ ಈಗ ಅದು ತುಂಬಾ ಬೆಳೆದ ಸಿಟಿ.ಕಳೆದ ವರ್ಷ ನಾನು ಹೋದಾಗ ನನಗೆ ಗುರುತು ಸಿಗದೇ ಹೋದಷ್ಟು ಬದಲಾಗಿದೆ.ನಮ್ಮ ಕಾಲೇಜ್ ನ ಪಕ್ಕ ಮತ್ತೊಂದು ಕಾಲೇಜ್ ಬಂದು ನಿಂತಿದೆ.ನಮ್ಮ ಕಾಲೇಜ್ ಅಂತು ಸಿಕ್ಕಾಪಟ್ಟೆ ಬದಲಾಗಿದೆ..ನಾವು ಕಳೆದ ಕ್ಲಾಸರೂಂ ಗಳೆಲ್ಲ ಗ್ರಾನೈಟ್  ಗಳಿಂದ ಕಂಗೊಳಿಸುತ್ತಿವೆ.ನಾವು ಇದ್ದಾಗಲೇ ತಲೆ ಎತ್ತಿದ residential ಕಾಲೇಜ್ ಇನ್ನಷ್ಟು ಬಣ್ಣಗಳಿಂದ ಕಂಗೊಳಿಸುತ್ತಿದೆ.ಆದರೆ ಎಷ್ಟೇ ಬದಲಾಗಿದ್ದರೂ ನಮ್ಮ ನೆನಪುಗಳು ಇನ್ನು ಹಸಿರು.ಸೆಂಟ್ರಲ್ ಜೈಲ್  ಗೆ ಮತ್ತೊಂದು ಹೆಸರೇನೋ ಎನ್ನುವಂತಿದ್ದ ಮೈತ್ರೆಯೀ ಹಾಸ್ಟೆಲ್,ಬೆಳಗ್ಗೆ ನಮ್ಮ ಎಬ್ಬಿಸಲು ಹಾಕುತ್ತಿದ್ದ ಸುಪ್ರಭಾತ,ನಿದ್ದೆ ಕಣ್ಣಿನಲಿ ಮಾಡುತ್ತಿದ್ದ 4 ಪ್ರಾರ್ಥನೆಗಳು,ತಪ್ಪದೆ ಪಾಲಿಸಬೇಕಾಗಿದ್ದ ರೂಲ್ಸ್ ಗಳು.ಏನೇ ಅಗಿದ್ದರೂ ಆ ದಿನಗಳು ಸುಂದರ ಸುಂದರ.ತಿಂಗಳ್ಕ್ಕೊಂದು ಸಲ ಬರುತ್ತಿದ್ದ ವಿಂಗ್ಸ್ ಪ್ರೊಗ್ರಾಮ್,ಅದಕ್ಕಾಗಿ ನಡೆಸುತ್ತಿದ್ದ ತಯಾರಿಗಳು,ಸಿಗುತ್ತಿದ್ದ ಮಜನೆ ಬೇರೆ.ಕರ್ನಾಟಕದ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಎಲ್ಲರ ಆಚಾರ,ವಿಚಾರಗಳು ಬೇರೆ ಬೇರೆ ಆಗಿರುತ್ತಿದ್ದರೂ ಅವರೆಲ್ಲರ ಸಂಬಾಳಿಸಲು ಇರಬೇಕಾಗಿದ್ದ ಒಬ್ಬ strong warden.ಸಾಲಿನಲ್ಲಿ ನಿಂತು,ಕಾದು ವಾರಕ್ಕೊಂದು ಸಲ ಮನೆಗೆ ಫೋನ್ ಮಾಡುತ್ತಿದ್ದದು,ಭಾನುವಾರ ಬೆಳಗ್ಗೆ ಉದ್ದನೆಯ ಸಾಲಿನಲ್ಲಿ ನಿಂತು ಮಸಾಲ ದೋಸೆ ತಿನ್ನುತ್ತಿದ್ದದು,ತೂಕಡಿಸುತ್ತಾ warden ಗೆ ಹೆದರಿ ಓದುತ್ತಿದ್ದದು,ಬೆಳಗ್ಗೆ,ಸಂಜೆ ಬಿಸಿ ನೀರಿಗಾಗಿ ನಲ್ಲಿಯ ಮುಂದೆ ನಿಲ್ಲುತ್ತಿದ್ದದು,ರೂಮಿನ ಇಂಚಿಂಚು ಬಿಡದೆ ಸ್ವಚ್ಛಗೊಲಿಸುತ್ತಿದ್ದದು,ಮನೆಗೆ ಹೋದರೆ ಮರೆತು ಸಹಿ ಹಾಕಿಸಿ ಕೊಳ್ಳದೆ ಬೈಸಿ ಕೊಂಡಿದ್ದು,ದಾರಿಯಲ್ಲಿ ಇದ್ದ ಇಂದ್ರಣ್ಣ ನ ಅಂಗಡಿಯ ಹೊರಗೆ ನಿಂತು ಬೋಂಡ ಜ್ಯೂಸ್ ಕುಡಿಯುತ್ತಿದ್ದದು,ತಿಂಗಳಕ್ಕೊಂದು ಸಲ  ಔಟಿಂಗ್ ಗಾಗಿ ಕಾದು ಅಮ್ರಿತ್ ಚಾಟ್ಸ್ ನಲ್ಲಿ ಘೋಭಿ ಮಂಚೂರಿ ತಿನ್ನುತ್ತಿದ್ದದು,ತುಳು ಬರದೆ ತಡವರಿಸುತ್ತಿದ್ದದು ಇನ್ನು ನನ್ನಲ್ಲಿ ನನ್ನ ನೆನಪುಗಳಲ್ಲಿ ಹಸಿರಾಗಿವೆ.


ಸುಂದರವಾದ ಕಾಲೇಜ್, ಪಕ್ಕದಲ್ಲಿ ಬಹು ದೊಡ್ಡ ಗ್ರಂಥಾಲಯ,ಅಲ್ಲೊಂದು ಹಾ ಮಾ ನಾಯಕರ ಹೆಸರಿನಲ್ಲಿ ಸಾಹಿತ್ಯದ ಪ್ರತ್ಯೇಕ ವಿಭಾಗ,SDM ಸಂಸ್ಥೆಗಳ ಪ್ರಧಾನ ಕಚೇರಿ,ಪಕ್ಕದಲ್ಲೊಂದು ಮೆಚ್ಚಿನ ಕ್ಯಾಂಟೀನ್,ವಿಜಯ ಬ್ಯಾಂಕ್,ಜೈನ್ ಅಣ್ಣನ ಪುಸ್ತಕದ ಅಂಗಡಿ,ದೊಡ್ಡ auditorium,SDM ಮುದ್ರಣಾಲಯ ,ಶಿಸ್ತಿಗೆ ಹೆಸರಾದ ಸಿದ್ದವನ ಗುರುಕುಲ,ಮೈತ್ರೆಯೀ ಹಾಸ್ಟೆಲ್ ಗಳು,ಚಿಕ್ಕವರಿಂದ ಕಂಗೊಳಿಸುವ ರತ್ನ ಮಾನಸ ,ಯೋಗ,ಪ್ರಕ್ರತಿ ಚಿಕಿತ್ಸೆಗೆ ಹೆಸರಾದ ಶಾಂತಿಧಾಮ,ಮುಂದುಗಡೆ ಇದ್ದ ವಿಶಾಲವಾದ ಕ್ರೀಡಾಂಗಣ,SDM ಶಾಲೆಗಳು,ಆಗತಾನೆ ಶುರುವಾಗಿದ್ದ residential ಕಾಲೇಜ್ ಇವೆಲ್ಲ ಉಜಿರೆ ಎಂದ ತಕ್ಷಣ ನನ್ನ ನೆನಪಿಗೆ ಬರುವಂತದ್ದು.

ಅಲ್ಲಿ ಕಲಿತಿದ್ದು,ಅಲ್ಲಿನವರ ಆತ್ಮೀಯತೆ,ಸಿಕ್ಕ ಹಲವಾರು ಆತ್ಮೀಯ ಸ್ನೇಹಿತರು,ಅಕ್ಕಂದಿರು,ತಂಗಿಯರು ಇನ್ನೂ ನನ್ನ ಜೊತೆಯಲ್ಲಿ ಅಂದಿನಂತೆ.ಅದೇ ಮಾತು,ನಗು,ಅಳು ಇಂದು ಹಾಗೆಯೇ.ಕಲಿಸಿದವರ ಅಂದಿನ ಕಾಳಜಿ ಇಂದು ಹಾಗೆಯೇ ಇದೆ..ಹಿಂದಿನ ಬಾರಿ ನಾನು ಅಲ್ಲಿಗೆ ಹೋದಾಗ ನಡೆಯುತ್ತಿದ್ದ ನ್ಯಾಷನಲ್ ಲೆವೆಲ್ ವಾಲಿಬಾಲ್ ಪಂದ್ಯಾಟ ನೋಡಲು ಹೋಗಿದ್ದೆ.ನಾನು,ಮತ್ತು ನನ್ನ ಸ್ನೇಹಿತೆ ಹೀಗೆ ಸಾಲಿನಲ್ಲಿ ಕುಳಿತಿದ್ದೆವು.ದೂರದಿಂದ ನಮ್ಮ ಕಂಡ ಗುರುಗಳ ಗುಂಪೊಂದು ನಮ್ಮ ಹತ್ತಿರಕ್ಕೆ ಬಂತು.ನಾವು ಇವರು ಗುರಿತು ಹಿಡಿಯಲಾರರು,ಪ್ರತಿವರ್ಷ ಏನಿಲ್ಲ ಅಂದರು ಸಾವಿರಾರು ವಿದ್ಯಾರ್ಥಿಗಳು ಹೊರಬಿಳುವರು.ಅದೂ ಅಲ್ಲದೆ ಆಗಿನ ನಮ್ಮ ಮುಖ ಪರಿಚಯಕ್ಕೂ,ಇಂದಿಗೂ ವ್ಯತ್ಯಾಸ ವಿದೆಯಲ್ಲ.ಅಂದು ಕೊಂಡಿದ್ದೆವು.ಆದರೆ ಹತ್ತಿರ ಬಂದವರೇ ನಮ್ಮ ಹೆಸರಿನಿಂದ ಹಿಡಿದು,ನಮ್ಮ division ಕೂಡ ಹೇಳಿ "ಏನಿಲ್ಲ ಸ್ವಲ್ಪ ದಪ್ಪ ಆಗಿದ್ದಾರೆ  ನಮ್ಮ ಮಕ್ಕಳು,ಇಂದಿಗೂ ಹಾಗೆಯೇ ಇದ್ದಾರೆ" ಎನ್ನಲು ನಮಗಿಬ್ಬರಿಗೂ ಆಶ್ಚರ್ಯ.ಅಂತಹ ಪರಿಸರ ಅಲ್ಲಿಯದು.ಮರುದಿನ ತಪ್ಪದೆ ಹೋಗಿ ನಮ್ಮ ಅತ್ಮೀಯರನ್ನೆಲ್ಲ ಮಾತನಾಡಿಸಿ ಕೊಂಡು ಬಂದಾಗಲೇ ಅವರಿಗೆಲ್ಲ ಸಮಾಧಾನ.


ಅಲ್ಲಿನ ಬಗ್ಗೆ ಬರೆಯುತ್ತ ಹೋದರೆ ಬರೆದಷ್ಟು ಮುಗಿಯಲಾರದು.ಪೇಪರ್ ನಲ್ಲಿ ಬರುತ್ತಿರುವ 'ಕ್ಯಾಂಪಸ್  ಕ್ಷಣಗಳು 'ಓದಿ ನನ್ನ ಕಾಲೇಜ್ ದಿನಗಳು ನೆನಪಾದವು.ನೆನಪುಗಳೆಲ್ಲ ಅಕ್ಷರ ರೂಪ ಪಡೆದವು.ನೀವು ಅವಕಾಶ ಸಿಕ್ಕರೆ ಅಲ್ಲಿಗೊಮ್ಮೆ ಭೇಟಿ ನೀಡಿ.ಖಂಡಿತ ಅದ್ಭುತ ಲೋಕ್ಕಕ್ಕೆ ಹೋಗಿ ಬಂದ ಅನುಭವ ನಿಮಗಾಗುತ್ತದೆ.ಮತ್ತೆ ಮತ್ತೊಂದು ಲೇಖನ ದೊಂದಿಗೆ ಮರಳುತ್ತೇನೆ....

ಇಂತಿ
ನಿಮ್ಮವಳು.........

ಉಳಿದುಹೋದ ಮಾತುಗಳು.....

ಮುಡಿದ ಮಾಲೆಯಲಿ
ಮಲ್ಲಿಗೆಯ ಮೊಗ್ಗಾಗಿ ಸೇರಿಬಿಡು,
ಇರುಳಲ್ಲಿ ಬಾಡುವಂತೆ....

ನನ್ನ ಕಣ್ಣಿನ ರೆಪ್ಪೆಯಲಿ ಮುಚ್ಚಿಟ್ಟ
ಕನಸಾಗಿ ಸೇರಿಬಿಡು,
ಜಾರುವ ಕಣ್ಣೀರ ಹನಿಯಾಗುವಂತೆ....

ಏಳು ಬಣ್ಣಗಳ ಸರತಿಗೆ 
ನೀನೊಂದು ಬಣ್ಣವಾಗಿ ಸೇರಿಬಿಡು,
ಮೂಡಿ ಮರೆಯಾಗುವ 
ಕಾಮನಬಿಲ್ಲಿನಂತೆ...

ಸಂಜೆ ಸೋನೆ ಮಳೆಯಲ್ಲಿ 
ಮಳೆ ಹನಿಯಾಗಿ ಸೇರಿಬಿಡು..
ಬಿದ್ದು ಇಂಗಿ ಹೋಗುವ ಪರಿಯಂತೆ....

ಸಾಲು ಸಾಲಾಗಿ  ಕಾಡುವ ನೆನಪುಗಳ ಸರದಿಗೆ 
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...







[ಎಂದೋ ಬರೆದ ಕವನ ಹೀಗೆ ಹುಡುಕುತ್ತಿದ್ದಾಗ ಸಿಕ್ಕಿತು..ಬ್ಲಾಗ್ ನಲ್ಲಿ ಹಾಕುವ ಮನಸ್ಸು ಮಾಡಿದೆ...ಓದಿ ಹೇಗಿದೆ ಹೇಳಿ..]

ವರುಷದ ಹರುಷ...


"ಸುಮ್ಮನೆ ಬೇಜಾರು ಮಾಡ್ತಾ ಎಂಥಕ್ಕೆ ಟೈಮ್ ಹಾಳು ಮಾಡ್ತೆ. ಎಂತದನ್ನಾದ್ರೂ ಬರಿ,ಆಮೇಲೆ ನಿಂಗೆ ಆ ಬರವಣಿಗೆ ಬಿಟ್ಟೆ ಹೋಗ್ತು.ಹಂಗೆ ಅಪಲೇ ಬಿಡಡಾ,ಅದನ್ನ ಮುಂದುವರೆಸು"  ಆವತ್ತು ಬೆಳಗ್ಗಿನ ಇದೊಂದು ಮಾತು ಇವತ್ತಿನ "ಮಾನಸರಂಗ"ದ ಹುಟ್ಟಿಗೆ ಕಾರಣ.ನನ್ನ ಮನಸಿನ ಮಾತುಗಳಿಗೆಲ್ಲ ಅಕ್ಷರರೂಪ ಕೊಟ್ಟು ಅದನ್ನ ನಿಮ್ಮ ಮುಂದೆ ಇಡಲು ಅಪ್ಪನ ಅದೊಂದು ಮಾತಿಗಾಗಿ ಕಾಯುತ್ತಿದ್ದೆ ಅಂತ  ಅನ್ನಿಸುತ್ತದೆ.ನನ್ನ ಪ್ರತಿಯೊಂದು ನಿರ್ಧಾರದ ಹಿಂದೆ ನನ್ನವರ ಸಲಹೆ ಹಾಗು ಬೆಂಬಲ ಸದಾ ಇದೆ.ಅದಕ್ಕೆ ನನಗೆ ಅವರು ಎಂದೂ ಸ್ನೇಹಿತರಂತೆಯೇ.ಹೀಗೆ ಮನೆಯಲ್ಲಿದ್ದಾಗ ಅವರಿಗೆ ಇಂಟರ್ನೆಟ್ ಬಗ್ಗೆ ಹೇಳುತ್ತಾ ನಾನು ತಪ್ಪದೆ ಓದುತ್ತಿದ್ದ ಬ್ಲಾಗ್ ಗಳ ಬಗ್ಗೆ ಹೇಳಿದ್ದೆ. ಅದನ್ನು ನೋಡಿಯೇ ಅವರು ಹೇಳಿದ್ದರು "ನೀನ್ಯಾಕೆ ಈ ರೀತಿ ಬರೆಯಬಾರದು".ಅಲ್ಲಿಯವರೆಗೆ ನನ್ನಲ್ಲಿ ಕಲ್ಪನೆ ಇದ್ದರು ನಾನು ಬರೆಯುವ ಮನಸ್ಸು ಹಾಗು ಪ್ರಯತ್ನ ಮಾಡಿರಲಿಲ್ಲ.ಕೇವಲ ಕ್ಲಾಸಿನಲ್ಲಿ ಬೋರ್ ಅದಾಗ ಪುಸ್ತಕದ ಹಿಂದೆ,ಸುಮ್ಮನೆ ಒಬ್ಬಂಟಿ ಯಾಗಿ ಕೂತಾಗ ಮೂಡಿದ ಸಾಲುಗಳನ್ನು ನನ್ನ ಡೈರಿಯಲ್ಲಿ ಬರೆಯುತ್ತ ಇದ್ದೆ.ಅದನ್ನು ಯಾರಿಗೂ ತೋರಿಸುತ್ತಲು ಇರಲಿಲ್ಲ.ನಾನು ಬರೆದಿಡುತ್ತಿದ್ದ ಸಾಲುಗಳು ನನ್ನ ತಂಗಿಯರ ಪ್ರಬಂಧಗಳಿಗೆ ಸೇರುವುದನ್ನು ಬಿಟ್ಟರೆ ನನ್ನ ಸ್ನೇಹಿತರಿಗೆಷ್ಟೋ ಜನಕ್ಕೆ ನನ್ನ ಬರವಣಿಗೆಯ ಬಗ್ಗೆ ಗೊತ್ತಾಗಿದ್ದು ನಾನು ಬ್ಲಾಗ್ ಬರೆಯಲು ಆರಂಭಿಸಿದಮೇಲೆಯೇ..ನಾನು ಬ್ಲಾಗ್ ಪ್ರಪಂಚಕ್ಕೆ ಬಂದಮೇಲೆ ನನ್ನ ಬರಹದ ಬಗ್ಗೆ,ಬ್ಲಾಗಿನ ಹೆಸರಿನ ಬಗ್ಗೆ,ನನ್ನ ಬರವಣಿಗೆಗೆ ಯಾರು ಸ್ಫೂರ್ತಿ ಎಂದು ಹಲವಾರು ಜನ ಹಲವಾರು ಪ್ರಶ್ನೆ ಕೇಳಿದ್ದಾರೆ.ಅವರೆಲ್ಲರಿಗೂ ವರುಷದ ಹರುಷದಲ್ಲಿ ಉತ್ತರ ನೀಡುವ ಆಶಯ.

ಇದು ತುಂಬಾ ಚಿಕ್ಕಂದಿನಿಂದಲೇ ನನ್ನೊಂದಿಗೆ ಬೆಳೆದ ಹವ್ಯಾಸ.ಇದಕ್ಕೂ ನನ್ನ ತಂದೆಯವರೇ ಕಾರಣ.ನನ್ನಲ್ಲಿ ಓದುವ ಹುಚ್ಚು,ಬರೆಯುವ ಹುಚ್ಚು ಹುಟ್ಟಿದ್ದೇ ನನ್ನ ತಂದೆಯವರಿಂದ.ಪಪೆರನಲ್ಲಿ ಬರುತ್ತಿದ್ದ ಲೇಖನಗಳಿಗೆ ನನ್ನದೇ ರೀತಿಯಲ್ಲಿ ವಿಮರ್ಶಿಸುತ್ತಿದ್ದನ್ನು ನೋಡಿ ನೀನು ಬರೆಯಬಲ್ಲೆ ಎಂದಿದ್ದರು.ನಾನು ನಕ್ಕು ಬಿಟ್ಟಿದ್ದೆ.ಆಗ ನಾನು ಮೂರನೇ ಇಯತ್ತೆ.ಅವರು ನನಗೆ ಬರೆಯಲು ಕೊಟ್ಟ ವಸ್ತು 'ಬಾಳೆ ಗಿಡ'.ನಾನು ಒಂದು ತಾಸಿನಲ್ಲಿ ೪ ಪ್ಯಾರದ ಕವನ ಬರೆದು ಬಿಟ್ಟಿದ್ದೆ.(ಅದು ನನಗೆ ಈಗ ನೆನಪಿಲ್ಲ :)).ಹೀಗೆ ಬರವಣಿಗೆ ದಿನೇ ದಿನೇ ನನ್ನಲ್ಲಿ ಬೆರೆತಿದ್ದು.ಸುತ್ತ ಮುತ್ತ ನಡೆಯುತ್ತಿದ್ದ ಅಶು ಪ್ರಭಂಧ,ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಾ ಹೋದಂತೆ ನಾನು ಬರವಣಿಗೆಗೆ ಹತ್ತಿರವಾಗಿದ್ದೆ.ಅಮ್ಮನಿಗಾಗಿ ಹೊಸ ಹಾಡುಗಳು,ಭಜನೆಗಳು ಕೂಡ ನನ್ನ ರಚನೆಯಲ್ಲಿ ಸೇರಿ ಬಿಟ್ಟಿದ್ದವು.ಮತ್ತೆ P.U.C ಗೆ ಹೋದಮೇಲೆ ನಾನು ಬಹು ಹೊತ್ತು ಕಳೆಯುತ್ತಿದ್ದದ್ದು ಲೈಬ್ರರಿಯಲ್ಲಿ.ಪುಸ್ತಕದ ಹುಚ್ಚಿದ್ದ ನನಗೆ ಅಲ್ಲಿ ಪುಸ್ತಕಗಳಿಗೇನು ಬರವಿರಲಿಲ್ಲ.ಅಲ್ಲದೆ ಸಂಸ್ಕೃತ ಭಾಷೆಯ ಪರಿಣಾಮ ನನ್ನಮೇಲೆ ತುಂಬಾನೇ ಆಗಿದ್ದು ನನ್ನ ಬರವಣಿಗೆಗೆ ಪೂರಕವಾಯಿತು.ಆದರೆ ನಾನು ಬರೆಯುತ್ತಿದ್ದ ವೇಗ ಕಡಿಮೆ ಆಗುತ್ತ ಸಾಗಿತು.ಇದಕ್ಕೆ ಬಹುಶ: ಭವಿಷ್ಯದ ಒತ್ತಡ,ಸಮಯದ ಅಭಾವ ಕಾರಣವಿರಬೇಕು.ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ನಾನು ಒಂದು ವಿಷಯದ ಬಗ್ಗೆ ಸವಿಸ್ತಾರವಾಗಿ ಬರೆಯುವ ಸಾಮರ್ಥ್ಯವನ್ನೇ ಕಳೆದು ಕೊಂಡು ಬಿಟ್ಟಿದ್ದೆ.ಆದರೆ ಬ್ಲಾಗ್ ಅನ್ನೋ ಪ್ರಪಂಚದ ಅರಿವು ಮೂಡತೊಡಗಿತ್ತು. ಹೇಗೆ,ಏನು ಎಂದು ಮಾತ್ರ ಗೊತ್ತಿರಲಿಲ್ಲ.ಕೊನೆಯ ಸೆಮಿಸ್ಟರ್ ಅನ್ನೋ ಹೊತ್ತಿಗೆ ಬರೆಯಲಾರೆ ಎಂಬ ಹಠಕ್ಕಾಗಿಯೋ  ಏನೋ ಒಂದು ವಿಷಯದ ಬಗ್ಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಂತೆ ಮತ್ತೆ ನನ್ನ ಕೈಯಿಂದ ಪೆನ್ನು ಸಲಿಸಾಗಿ ಬರೆಯತೊಡಗಿತು.ಬ್ಲಾಗ್ ಬರೆಯಬೇಕೆಂಬ ಕಲ್ಪನೆ ಮೂಡತೊಡಗಿತು.

ಓದು ಮುಗಿದಮೇಲೆ ಬಿಡುವಿನಲ್ಲಿ ನನ್ನ ಕನಸಿಗೆ ಅಡಿಪಾಯ ಹಾಕುವ ಆಲೋಚನೆ ಮಾಡಿದ್ದೇ ಒಂದೊಂದೇ ಹಂತವಾಗಿ ಕೊನೆಗೂ "ಮಾನಸರಂಗ" ವೆಂಬ ವೇದಿಕೆ ಸಿದ್ಧವಾಯಿತು.ಹೆಸರಿನ ಬಗ್ಗೆ ತುಂಬಾ ಆಲೋಚಿಸಿ ನನ್ನ ಮನಸಿನ  ಮಾತುಗಳಿಗೆ ಜಾಗನೀಡುವ ರಂಗವಾಗಬೇಕೆಂಬ ಉದ್ದೇಶದಿಂದ 'ಮಾನಸರಂಗ' ಎಂದು ಹೆಸರು ಕೊಟ್ಟು ನಾಮಕರಣ ಮಾಡಿಬಿಟ್ಟೆ.ನನ್ನ ಬ್ಲಾಗ್ ನ ಹೆಸರು ಹಾಗು ಟೆಂಪ್ಲೇಟ್ ಬಗ್ಗೆ ತುಂಬಾ ಜನ ಮೆಚ್ಚಿ ಮೇಲ್ ಕಳಿಸಿದವರಿದ್ದಾರೆ.ಅವರೆಲ್ಲರಿಗೂ ನಾನು ಅಭಾರಿ.ನಾನು ಬರೆದಿರುವ ಪ್ರತಿಯೊಂದೂ ಬರಿ ನನ್ನ ಕಲ್ಪನೆ,ವಿಚಾರವೇ ಹೊರತು ಎಲ್ಲೂ ನನ್ನ ಬದುಕಿನ ಚಿತ್ರಣವಿಲ್ಲ.ನನ್ನ  ಸ್ವಭಾವಕ್ಕಾಗಲಿ ಹೋಲಿಕೆ ಇಲ್ಲ.ಆದರೆ ಒಂದು ಮಾತ್ರ ಹೇಳಬಲ್ಲೆ.ಈ ಬ್ಲಾಗ್ ಪ್ರಪಂಚ ನನಗೆ ಹಲವುದನ್ನು ಕಲಿಸಿಕೊಟ್ಟಿದೆ.ನನ್ನದೇ ಒಂದು ಐಡೆಂಟಿಟಿ ತಂದು ಕೊಟ್ಟಿದೆ.ನನ್ನ ಬರವಣಿಗೆಯಲ್ಲಿ ತಿದ್ದುಪಡಿ ಮಾಡಿದೆ.

"ನೀವು ಬರೆಯುದನ್ನು ನೋಡಿದರೆ ನಂಗೆ ಹೊಟ್ಟೆ ಉರಿ ಆಗತ್ತೆ ಕಣ್ರಿ,ಅದು ಹೇಗೆ ಭಾವಗಳನ್ನು ಹಿಡಿದಿಡುತ್ತೀರಾ? ನನ್ನ ಭಾವಗಳನ್ನು ನೀವು ಬರಿತೀರ ಅಂತ ಅನಿಸುತ್ತದೆ ಅಂತಲೋ,ನಿಮ್ಮ ಬರವಣಿಗೆಯಲ್ಲಿ ಒಂತರಾ ಪುಳಕವಿದೆ ಅಂತಲೋ,ನಿಮ್ಮ ಬರಹಗಳಲ್ಲಿ ವಯಸ್ಸಿಗೂ ಮೀರಿದ ಪ್ರಭುದ್ದತೆ ಇದೆ ಅಂತಲೋ,ವೈರೈಟಿ ಇದೆ ಅಂತಲೋ,ನಿಮ್ಮ ಬರವಣಿಗೆ ನೋಡಿದರೆ  ಒಬ್ಬ ಹೆಸರಾಂತ(ಹೆಸರು ಬೇಡ :)) ಲೇಖಕರ ನೆನಪಾಗುತ್ತದೆ ಅಂತಲೋ,ನಿನಗೂ ಕೂಡ ಹೀಗನಾ ಓದಿ ಅದನ್ನು ಫೀಲ್ ಮಾಡುವವರಿಗೆ ಮಾತ್ರ ಹೀಗೆ ಬರೆಯಲು ಸಾಧ್ಯ,ನಿಜ ಹೇಳಿ 'ಯಾಕೋ ತುಂಬಾ ನೆನಪಾಗ್ತಿಯ ಕಣೋ' ಅಂತ ಬರೆದಿದ್ದು  ಬರಿ ಕಾಲ್ಪನಿಕವೇ ಅಂದಾಗಲೋ,ಹೇಳಿ ಹೋಗು ಕಾರಣಕ್ಕೆ ದಯವಿಟ್ಟು ಒಳ್ಳೆ ಅಂತ್ಯ ಕೊಡಿ ಅಂದಾಗಲೋ,ಮುಗಿಸುವ ಮುನ್ನ ಓದಿ ನಿಜಕ್ಕೂ ನನ್ನ ಬದುಕಿನ ನೆನಪು ಮೂಡಿ ಕಣ್ಣಿರಾದೇ ಅಂತಲೋ,ಬದುಕೆಂದರೆ ಓದಿ ಪ್ರಖ್ಯಾತರೊಬ್ಬರು ನಿನ್ನ ವಯಸ್ಸೇಷ್ಟಮ್ಮ ಅಂತ ಕೇಳಿದಾಗಲೋ,ನೀ ಹಿಂಗ ನೋಡಬ್ಯಾಡ ನನ್ನ ಓದಿ ಕಟ್ಟಡಕ್ಕೆ ಜೀವಕೊಟ್ಟೆ,ಇನ್ನು ಅದನ್ನು ನೋಡಿದಾಗ ಮೊದಲು ನಿನ್ನ ಬರಹವೇ ನೆನಪಾಗುವುದು ಅಂತ ಅಂದಾಗಲೋ, ಮನ ಸೆರೆಯಾದ ಕ್ಷಣ ಓದಿ ನೀವು ಸದಾ  ಗೊಂದಲದಲ್ಲೇ ಇದ್ದು ಹೀಗೆ ಬರೀರಿ ಅಂದಾಗಲೋ,ನಿನ್ನ ಬರಹಗಳ ಶೀರ್ಷಿಕೆಗಳೇ  ನಮ್ಮ ಸೆಳೆಯುವುದು ಅಂದಾಗಲೋ,ನೀವೇಕೆ ನಿಮ್ಮ ವ್ರತ್ತಿ ಬಿಟ್ಟು ಪತ್ರಿಕೋದ್ಯಮಕ್ಕೆ ಬರಬಾರದು ಅಂತಲೋ ,ಕನ್ನಡ ಬರದ ನನ್ನ ಆಫೀಸಿನ ಎಷ್ಟೋ ಫ್ರೆಂಡ್ಸ್  ಗಳು ' Hey everybody told about your blog re.Please translate it into English or Hindi Yar!! Even we want to read'  "ಅಂತ ನನ್ನ ಬಂದು ಕೇಳಿದಾಗ ನಾನು ಮಾತನಾಡಲಾಗದೆ ತಡವರಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ ಇನ್ನು ಅಂಬೆಗಾಲಿಡುತ್ತಿರುವ ಮಾನಸರಂಗಕ್ಕೆ.ವರ್ಷದಲ್ಲಿ ನಾನು ಗಳಿಸಿದ್ದು ನೂರಾರು  ಹಾರೈಕೆ,ತಪ್ಪದೆ ಓದುವ ಹಲವಾರು ಸ್ನೇಹಿತರು,ಮೆಚ್ಚಿದ ಹಿಂಬಾಲಕರು,ತಿದ್ದುವ ಹತ್ತಿರದವರು.ಪ್ರತಿ ಒಬ್ಬರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ.ನಿಮ್ಮೆಲ್ಲರ ಪ್ರೋತ್ಸಾಹದ ವಿನಃ ಇದೆಲ್ಲ ಅಸಾಧ್ಯ.ನಿಮ್ಮ ಸಲಹೆ, ಮೆಚ್ಚುಗೆಗಳೇ  ಒಳ್ಳೆಯ ಬರಹಗಳು ಬರಲು ಪ್ರೇರಣೆ.

ಅಂತು ಒಂದುವರ್ಷ ಹರುಷ ದಲ್ಲಿ ತುಂಬಿತು.ಈ ಕೂಸನ್ನು ಇನ್ನಷ್ಟು ಜತನದಿಂದ ಬೆಳೆಸುವಾಸೆ.ಮತ್ತಷ್ಟು ಗೆಜ್ಜೆದನಿಯನ್ನು ಇಲ್ಲಿ ಕೇಳಿಸುವಾಸೆ.ಹೆಜ್ಜೆಯನ್ನು ಮೂಡಿಸುವಾಸೆ.ಮನದ ಕನವರಿಕೆಗಳಿಕೆ ಅಕ್ಷರರೂಪ ಕೊಡುವಾಸೆ.ಗೊಂದಲಗಳನ್ನು ಬರಹದಲ್ಲಿ ಬಿಂಬಿಸುವಾಸೆ.ಇನ್ನಷ್ಟು ಬೆಳೆಯುವಾಸೆ.ನಿಮ್ಮ ಹಾರೈಕೆ,ಪ್ರೋತ್ಸಾಹ ನಿರಂತರವಾಗಿರಲಿ.ಮತ್ತೆ ಮತ್ತೆ ಅದೇ  ಅಭಿಮಾನದೊಂದಿಗೆ ಬರುತ್ತಿರಿ.ಎಡವಿದರೆ ತಿದ್ದುತ್ತಿರಿ.ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.

ತುಂಬು ಹ್ರದಯದ ಧನ್ಯವಾದಗಳೊಂದಿಗೆ
ನಿಮ್ಮಳಗೊಬ್ಬಳು

ಜೀವಕ್ಕಿರುವುದು ಭಾವಗಳ ಮೆರುಗು..

ಬನ್ನಿ ಭಾವಗಳೆ ಬನ್ನಿ ನನ್ನೆಡೆಗೆ..
ನೆನಪಾದವು ಸುಂದರ ಭಾವಗೀತೆಯ ಸಾಲುಗಳು.ಜೀವನ ಮತ್ತು ಭಾವನೆ ಈ ಎರಡು ಒಂದೆ ನಾಣ್ಯದ ಮುಖಗಳು.ಭಾವವಿಲ್ಲದ ಜೀವವಿಲ್ಲ.ಜೀವವೇ ಇಲ್ಲದ ಭಾವಕ್ಕೆ ಬೆಲೆಯೂ ಇಲ್ಲ.ಜೀವ ಹಾಗೂ ಭಾವ ಒಂದಾದರೆ ಜೀವನ.ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ಜೀವ ಸಂಪನ್ಮೂಲದ ಜೊತೆಗೆ ಹಾಸು ಹೊಕ್ಕಾಗಿದೆ ನವಿರಾದ ಭಾವಗಳು.ತೋರ್ಪಡಿಸುವ ರೀತಿ ತರಹದ್ದಾಗಿರುತ್ತದೆ.ಯಾರದೋ ಮಗುವಿನ ಮುಗ್ಧ ಮುಖವನ್ನು ಕಂಡಾಗ ಅರಿವಿಲ್ಲದೆ ಮನಸೊಮ್ಮೆ ಅರಳಿ ನಕ್ಕಿರುತ್ತದೆ.ಬಸ್ಸಿನಲ್ಲಿ ಯಾವತ್ತೋ ಯಾರದೋ ಪಕ್ಕ ಹೋಗಿ ಕೂತಾಗ ಅತ್ಮೀಯತೆಯ ನಗುವೊಂದು ಸುಳಿದಾಡಿರುತ್ತದೆ.ಅಪರಿಚಿತರ ಗುಂಪಿನಲ್ಲೂ ಎಲ್ಲೊ ಒಂದು ಜೀವ ಪರಿಚಿತರಂತೆ ನಿಮ್ಮ ಮಾತನಾಡಿಸಿ ಬಿಟ್ಟಿರುತ್ತದೆ.ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು,ಎಲ್ಲೋ ಸೇರಿ ಒಂದಾದ ಎರಡು ಮನಗಳ ನಡುವೆ ಸ್ನೆಹವೆಂಬ ಸೇತುವೆ ನಿರ್ಮಾಣವಾಗಿ ಬಿಡುತ್ತದೆ.ಎನೂ ಅಲ್ಲದ ವ್ಯಕ್ತಿಯೊಬ್ಬ ಜಗತ್ತನ್ನು ತೊರೆದಾಗ ಮನಸ್ಸು ತೇವವಾಗಿ ಬಿಡುತ್ತದೆ.ಹಲವರಲ್ಲಿ ಒಬ್ಬರಿಗೆ ಮಾತ್ರ ನಿಮ್ಮ ನಾಳೆಗಳು ಮೀಸಲಾಗಿ ಬಿಡುತ್ತವೆ.ದೂರದಲ್ಲಿದ್ದರೂ ಅತ್ಮೀಯರ ಒಂದು ಕಾಲ್ ನಿಮ್ಮನ್ನು ಅವರ ಹತ್ತಿರಕ್ಕೆ ಕೊಂಡೊಯ್ದು ಬಿಡುತ್ತದೆ.ಇವೆಲ್ಲ ಮನುಷ್ಯ ಭಾವಗಳಿಗೆ ಬಂಧಿಯಾಗುವ ಕೆಲವೊಂದು ಪರಿಗಳಷ್ಟೇ.

ಮನುಷ್ಯನ ಭಾವಗಳು ಬರಿ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ.ಅವೂ ಜೀವವಿಲ್ಲದ ವಸ್ತುಗಳಿಗೂ ಕೂಡ ಹರಿದು ಬಿಡುತ್ತವೆ. ಜೋಪಾನ ಮಾಡಿದ ಹಳೆಯ ಪುಸ್ತಕಗಳು,ನೆನಪುಗಳ ಹೊತ್ತು ಮತ್ತೆ ನೆನಪಾಗುವ ಆಟೋಗ್ರಾಫ್ ಗಳು,ಹುಟ್ಟಿ ಬೆಳೆದ ಅನುಭವ ಕಟ್ಟಿಕೊಟ್ಟ ನಮ್ಮೂರು,ಆಡಿ ಬೆಳೆದ ಶಾಲೆ,ತಿರುಗಿ ಸೋತ ಬೆಟ್ಟ ಗುಡ್ಡ,ಓಡಿ ಬೀಳುತ್ತಿದ್ದ ಹಾದಿ,ಕಲಿತು ನಲಿದ ಕಾಲೇಜು,ಅದರೊಂದಿಗೆ ಹಸಿರಾಗಿರುವ ನೆನಪುಗಳು,ನಮ್ಮದೆನ್ನುವ ಆಫಿಸ್,ಡೆಸ್ಕ್, ಇಷ್ಟ ಪಟ್ಟು ತೆಗೆದುಕೊಂಡ ಮೊಬೈಲ್, ನಮ್ಮ ಭಾಗವೇ ಆಗಿ ಬಿಡುವ ಲ್ಯಾಪ್ ಟಾಪ್, ಉಸಿರಂತೆ ಕಾಪಾಡುವ ಗಿಡಗಳು,ಮತ್ತೆ ಮತ್ತೆ ನೆನಪಾಗಿ ಕಾಡುವ ಕೆಲವೊಂದು ಹಾಡುಗಳು,ಸಾಲುಗಳು ಹೀಗೆ ಎಷ್ಟೋ ಹೆಸರಿಗೆ ಜೀವವಿಲ್ಲದ ವಸ್ತುಗಳಲ್ಲೂ ಭಾವಗಳನ್ನು ಕಂಡು ಬಿಡುತ್ತೇವೆ. ಅದು ಮನುಷ ಸಹಜ ಗುಣ.ಮನುಷ್ಯ ಎಷ್ಟೇ ಭಾವನಾತ್ಮಕ ನಲ್ಲ ಎಂದರೂ ಗೊತ್ತಿಲ್ಲದೇ ಅವನಲ್ಲಿ ಭಾವಗಳ ಚಿಲುಮೆ ಜೀವಂತ.ಇದು ಕೇವಲ ಮನುಷ್ಯನಿಗಷ್ಟೇ ಹೊರತಾಗಿಲ್ಲ.ಪ್ರಾಣಿ-ಪಕ್ಷಿಗಳು ಅವರ ಭಾವನೆಗಳನ್ನು ಅವರವರದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತವೆ.ತಮ್ಮವರು ಬಂದಾಗ ಪ್ರಾಣಿಗಳು ಮೈ ಸೊಕಿಸುವುದರಲ್ಲೋ,ಕಾಲ ಬಳಿ ಬಂದು ನಿಲ್ಲುವುದರಲ್ಲೋ,ಕೂಗುವುದರಲ್ಲೋ ತಮ್ಮ ಅತ್ಮೀಯತೆಯ ಸೆಳೆತವನ್ನು ತೋರಿಸುತ್ತವೆ.ಇನ್ನು ಪಕ್ಷಿಗಳು ತಮ್ಮ ಕೂಗಿನ ಮೂಲಕ ತಮ್ಮವರ ಕರೆದು ತಮ್ಮಲ್ಲಿನ ಬಾಂಧವ್ಯವನ್ನು ಹೊರಗೆ ತಿಳಿ ಪಡಿಸುತ್ತವೆ.ಒಟ್ಟಿನಲ್ಲಿ ಅವರವರ ಭಾವ ಅವರದೇ ಆದ ರೀತಿ.

ಎನೂ ತಿಳಿಯದ ಹಸುಗೂಸು ಭೂಮಿಗೆ ಬರುತ್ತಿದ್ದಂತೆ ತನ್ನ ತಾಯಿಯನ್ನು ಅರಿತಂತೆ,ಎಲ್ಲೊ ಸಿಕ್ಕ ಜೀವವೊಂದು ನಮ್ಮದಾಗಿ ಮಿಡಿದಂತೆ,ಬರಹಗಾರನಿಗೆ ತಾನು ಬರೆಯುವ ಅಕ್ಷರದಲ್ಲಿ,ಸಂಗೀತಗಾರನಿಗೆ ತನ್ನಲ್ಲಿ ಅರಳುವ ಸ್ವರದಲ್ಲಿ,ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ,ನಾಟ್ಯ ಬಲ್ಲವನಿಗೆ ತನ್ನ ಹೆಜ್ಜೆಗಳಲ್ಲಿ,ಚಾಲಕನಿಗೆ ತನ್ನ ವಾಹನದಲ್ಲಿ,ಚಿತ್ರಕಾರನಿಗೆ ತಾನು ಎಳೆವ ರೇಖೆಗಳಲ್ಲಿ,ಚಾಯಾಚಿತ್ರಗಾರನಿಗೆ ತನ್ನ ಕೈಯಲ್ಲಿ ಕ್ಲಿಕ್ ಅಗುವ ಪ್ರತಿಯೊಂದು ಚಿತ್ರದಲ್ಲಿ,ತೋಟದ ಮಾಲಿಗೆ ಉಸಿರಾದ ತನ್ನ ಗಿಡಗಳಲ್ಲಿ, ಶಿಕ್ಷಕನಿಗೆ ತಾನು ಬೋಧಿಸುವ ಪಾಠಗಳಲ್ಲಿ,ರೈತನಿಗೆ ಬೆವರ ಹರಿಸಿ ತೆಗೆವ ಹಸಿರಿನಲ್ಲಿ ಹೀಗೆ ನಮ್ಮದೆನ್ನುವ ಭಾವ ಸದಾ ಜಾಗ್ರತವಾಗಿರುತ್ತದೆ.ಅದರೊಂದಿಗೆ ಅಪ್ಯಾಯಮಾನವಾದ ಭಾವ ಬೆಳೆದು ಬಿಟ್ಟಿರುತ್ತದೆ.ಕೆಲವೊಮ್ಮೆ ಎನೂ ಅಲ್ಲದಿದ್ದರೂ ಅವರನ್ನು\ಅದನ್ನು ನೋಡಿದ ಘಳಿಗೆ ಮನಸೊಮ್ಮೆ ಮುದಗೊಂಡು ಮೆಲುನಗುವೊಂದು ಮೂಡಿ ಮರೆಯಾದರೆ,ಎಲ್ಲೋ ನೊವುಂಡ ಜನರನ್ನು ಕಂಡ ಕ್ಷಣ ಅರಿವಿಗೆ ಬಾರದಂತೆ ಅಯ್ಯೋ ಎಂದಿರುತ್ತದೆ.ಹೀಗೆ ಭಾವಗಳ ಪರಿಧಿ ಬಹು ದೊಡ್ಡದು.ಕಾಣದೆ ಅನುಭವಕ್ಕೆ ಬರುವಂತದ್ದು.ಭಾವಗಳ ಸಂಕೋಲೆಯಲ್ಲಿ ತೊಳಲಾಡುವ,ಸಂತೋಷದಲ್ಲಿ ತೇಲಾಡುವ ಜೀವನ ನಮ್ಮದು.ಒಟ್ಟಿನಲ್ಲಿ ಜೀವಕ್ಕಿರುವುದು ಭಾವಗಳೆಂಬ ಮೆರುಗು.ಭಾವ ಇದ್ದರೇನೇ ಬದುಕಾಗುವುದು ಸೊಭಗು......



[ಇದು 26 Feb ಕನ್ನಡಪ್ರಭದ ಚುಕ್ಕಿ ಯಲ್ಲಿ ಪ್ರಕಟಿತ ಲೇಖನ.http://www.kannadaprabha.com/pdf/2622011/17.pdf]



ನೀ ಹಿಂಗ ನೋಡ ಬ್ಯಾಡ ನನ್ನ!!!



ಇದು ನಾನು ತುಂಬಾ ದಿನದಿಂದ ನಿನ್ನ ಜೋಡಿ ಕೆಳಬೇಕೆಂದು ಕೊಂಡಿರುವ ಪ್ರಶ್ನೆ.ಮುಂಜಾನಿಎದ್ದು ತಯಾರಿಯಾಗಿ ಕೆಲಸಕ್ಕ ಬರೊ ಅವಸರದಾಗೂ ಗೊತ್ತಿಲ್ಲದ ನನ್ನ ಕಣ್ಣು ನಿನ್ನ ಮೇಲೆ ಬಿದ್ದಿರ್ತದ.ಯಾಕ ಅಂತ ಮಾತ್ರ ನನ್ನ ಕೇಳಬ್ಯಾಡ.ನನ್ನ ಜೋಡಿ ಉತ್ತರನೂ ಇಲ್ಲ. ಅದು ಹಂಗ.ಬದುಕಿನ್ಯಾಗ ಕೆಲವೊಂದಕ್ಕ ಕಾರಣ ಅಂತ ಇರೂದಿಲ್ಲ.ಸುಮ್ನ್ ಯಾವದೋ ಮನಸಿಗೆ ಬಂದು ಕೂತಿರ್ತದ.ತಲಿಗೆ ಹೊಳಿಯೊದರ ಒಳಗ ನಾವು ಅದರಲ್ಲಿ ಬಿದ್ದಾಗಿರ್ತದ.ನಾನು ನಿನ್ನ ಬಗ್ಗ ಆಸಕ್ತಿ ತೋರಿಸಿ ಬಿದ್ದಿದ್ದು ಹಿಂಗೆನ.ನಮ್ಮ ಬಸ್ಸಿನ ಯಾವ ಮೂಲೆಯಲ್ಲಿ ನಾನು ಕುಂತಿದ್ರೂ ನೀನು ನಿಲ್ಲೊ ಜಾಗ ಬರ್ತದ ನೋಡ ಆವಾಗ ಒಮ್ಮೆ ಕಣ್ಣು ನಿನ್ನ ಮೇಲೆ ಹಾದಿರ್ತದ.ಯಾಕ ನೀನು ನನ್ನ ಕಾಡ್ತಿಯ ಅಂತ ಮನಸ್ಸು ಕೇಳಿರ್ತದ.ಹಂಗಂತ ನೀನೆನು ನನ್ನ ಕಲ್ಪನೆಯಲ್ಲಿರುವ ನನ್ನವನಂತನೂ ಇಲ್ಲ.ಮತ್ತ ಮತ್ತ ನೋಡೋವಷ್ಟು ಚಂದನೂ ಇಲ್ಲ ಬಿಡ.

ಈ ಕೂತುಹಲ ನಂಗ ನೀನು ಬಂದು ನಿಲ್ಲಲು ಶುರುಮಾಡಿದಾಗಿನಿಂದ ನನ್ನ ತಲೆಯೊಳಗ ಇತ್ತ.ದಿನಾ ಒಂದೊಂದು ಚೊಲೊ ಅರಿವಿಯಲ್ಲಿ ಮಿಂಚತಾ ಇದ್ರ ನಾನ್ ಕಣ್ಣು ತೆಗೆಯೊದು ಆದ್ರು ಹೆಂಗ ಹೇಳು?!ಯಾರೂ ನಿನ್ನ ನೊಡ್ತಿದ್ರೊ ಇಲ್ಲೋ ನಾನ್ ಮಾತ್ರ ನಿನ್ನ ನೋಡೊದ್ ಬಿಟ್ಟಿರಲಿಲ್ಲ.ನನ್ ಕಣ್ಣಿಗ ನೀ ಕಾಣೊ ಮಟ ನನ್ನ ದ್ರಷ್ಟಿ ಇರ್ತಿದ್ದು ನಿನ್ನ ಮ್ಯಾಲ.ಎನೇ ಹೆಳ ನಿನ್ನ ಚಂದ ದಿನ ಹೊದಾಂಗ ಹುಣ್ಣಿಮೆ ಚಂದ್ರ ಬೆಳಿತಾನಲ್ಲ ಹಂಗ ಬೆಳಿತಾನೇ ಹೊಗ್ತಿದ.ಮೊದ ಮೊದಲು ನೀನಾರು,ಯಾಕ ನನ್ನ ನೊಡ್ತಿ ಅಂತ ಅನಿಸ್ತಿತ್ತು.ಒಮ್ಮೊಮ್ಮೆ ಬಸ್ಸಿನಿಂದ ಇಳಿದು ನಿನ್ನ ಕೂಡ ನಾನು ಕೇಳಿಯೇ ಬಿಡೊಣು ಅಂತ ಅನಿಸ್ತಿತ್ತು.ಅದ್ರ ನಿನ್ನ ಸುತ್ತ ಮುತ್ತ ಅಷ್ಟೋಂದು ಜನ ಇರೊದು ನೋಡಿ ನಂಗ ನಾಚಿಕೆಯಾಗಿ ಬೇಡ ಬಿಡು, ಮುಂದೆ ತಿಳಿದೇ ತಿಳಿತದ ಅಂತ ಸುಮ್ಮನಾಗಿದ್ದೆ ನಾನು ಗೊತ್ತೇನು?!.ಅದೂ ಅಲ್ದ ಈ ಹುಡುಗಿಗೆ ಯಾಕ ಇವನ ಮ್ಯಾಲ ಇಷ್ಟೊಂದು ಅಕ್ಕರೆ ಅಂತ ಒಡಾಡೊ ಜನ ನನ್ನ ನೋಡಿ ತಪ್ಪು ತಿಳಿದ್ರ ಅಂತ ಭಯ ಕೂಡ ಇತ್ತು.ಆದ್ರು ನನ್ನ ಗೆಳತಿ ಜೋಡಿ ನಿನ್ನ ಬಗ್ಗೆ ಪ್ರಶ್ನೆ ಕೇಳೊದು ಮಾತ್ರ ತಪ್ಪಿರಲಿಲ್ಲ.ಅವಳಿಗೂ ಎನು ಗೊತ್ತಿರ್ತದ ನಿನ್ನ ಬಗ್ಗೆ? ಪಾಪ ನಮ್ಮಿಬ್ಬರ ಕಲ್ಪನೆಗೂ ನೀನು ಸಿಕ್ಕಿರಲಿಲ್ಲ. ಎಲ್ಲರಂತೆ ನೀನು ಒಬ್ಬವ ಅಂತ ಒಪ್ಪಿಕೊಳ್ಳೊಕು ನಾನು ತಯಾರಿ ಇರಲಿಲ್ಲ.ದಿನಾ ನಾನು ಜಲದಿ ಬರಲಿ, ತಡಾ ಮಾಡಲಿ ನೀನು ನನ್ನ ಕಣ್ಣಿಗೆ ಬಿಳದೇ ಹೊಗ್ತಿರಲಿಲ್ಲ. ಕೆಲಸದ ಮಧ್ಯ ನಂಗ ನೀನು ನೆನಪಾಗಿದ್ದು ನೆನಪಿಲ್ಲ ಬಿಡು.ಮತ್ತ ಸಂಜಿ ಕೂಡ ನಾನು ಬರೋ ಮೊದ್ಲ ನೀನು ಅದೇ ದಾರಿಲಿ,ಅದೇ ಜಾಗದಲ್ಲಿ ನಂಗ ಕಾಯ್ತಿದ್ರ ಮತ್ತ ನನ್ನ ಕಳ್ಳ ನೋಟ ನಿನ್ನ ಮೇಲ.ಮತ್ತೆ ನನ್ನ ಬುದ್ದಿಯಲ್ಲಿ ಮತ್ತೆ ಶುರುವಾಗುತ್ತಿದ್ದ ತರ್ಕ.ನೀನಾರು?

ಕೊನೆಗೂ ನಿಂಗ ನನ್ನ ಮೇಲೆ ಕನಿಕರ ಬಂತು ಅಂತ ಕಾಣ್ತದ.ನಾನು ಕೇಳೋ ಮೊದಲ ನೀನು ನೀನಾರೆಂಬ ನನ್ನ ಪ್ರಶ್ನೆಗೆ ಉತ್ತರ ಹೇಳಿ ಬಿಟ್ಟಿದ್ದಿ.ನನ್ನ ಚಡಪಡಿಕೆಗೆ ಉತ್ತರ ಸಿಕ್ಕಿತ್ತ.ಅವತ್ತೊಂದು ದಿನ ಬೆಳಗ್ಗೆ ನಾನು ನಿನ್ನ ನೋಡುವಾಗ ಕೆಂಪು ಬಣ್ಣದ ಅಂಗಿಯಲ್ಲಿ ನಿಂತಿದ್ದಿ.ದಿನಾ ಕಾಯುವ ನನ್ನ ಕಣ್ಣುಗಳಲ್ಲಿ ಒಮ್ಮೆಲೆ ಖುಷಿ ತುಂಬಿತ್ತು.ನಿನ್ನೊಂದಿಗಿದ್ದವರು,ನಿನ್ನ ಸುತ್ತ ಮುತ್ತ ಸದಾ ಅವಸರದಿಂದ ಓಡಾಡುತ್ತ ಬೆವರ ಹರಿಸುತ್ತಿದ್ದವರು ನಿಂಗೊಂದು ಹೆಸರ ಕೊಟ್ಟಿದ್ದರು."ಬೆಂಗಳೂರ್ ಸೆಂಟ್ರಲ್" ಅಂತ.ನಾನು ಒಮ್ಮೆಲೆ ನನ್ನ ಗೆಳತಿಯ ಕಡೆ ತಿರುಗಿ ಕಣ್ಣು ಹೊಡೆದಿದ್ದೆ.ಅವಳು ನನ್ನ ಮನ ಬಲ್ಲವಳಂತೆ ತಲೆಯಾಡಿಸಿದ್ದಳು.ಆದರೂ ನಂಗ ನಿನ್ನ ಮೇಲೆ ನೀನು ನನ್ನ ಅಷ್ಟುದಿನ ಕಾಡಿಸಿದ್ದಕ್ಕ,ತಲೆಯಲ್ಲಿ ಕೊರೆಯುವ ಸಮಸ್ಯೆಯಾಗಿ ಉಳಿದಿದ್ದಕ್ಕ ಕೋಪ ಐತಿ.ಭಾಳ ದಿನ ಇಲ್ಲ ಬಿಡ.ಒಮ್ಮೆ ಬರಾಕ ಹತ್ತಿನಿ.ನಿನ್ನ ಸಮೀಪದಾಗ ಕಂಡು ಭೇಟಿ ಮಾಡ್ಕೊಂಡ ಹೋಗಾಕಿ.ಎನೇ ಹೇಳ ನೀನು ನನ್ನ ಹಂಗ ನೋಡ್ತಿದ್ದು ತಪ್ಪಲ್ವ????!!!!!!!!


( ಗಂಭೀರ ವಿಚಾರಗಳ ಬಗ್ಗೆ ಬರೆಯುವದನ್ನು ಬಿಟ್ಟು ಈ ಭಾರಿ ವಿಭಿನ್ನ ಲೇಖನ ವನ್ನು ನೀಡುವ ಪ್ರಯತ್ನ. ಓದುಗ ಮಿತ್ರರ ಕೋರಿಕೆಯ ಮೇಲೆ ಉತ್ತರ ಕರ್ನಾಟಕ ಭಾಷೆಯ ಉಪಯೋಗ ನನಗೆ ತಿಳಿದ ಮಟ್ಟಿಗೆ ಮಾಡಿದ್ದೇನೆ.ತಪ್ಪಿದ್ದರೆ ಕ್ಷಮಿಸಿ.ಈ ಲೇಖನ ಸರ್ಜಾಪುರ ರೋಡ್ ನಲ್ಲಿ ತಲೆ ಎತ್ತಿ ನಿಲ್ಲುತ್ತಿರುವ ಬೆಂಗಳೂರು ಸೆಂಟ್ರಲ್ ಬಗ್ಗೆ ಬರೆದಿದ್ದು..) 

ಬದುಕೆಂದರೆ...??!!!

ಬದುಕು... ಮೂರಕ್ಷರದಲಿ ಅಡಗಿದೆ ಸುಖ,ದುಃಖ, ನೋವು,ನಲಿವು,ಹೋರಾಟ,ಬವಣೆ,ಆಸೆ,ನಿರಾಸೆ,ಮೋಹ,ಪಾಶ,ಪ್ರೀತಿ,ಕನಸು,ನನಸು ಎಲ್ಲಾ..ಅಕ್ಷರ ಮೂರೇ ಆದರು ಇದರ ಮರ್ಮವ ಬಲ್ಲರು ಯಾರು ಇಲ್ಲ..ಇದೊಂದು ಸುಂದರ, ಆಳವಾದ ಸಮುದ್ರದ ಮೇಲಿನ ಯಾನ. ಕೆಲವೊಬ್ಬರಿಗೆ ಇದು ಸುಂದರ ಅಲೆಗಳನ್ನೇ ಹೊತ್ತು ತಂದರೆ, ಇನ್ನೊಬ್ಬರಿಗೆ ದಾಟಲಾರದ ಸುಳಿಯ ಭಯಂಕರ ಕಡಲು..ಇದೊಂದು ಸ್ವಯ೦ ಕ್ರತ ಪಾಠಶಾಲೆ..ಇಲ್ಲಿ ವಿಧಿಯೇ ಗುರು.ಅನುಭವವೇ ಪಾಠ.ಆಯಸ್ಸಿನ ಪ್ರತಿಯೊಂದು ವರ್ಷಗಳು ಬೆಳವಣಿಗೆಯ,ಜ್ಞಾನದ ಇಯತ್ತೆಗಳು..ಇಲ್ಲಿ ಸೋತು ಫ್ಹೇಲ್ ಆಗುವ, ಗೆದ್ದು ಪಾಸಾಗುವ ಪರಿಯು ಇದೆ.ನಮ್ಮ ಫಲಿತಾಂಶಕ್ಕೆ ನಾವೇ ಕಾರಣರು.ನಮ್ಮ ಪ್ರಗತಿಗೆ ನಾವೇ ರೂವಾರಿಗಳು..ಬದುಕಿನ ಬಗ್ಗೆ ಬರೆಯಲು ನಾನಿನ್ನು ಚಿಕ್ಕವಳು...ಇನ್ನು ಇದರ ಉದ್ದಗಲವನ್ನು ಅಳೆಯುತ್ತಿರುವವಳು..ಆದರೆ ಬದುಕು ಎಂದರೇ, ಹೀಗೆಯೇ ಇದ್ದರೇ ಚೆನ್ನ ಎಂದು ತುಂಬಾ ಪುಸ್ತಕದಲ್ಲಿ ಓದಿದ್ದೇನೆ..ಹಲವರಿಂದ ಕೇಳಿದ್ದೇನೆ...ಕೆಲವೊಬ್ಬರು ಬದುಕನ್ನು ದೂರದ ಯಾನಕ್ಕೆ ಹೋಲಿಸಿದರೆ, ಮತ್ತೊಬ್ಬರು ಅಗೆಯುವ ಭೂಮಿಗೆ ಹೋಲಿಸುತ್ತಾರೆ..ದೂರದ ಯಾನದಲ್ಲಿ, ಮಾಡುವ ಪಯಣದಲ್ಲಿ ಸಿಗುವ ಹಲವಾರು ನಿಲ್ದಾಣಗಳ ಸಂಗಮವೇ ಬದುಕೆಂದರೆ, ಅಗೆಯುತ್ತ ಹೋದಂತೆ ಕಲ್ಪಿಸಿಕೊಳ್ಳಲಾಗದ ಆಶ್ಚರ್ಯ,ತಿರುವು ಗಳ ಸಂತೆ ಈ ಜೀವನ.ಇಲ್ಲಿ ಯಾರು ಶಾಶ್ವತವಲ್ಲ,ಯಾವದು ಊಹೆಗೆ ನಿಲುಕಿದ್ದಲ್ಲ.ಪ್ರಯತ್ನ ಮಾತ್ರ ಪಡೆಯಲು,ಉಳಿವಿಗಾಗಿ ಹೋರಾಡಲು ನಿರಂತರ.ಈ ಕಟ್ಟಡದ ಅಡಿಪಾಯದಿಂದ ಹಿಡಿದು ಇದರ ಭವಿಷತ್ತಿನ ಮಹಡಿಯ ನಿರ್ಮಾಣದ ತುದಿಯವರೆಗಿನ ಶಿಲ್ಪಿಗಳು ಅವರವರೆ.ಇಲ್ಲಿ ಸಮಯಕ್ಕಾಗಿ ಪರದಾಟ,ಸ್ವಾರ್ಥಕ್ಕಾಗಿ ಹೊಡೆದಾಟ,ತಮ್ಮದೆನ್ನುವುದಕ್ಕೆ ಜಗ್ಗಾಟ,ತಮ್ಮ ಕಾಯಕದ ಫಲ ಅನುಭವಿಸಲು ಒದ್ದಾಟ,ತಮ್ಮ ಇರುವಿಕೆಯ ಹಂಗಿಗಾಗಿ ಕಸಿದು ಕೊಳ್ಳುವ ಇನ್ನೊಬ್ಬರ ಊಟ,ಕೊಂದಾದರು ಸರಿಯೇ ತಾನು ಬದುಕ ಬೇಕೆಂಬ ಹಠ ಹೀಗೆ ವಿಧಿಯ ದೊಂಬರಾಟದ ಪಾತ್ರಧಾರಿಗಳು ನಾವು.  

ನನ್ನ ಸುತ್ತಮುತ್ತಲಿನ ಕೆಲವೊಂದಿಷ್ಟು ಜನರ ಬಗ್ಗೆ ,ಅವರ ಮಾತಿನ ಬಗ್ಗೆ ಆಶ್ಚರ್ಯವಾಗುತ್ತದೆ ನನಗೆ.ನಾನು ನನ್ನ ಅನುಭವದಲ್ಲಿ ನೋಡಿರುವದು ನನ್ನ ಒರಿಗೆಯವರನ್ನು,ನನ್ನ ಜೀವನ ಶೈಲಿಯಲ್ಲೇ ಇರುವವರನ್ನು..ಇಲ್ಲಿ ಸಮಯವಿಲ್ಲ,ಒಂದು ಆತ್ಮೀಯತೆಯ ಭಾವವಿಲ್ಲ.ಬರಿ ದುಡ್ಡು,ದುಡ್ಡು.[ನಾನು ಯಾರೊಬ್ಬರ ಬಗ್ಗೆ ಹೇಳುತ್ತಿಲ್ಲ.ನನ್ನ ಉದ್ಯೋಗದಲ್ಲೇ ಇರುವವರ ಸಾಮಾನ್ಯ ಲಕ್ಷಣದ ಬಗ್ಗೆ ಅಷ್ಟೇ.ಇಲ್ಲೂ ಗೆದ್ದವರಿದ್ದಾರೆ.ಹೊರತಾದವರಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ].Dude i don't have time man! Only Tension. I cant complete it, I cant bear this tension.I am waiting for weekend.I want to get out from this.You are lucky da (ಬೇರೆ domain,ಕ್ಷೇತ್ರ ದಲ್ಲಿರುವವರನ್ನು ನೋಡಿ)ಎನ್ನುವುದು ಕೆಲವೊಂದಿಷ್ಟಾದರೆ, Which mall is for this weekend?,I am waiting for the month salary, Credit card is there Know? Don't worry ಹೀಗೆ ಇದು ನಾನು ಕೇಳಿದ್ದು,ನೋಡಿದ್ದು.ಇದೆಲ್ಲ ಬಯಸಿದ್ದು,ಪಡೆದಿದ್ದು ನಮ್ಮ ಇಚ್ಹೆಯಿಂದಲೇ ತಾನೇ.ಮತ್ತೇಕೆ ವ್ಯಥಾ ಚಿಂತೆ.ಕಾಲಹರಣದ ಕನವರಿಕೆ.ಇರುವುದೆಲ್ಲವ ಬಿಟ್ಟು ಜೀವ ಇನ್ಯಾವದಕ್ಕೋ ಜೀವ ತುಡಿಯುವುದು ಏಕೋ? ಈ ಸಮಯದಲ್ಲಿ ನಾನು ಓದಿದ ಒಂದು ಬರಹ ನೆನಪಾಗುತ್ತಿದೆ..

ಒಂದು ಬಾರಿ ಒಳ್ಳೆಯ ಹುದ್ದೆ ಸೇರಿ, ಜೀವನ ನಡೆಸುತ್ತಿರುವ ಗೆಳೆಯರೆಲ್ಲ ತಮ್ಮ ಗುರುಗಳನ್ನು ಭೇಟಿಯಾದರು.ಮಾತನಾಡುತ್ತ,ತಮ್ಮ ಸ್ಥಾನ ಮಾನ,ತಮ್ಮ ಕೆಲಸ, ತಾವು ಅನುಭವಿಸುತ್ತಿರುವ ಒತ್ತಡ,ಸಮಯದ ಅಭಾವ ಹೀಗೆ ತಮ್ಮ ಕಷ್ಟ,ಸುಖ ವನ್ನು ತಮ್ಮ ನೆಚ್ಚಿನ ಗುರುಗಳ ಮುಂದೆ ಹಂಚಿಕೊಳ್ಳತೊಡಗಿದರು.ಮಾತಿನ ಮಧ್ಯ  ಗುರುಗಳು ಕುಡಿಯಲು ಕಾಫಿಯನ್ನು,ಮತ್ತು ಬೆಲೆಬಾಳುವ ಹಾಗು ಸಾಮಾನ್ಯ ಕಪ್ ಸಾಸರ್,ಗಳನ್ನೂತಂದಿತ್ತರು. ತಮ್ಮ ಶಿಷ್ಯರಿಗೆ ಕಾಫಿ ತೆಗೆದುಕೊಳ್ಳಲು ಹೇಳಿ ನೋಡುತ್ತಾ ಕುಳಿತರು.ಎಲ್ಲರೂ ಕಾಫಿಯನ್ನು ಬೆಲೆಬಾಳುವ ಕಪ್ ಸಾಸರ್ ಗಲ್ಲಿ ತೆಗೆದು ಕೊಂಡರು.ಮತ್ತೆ ತಮ್ಮ ಮಾತುಕತೆಯನ್ನು ಮುಂದುವರೆಸಿದರು.ಇದನ್ನು ಗಮನಿಸುತ್ತಿದ್ದ ಗುರುಗಳು ಶಿಷ್ಯರನ್ನು ಕುರಿತು "ನಿಮ್ಮೆಲ್ಲ ಸಮಸ್ಯೆಗಳು ಏನೆಂದು ನನಗೆ ಈಗ ಅರಿವಾಯಿತು.ನಿಮಗೆ ನಾನು ಕಾಫಿ ತೆಗೆದುಕೊಳಲು ಹೇಳಿದಾಗ ನೀವು ಬೆಲೆಬಾಳುವ ಕಪ್ ತೆಗೆದು ಕೊಂಡಿರೆ ಹೊರತು ಸಾಮಾನ್ಯವಾದುದನ್ನು ನಿರ್ಲಕ್ಷಿಸಿದಿರಿ.ನಿಮ್ಮ ಅರಿವಲ್ಲಿ ಕೊರತೆ ಇರುವುದು ಇಲ್ಲೇ!.ನೀವು ಕಪ್ ಗೆ ಬೆಲೆಕೊಟ್ಟಿರೆ ಹೊರತು ಕುಡಿಯುವ ಕಾಫಿಗಲ್ಲ.ಕಪ್ ಎನ್ನುವುದು ಕಾಫಿಯನ್ನು ಹಿಡಿದಿಟ್ಟು ಕೊಳ್ಳುವ ಸಾಧನವೇ ಹೊರತು ಮತ್ತೇನು ಅಲ್ಲ.ಇಲ್ಲಿ ಪ್ರಾಮುಖ್ಯತೆ ಇರುವುದು ಕುಡಿಯುವ ಕಾಫಿಗೆ ಹೊರತು ಕಪ್ ಗಲ್ಲ.ಜೀವನವು ಇಷ್ಟೇ.ಇಲ್ಲಿ ಯಾವುದಕ್ಕೆ ಬೆಲೆ, ಯಾವುದಕ್ಕಲ್ಲ ಎನ್ನುವುದು ನಿಮಗೆ ತಿಳಿದಿದ್ದರೆ ನಿಮಗೆ ಈ ಸಮಸ್ಯೆ ಇರುತ್ತಿರಲಿಲ್ಲ.ಬೆಡಗಿನ ಬದುಕಿಗಿಂತ ಮಾನವತೆಯ ಮೌಲ್ಯ ದೊಡ್ಡದು" ಎಂದರು.

ಎಂತಹ ಅದ್ಭುತವಾದ ಮಾತುಗಳು.ಹೌದು ನಮ್ಮ ಗೊಣಗಾಟಕ್ಕೆ ನಾವೇ ಹೊಣೆ.ಫಲವು ಸಿಹಿಯೋ,ಕಹಿಯೋ ಅದಕ್ಕೆ ನೀರೆರೆದವರು ನಾವೇ.ಒಳ್ಳೆಯದೋ,ಕೆಟ್ಟದ್ದೋ ಅದು ನಮ್ಮದೇ.ಅದನ್ನು ನಾವು ಸ್ವಾಗತಿಸಲೇ ಬೇಕು.ಇರುವುದರಲ್ಲೇ ನೆಮ್ಮದಿ,ಸಾರ್ಥಕತೆಯನ್ನು ಹುಡುಕ ಬೇಕು.ಒಬ್ಬ ಎಷ್ಟು ವರ್ಷ ಬದುಕಿದ ಎಂಬುದು ಇಲ್ಲಿ ಮುಖ್ಯವಲ್ಲ.ಹೇಗೆ ಬದುಕಿದ ಎನ್ನುವುದೇ ಮಾನದಂಡವಾಗುತ್ತದೆ.ಮೂರು ದಿನದ ಬಾಳಾದರೂ ನೂರು ಮಂದಿ ನೆನೆಯುವಂತೆ ಬದುಕಿದ್ದರೆ ಅದು ಸಾರ್ಥಕ.ಪ್ರೀತಿ,ಕ್ರತಜ್ನತೆ,ಸಹಾಯ,ಅನುಕಂಪ,ಮಿಡಿಯುವ ಮನಸ್ಸು ಇಲ್ಲಿ  ಗೆಲ್ಲುತ್ತದೆಯೇ  ಹೊರತು ದ್ವೇಷ,ಅಸೂಯೆ,ಸುಲಿಗೆ ಅನಾಚಾರಕ್ಕೆ ಇಲ್ಲಿ ನೆಲೆಯಿಲ್ಲ.ರೂವಾರಿಯ ಕೈಯಲ್ಲಿ ಅಡಗಿದೆ ಕಟ್ಟಡದ ಸುಂದರತೆ. ಬೆಲೆಕೊಡುವ ಮನಸಲ್ಲಿ ಅಡಗಿದೆ ಬದುಕಿನ ಭಾಂದವ್ಯತೆ.ಪ್ರತಿಯೊಬ್ಬರಲ್ಲೂ ಬೆಳೆಯಲಿ ವೈಚಾರಿಕತೆ, ಮೂಡಲಿ ಎಲ್ಲರಲು ಸಮರಸದ ಸಾಮ್ಯತೆ ಎನ್ನುತ್ತಾ ಮತ್ತೊಮ್ಮೆ ಆಶಿಸುತ್ತೇನೆ.ಗೊತ್ತಿರಲಿ ನಿಮಗೆ ಇಲ್ಲಿ ನಿಮ್ಮ ಗಮನ ಇರಬೇಕಾಗಿದ್ದು ಕುಡಿಯ ಬೇಕಾದ ಕಫಿಗೋ?? ಇಲ್ಲ ಕಪ್ ಸಾಸರ್ ಗೋ ??  ಮತ್ತೊಮ್ಮೆ ಮಗದೊಂದು ಬರಹದೊಂದಿಗೆ ವಾಪಾಸ್ಸಾಗುತ್ತೇನೆ.......


ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು..
ಎಲ್ಲೂ ಬೆಲ್ಲದ ಪರಿ,ನಿಮ್ಮಲ್ಲಿ ಒಳ್ಳೇ ಮಾತುಗಳನ್ನು ಮೂಡಿಸಲಿ... 

ನಲ್ಲೆ..

ಮುಂಜಾನೆಯ ಸೂರ್ಯನ ಕಿರಣಗಳು ಭುವಿಯ
ಬಂದು ಚುಂಬಿಸಿ ರಮಿಸುಂತೆ,
ನಲ್ಲೆಯ ಕೆನ್ನೆಗಿತ್ತ ಮುದ್ದಾದ ಮುತ್ತೊಂದು
ಇಬ್ಬನಿ ಕರಗುವ ಪರಿಯಲ್ಲಿ ಅವಳ
ಕೋಪವ ಕರಗಿಸಿತ್ತು......

ಬಿಸಿಲ ಝಳದಲ್ಲಿ ಕಾದು
ಬೇಯುವ ಧರೆಯಂತೆ,
ವಿರಹ ಬೇಗುದಿಯಲ್ಲಿ ಮನ ಬೆಂದಿತ್ತು....

ಬಿದ್ದ ಕಿರಣಗಳಿಗೆ ಸೋತು ಮೈದುಂಬಿ
ಅರಳುವ ಹೂವುಗಳ ಸಾಲೊಂದು,
ಅವಳಲ್ಲಿ ಬಯಕೆಯ,ಕೋರಿಕೆಯ
ಪರಿಮಳವ ಪಸರಿಸಿತ್ತು.....

ಬೆಳಗಿನ ಸೊಭಗಲ್ಲಿ ಹಾರುವ
ಹಕ್ಕಿಗಳ ಹಿಂಡೊಂದು,
ಅವಳ ಕನಸಿನ ಸಂತೆಯ
ಸಾಲನ್ನು ನೆನಪಿಸಿತ್ತು.....

ಪಡುವಣ ಬಾನಿನ ಅಂಚಿಗೆ
ಜಾರುತ್ತ ರವಿ ಸರಿದು ಚೆಲ್ಲುವ ಕೆಂಪಿನಂತೆ,
ಮುತ್ತಿನ ಮತ್ತಿಗೆ,ಅನುರಾಗದ ತುತ್ತಿಗೆ
ಅವಳ ಕೆನ್ನೆಯು ರಂಗೇರಿತ್ತು.....

ಬೆಳದಿಂಗಳ ರಾತ್ರಿ ತಂಪನ್ನು
ಹೊತ್ತು ಬಂದ ಚಂದಿರನ ಹೊಳಪಲ್ಲಿ,
ಇಳೆಯ ಚಂದ್ರಮುಖಿಯ ಹೊಂಬಣ್ಣದ
ಕಾಂತಿಯು ನಾಚಿ ನೀರಾಗಿ ಶರಣಾಗಿತ್ತು......

[ekanasu.com ನಲ್ಲಿ ಪ್ರಕಟಗೊಂಡ  ನನ್ನ ಮೊದಲ ಕವನ..
http://www.ekanasu.com/search/label/%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF]