ಬದುಕು... ಮೂರಕ್ಷರದಲಿ ಅಡಗಿದೆ ಸುಖ,ದುಃಖ, ನೋವು,ನಲಿವು,ಹೋರಾಟ,ಬವಣೆ,ಆಸೆ,ನಿರಾಸೆ,ಮೋಹ,ಪಾಶ,ಪ್ರೀತಿ,ಕನಸು,ನನಸು ಎಲ್ಲಾ..ಅಕ್ಷರ ಮೂರೇ ಆದರು ಇದರ ಮರ್ಮವ ಬಲ್ಲರು ಯಾರು ಇಲ್ಲ..ಇದೊಂದು ಸುಂದರ, ಆಳವಾದ ಸಮುದ್ರದ ಮೇಲಿನ ಯಾನ. ಕೆಲವೊಬ್ಬರಿಗೆ ಇದು ಸುಂದರ ಅಲೆಗಳನ್ನೇ ಹೊತ್ತು ತಂದರೆ, ಇನ್ನೊಬ್ಬರಿಗೆ ದಾಟಲಾರದ ಸುಳಿಯ ಭಯಂಕರ ಕಡಲು..ಇದೊಂದು ಸ್ವಯ೦ ಕ್ರತ ಪಾಠಶಾಲೆ..ಇಲ್ಲಿ ವಿಧಿಯೇ ಗುರು.ಅನುಭವವೇ ಪಾಠ.ಆಯಸ್ಸಿನ ಪ್ರತಿಯೊಂದು ವರ್ಷಗಳು ಬೆಳವಣಿಗೆಯ,ಜ್ಞಾನದ ಇಯತ್ತೆಗಳು..ಇಲ್ಲಿ ಸೋತು ಫ್ಹೇಲ್ ಆಗುವ, ಗೆದ್ದು ಪಾಸಾಗುವ ಪರಿಯು ಇದೆ.ನಮ್ಮ ಫಲಿತಾಂಶಕ್ಕೆ ನಾವೇ ಕಾರಣರು.ನಮ್ಮ ಪ್ರಗತಿಗೆ ನಾವೇ ರೂವಾರಿಗಳು..ಬದುಕಿನ ಬಗ್ಗೆ ಬರೆಯಲು ನಾನಿನ್ನು ಚಿಕ್ಕವಳು...ಇನ್ನು ಇದರ ಉದ್ದಗಲವನ್ನು ಅಳೆಯುತ್ತಿರುವವಳು..ಆದರೆ ಬದುಕು ಎಂದರೇ, ಹೀಗೆಯೇ ಇದ್ದರೇ ಚೆನ್ನ ಎಂದು ತುಂಬಾ ಪುಸ್ತಕದಲ್ಲಿ ಓದಿದ್ದೇನೆ..ಹಲವರಿಂದ ಕೇಳಿದ್ದೇನೆ...ಕೆಲವೊಬ್ಬರು ಬದುಕನ್ನು ದೂರದ ಯಾನಕ್ಕೆ ಹೋಲಿಸಿದರೆ, ಮತ್ತೊಬ್ಬರು ಅಗೆಯುವ ಭೂಮಿಗೆ ಹೋಲಿಸುತ್ತಾರೆ..ದೂರದ ಯಾನದಲ್ಲಿ, ಮಾಡುವ ಪಯಣದಲ್ಲಿ ಸಿಗುವ ಹಲವಾರು ನಿಲ್ದಾಣಗಳ ಸಂಗಮವೇ ಬದುಕೆಂದರೆ, ಅಗೆಯುತ್ತ ಹೋದಂತೆ ಕಲ್ಪಿಸಿಕೊಳ್ಳಲಾಗದ ಆಶ್ಚರ್ಯ,ತಿರುವು ಗಳ ಸಂತೆ ಈ ಜೀವನ.ಇಲ್ಲಿ ಯಾರು ಶಾಶ್ವತವಲ್ಲ,ಯಾವದು ಊಹೆಗೆ ನಿಲುಕಿದ್ದಲ್ಲ.ಪ್ರಯತ್ನ ಮಾತ್ರ ಪಡೆಯಲು,ಉಳಿವಿಗಾಗಿ ಹೋರಾಡಲು ನಿರಂತರ.ಈ ಕಟ್ಟಡದ ಅಡಿಪಾಯದಿಂದ ಹಿಡಿದು ಇದರ ಭವಿಷತ್ತಿನ ಮಹಡಿಯ ನಿರ್ಮಾಣದ ತುದಿಯವರೆಗಿನ ಶಿಲ್ಪಿಗಳು ಅವರವರೆ.ಇಲ್ಲಿ ಸಮಯಕ್ಕಾಗಿ ಪರದಾಟ,ಸ್ವಾರ್ಥಕ್ಕಾಗಿ ಹೊಡೆದಾಟ,ತಮ್ಮದೆನ್ನುವುದಕ್ಕೆ ಜಗ್ಗಾಟ,ತಮ್ಮ ಕಾಯಕದ ಫಲ ಅನುಭವಿಸಲು ಒದ್ದಾಟ,ತಮ್ಮ ಇರುವಿಕೆಯ ಹಂಗಿಗಾಗಿ ಕಸಿದು ಕೊಳ್ಳುವ ಇನ್ನೊಬ್ಬರ ಊಟ,ಕೊಂದಾದರು ಸರಿಯೇ ತಾನು ಬದುಕ ಬೇಕೆಂಬ ಹಠ ಹೀಗೆ ವಿಧಿಯ ದೊಂಬರಾಟದ ಪಾತ್ರಧಾರಿಗಳು ನಾವು.
ನನ್ನ ಸುತ್ತಮುತ್ತಲಿನ ಕೆಲವೊಂದಿಷ್ಟು ಜನರ ಬಗ್ಗೆ ,ಅವರ ಮಾತಿನ ಬಗ್ಗೆ ಆಶ್ಚರ್ಯವಾಗುತ್ತದೆ ನನಗೆ.ನಾನು ನನ್ನ ಅನುಭವದಲ್ಲಿ ನೋಡಿರುವದು ನನ್ನ ಒರಿಗೆಯವರನ್ನು,ನನ್ನ ಜೀವನ ಶೈಲಿಯಲ್ಲೇ ಇರುವವರನ್ನು..ಇಲ್ಲಿ ಸಮಯವಿಲ್ಲ,ಒಂದು ಆತ್ಮೀಯತೆಯ ಭಾವವಿಲ್ಲ.ಬರಿ ದುಡ್ಡು,ದುಡ್ಡು.[ನಾನು ಯಾರೊಬ್ಬರ ಬಗ್ಗೆ ಹೇಳುತ್ತಿಲ್ಲ.ನನ್ನ ಉದ್ಯೋಗದಲ್ಲೇ ಇರುವವರ ಸಾಮಾನ್ಯ ಲಕ್ಷಣದ ಬಗ್ಗೆ ಅಷ್ಟೇ.ಇಲ್ಲೂ ಗೆದ್ದವರಿದ್ದಾರೆ.ಹೊರತಾದವರಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ].Dude i don't have time man! Only Tension. I cant complete it, I cant bear this tension.I am waiting for weekend.I want to get out from this.You are lucky da (ಬೇರೆ domain,ಕ್ಷೇತ್ರ ದಲ್ಲಿರುವವರನ್ನು ನೋಡಿ)ಎನ್ನುವುದು ಕೆಲವೊಂದಿಷ್ಟಾದರೆ, Which mall is for this weekend?,I am waiting for the month salary, Credit card is there Know? Don't worry ಹೀಗೆ ಇದು ನಾನು ಕೇಳಿದ್ದು,ನೋಡಿದ್ದು.ಇದೆಲ್ಲ ಬಯಸಿದ್ದು,ಪಡೆದಿದ್ದು ನಮ್ಮ ಇಚ್ಹೆಯಿಂದಲೇ ತಾನೇ.ಮತ್ತೇಕೆ ವ್ಯಥಾ ಚಿಂತೆ.ಕಾಲಹರಣದ ಕನವರಿಕೆ.ಇರುವುದೆಲ್ಲವ ಬಿಟ್ಟು ಜೀವ ಇನ್ಯಾವದಕ್ಕೋ ಜೀವ ತುಡಿಯುವುದು ಏಕೋ? ಈ ಸಮಯದಲ್ಲಿ ನಾನು ಓದಿದ ಒಂದು ಬರಹ ನೆನಪಾಗುತ್ತಿದೆ..
ಒಂದು ಬಾರಿ ಒಳ್ಳೆಯ ಹುದ್ದೆ ಸೇರಿ, ಜೀವನ ನಡೆಸುತ್ತಿರುವ ಗೆಳೆಯರೆಲ್ಲ ತಮ್ಮ ಗುರುಗಳನ್ನು ಭೇಟಿಯಾದರು.ಮಾತನಾಡುತ್ತ,ತಮ್ಮ ಸ್ಥಾನ ಮಾನ,ತಮ್ಮ ಕೆಲಸ, ತಾವು ಅನುಭವಿಸುತ್ತಿರುವ ಒತ್ತಡ,ಸಮಯದ ಅಭಾವ ಹೀಗೆ ತಮ್ಮ ಕಷ್ಟ,ಸುಖ ವನ್ನು ತಮ್ಮ ನೆಚ್ಚಿನ ಗುರುಗಳ ಮುಂದೆ ಹಂಚಿಕೊಳ್ಳತೊಡಗಿದರು.ಮಾತಿನ ಮಧ್ಯ ಗುರುಗಳು ಕುಡಿಯಲು ಕಾಫಿಯನ್ನು,ಮತ್ತು ಬೆಲೆಬಾಳುವ ಹಾಗು ಸಾಮಾನ್ಯ ಕಪ್ ಸಾಸರ್,ಗಳನ್ನೂತಂದಿತ್ತರು. ತಮ್ಮ ಶಿಷ್ಯರಿಗೆ ಕಾಫಿ ತೆಗೆದುಕೊಳ್ಳಲು ಹೇಳಿ ನೋಡುತ್ತಾ ಕುಳಿತರು.ಎಲ್ಲರೂ ಕಾಫಿಯನ್ನು ಬೆಲೆಬಾಳುವ ಕಪ್ ಸಾಸರ್ ಗಲ್ಲಿ ತೆಗೆದು ಕೊಂಡರು.ಮತ್ತೆ ತಮ್ಮ ಮಾತುಕತೆಯನ್ನು ಮುಂದುವರೆಸಿದರು.ಇದನ್ನು ಗಮನಿಸುತ್ತಿದ್ದ ಗುರುಗಳು ಶಿಷ್ಯರನ್ನು ಕುರಿತು "ನಿಮ್ಮೆಲ್ಲ ಸಮಸ್ಯೆಗಳು ಏನೆಂದು ನನಗೆ ಈಗ ಅರಿವಾಯಿತು.ನಿಮಗೆ ನಾನು ಕಾಫಿ ತೆಗೆದುಕೊಳಲು ಹೇಳಿದಾಗ ನೀವು ಬೆಲೆಬಾಳುವ ಕಪ್ ತೆಗೆದು ಕೊಂಡಿರೆ ಹೊರತು ಸಾಮಾನ್ಯವಾದುದನ್ನು ನಿರ್ಲಕ್ಷಿಸಿದಿರಿ.ನಿಮ್ಮ ಅರಿವಲ್ಲಿ ಕೊರತೆ ಇರುವುದು ಇಲ್ಲೇ!.ನೀವು ಕಪ್ ಗೆ ಬೆಲೆಕೊಟ್ಟಿರೆ ಹೊರತು ಕುಡಿಯುವ ಕಾಫಿಗಲ್ಲ.ಕಪ್ ಎನ್ನುವುದು ಕಾಫಿಯನ್ನು ಹಿಡಿದಿಟ್ಟು ಕೊಳ್ಳುವ ಸಾಧನವೇ ಹೊರತು ಮತ್ತೇನು ಅಲ್ಲ.ಇಲ್ಲಿ ಪ್ರಾಮುಖ್ಯತೆ ಇರುವುದು ಕುಡಿಯುವ ಕಾಫಿಗೆ ಹೊರತು ಕಪ್ ಗಲ್ಲ.ಜೀವನವು ಇಷ್ಟೇ.ಇಲ್ಲಿ ಯಾವುದಕ್ಕೆ ಬೆಲೆ, ಯಾವುದಕ್ಕಲ್ಲ ಎನ್ನುವುದು ನಿಮಗೆ ತಿಳಿದಿದ್ದರೆ ನಿಮಗೆ ಈ ಸಮಸ್ಯೆ ಇರುತ್ತಿರಲಿಲ್ಲ.ಬೆಡಗಿನ ಬದುಕಿಗಿಂತ ಮಾನವತೆಯ ಮೌಲ್ಯ ದೊಡ್ಡದು" ಎಂದರು.
ಎಂತಹ ಅದ್ಭುತವಾದ ಮಾತುಗಳು.ಹೌದು ನಮ್ಮ ಗೊಣಗಾಟಕ್ಕೆ ನಾವೇ ಹೊಣೆ.ಫಲವು ಸಿಹಿಯೋ,ಕಹಿಯೋ ಅದಕ್ಕೆ ನೀರೆರೆದವರು ನಾವೇ.ಒಳ್ಳೆಯದೋ,ಕೆಟ್ಟದ್ದೋ ಅದು ನಮ್ಮದೇ.ಅದನ್ನು ನಾವು ಸ್ವಾಗತಿಸಲೇ ಬೇಕು.ಇರುವುದರಲ್ಲೇ ನೆಮ್ಮದಿ,ಸಾರ್ಥಕತೆಯನ್ನು ಹುಡುಕ ಬೇಕು.ಒಬ್ಬ ಎಷ್ಟು ವರ್ಷ ಬದುಕಿದ ಎಂಬುದು ಇಲ್ಲಿ ಮುಖ್ಯವಲ್ಲ.ಹೇಗೆ ಬದುಕಿದ ಎನ್ನುವುದೇ ಮಾನದಂಡವಾಗುತ್ತದೆ.ಮೂರು ದಿನದ ಬಾಳಾದರೂ ನೂರು ಮಂದಿ ನೆನೆಯುವಂತೆ ಬದುಕಿದ್ದರೆ ಅದು ಸಾರ್ಥಕ.ಪ್ರೀತಿ,ಕ್ರತಜ್ನತೆ,ಸಹಾಯ,ಅನುಕಂಪ,ಮಿಡಿಯುವ ಮನಸ್ಸು ಇಲ್ಲಿ ಗೆಲ್ಲುತ್ತದೆಯೇ ಹೊರತು ದ್ವೇಷ,ಅಸೂಯೆ,ಸುಲಿಗೆ ಅನಾಚಾರಕ್ಕೆ ಇಲ್ಲಿ ನೆಲೆಯಿಲ್ಲ.ರೂವಾರಿಯ ಕೈಯಲ್ಲಿ ಅಡಗಿದೆ ಕಟ್ಟಡದ ಸುಂದರತೆ. ಬೆಲೆಕೊಡುವ ಮನಸಲ್ಲಿ ಅಡಗಿದೆ ಬದುಕಿನ ಭಾಂದವ್ಯತೆ.ಪ್ರತಿಯೊಬ್ಬರಲ್ಲೂ ಬೆಳೆಯಲಿ ವೈಚಾರಿಕತೆ, ಮೂಡಲಿ ಎಲ್ಲರಲು ಸಮರಸದ ಸಾಮ್ಯತೆ ಎನ್ನುತ್ತಾ ಮತ್ತೊಮ್ಮೆ ಆಶಿಸುತ್ತೇನೆ.ಗೊತ್ತಿರಲಿ ನಿಮಗೆ ಇಲ್ಲಿ ನಿಮ್ಮ ಗಮನ ಇರಬೇಕಾಗಿದ್ದು ಕುಡಿಯ ಬೇಕಾದ ಕಫಿಗೋ?? ಇಲ್ಲ ಕಪ್ ಸಾಸರ್ ಗೋ ?? ಮತ್ತೊಮ್ಮೆ ಮಗದೊಂದು ಬರಹದೊಂದಿಗೆ ವಾಪಾಸ್ಸಾಗುತ್ತೇನೆ.......
ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು..
ಎಲ್ಲೂ ಬೆಲ್ಲದ ಪರಿ,ನಿಮ್ಮಲ್ಲಿ ಒಳ್ಳೇ ಮಾತುಗಳನ್ನು ಮೂಡಿಸಲಿ...



