ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಜೀವಕ್ಕಿರುವುದು ಭಾವಗಳ ಮೆರುಗು..

ಬನ್ನಿ ಭಾವಗಳೆ ಬನ್ನಿ ನನ್ನೆಡೆಗೆ..
ನೆನಪಾದವು ಸುಂದರ ಭಾವಗೀತೆಯ ಸಾಲುಗಳು.ಜೀವನ ಮತ್ತು ಭಾವನೆ ಈ ಎರಡು ಒಂದೆ ನಾಣ್ಯದ ಮುಖಗಳು.ಭಾವವಿಲ್ಲದ ಜೀವವಿಲ್ಲ.ಜೀವವೇ ಇಲ್ಲದ ಭಾವಕ್ಕೆ ಬೆಲೆಯೂ ಇಲ್ಲ.ಜೀವ ಹಾಗೂ ಭಾವ ಒಂದಾದರೆ ಜೀವನ.ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ಜೀವ ಸಂಪನ್ಮೂಲದ ಜೊತೆಗೆ ಹಾಸು ಹೊಕ್ಕಾಗಿದೆ ನವಿರಾದ ಭಾವಗಳು.ತೋರ್ಪಡಿಸುವ ರೀತಿ ತರಹದ್ದಾಗಿರುತ್ತದೆ.ಯಾರದೋ ಮಗುವಿನ ಮುಗ್ಧ ಮುಖವನ್ನು ಕಂಡಾಗ ಅರಿವಿಲ್ಲದೆ ಮನಸೊಮ್ಮೆ ಅರಳಿ ನಕ್ಕಿರುತ್ತದೆ.ಬಸ್ಸಿನಲ್ಲಿ ಯಾವತ್ತೋ ಯಾರದೋ ಪಕ್ಕ ಹೋಗಿ ಕೂತಾಗ ಅತ್ಮೀಯತೆಯ ನಗುವೊಂದು ಸುಳಿದಾಡಿರುತ್ತದೆ.ಅಪರಿಚಿತರ ಗುಂಪಿನಲ್ಲೂ ಎಲ್ಲೊ ಒಂದು ಜೀವ ಪರಿಚಿತರಂತೆ ನಿಮ್ಮ ಮಾತನಾಡಿಸಿ ಬಿಟ್ಟಿರುತ್ತದೆ.ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು,ಎಲ್ಲೋ ಸೇರಿ ಒಂದಾದ ಎರಡು ಮನಗಳ ನಡುವೆ ಸ್ನೆಹವೆಂಬ ಸೇತುವೆ ನಿರ್ಮಾಣವಾಗಿ ಬಿಡುತ್ತದೆ.ಎನೂ ಅಲ್ಲದ ವ್ಯಕ್ತಿಯೊಬ್ಬ ಜಗತ್ತನ್ನು ತೊರೆದಾಗ ಮನಸ್ಸು ತೇವವಾಗಿ ಬಿಡುತ್ತದೆ.ಹಲವರಲ್ಲಿ ಒಬ್ಬರಿಗೆ ಮಾತ್ರ ನಿಮ್ಮ ನಾಳೆಗಳು ಮೀಸಲಾಗಿ ಬಿಡುತ್ತವೆ.ದೂರದಲ್ಲಿದ್ದರೂ ಅತ್ಮೀಯರ ಒಂದು ಕಾಲ್ ನಿಮ್ಮನ್ನು ಅವರ ಹತ್ತಿರಕ್ಕೆ ಕೊಂಡೊಯ್ದು ಬಿಡುತ್ತದೆ.ಇವೆಲ್ಲ ಮನುಷ್ಯ ಭಾವಗಳಿಗೆ ಬಂಧಿಯಾಗುವ ಕೆಲವೊಂದು ಪರಿಗಳಷ್ಟೇ.

ಮನುಷ್ಯನ ಭಾವಗಳು ಬರಿ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ.ಅವೂ ಜೀವವಿಲ್ಲದ ವಸ್ತುಗಳಿಗೂ ಕೂಡ ಹರಿದು ಬಿಡುತ್ತವೆ. ಜೋಪಾನ ಮಾಡಿದ ಹಳೆಯ ಪುಸ್ತಕಗಳು,ನೆನಪುಗಳ ಹೊತ್ತು ಮತ್ತೆ ನೆನಪಾಗುವ ಆಟೋಗ್ರಾಫ್ ಗಳು,ಹುಟ್ಟಿ ಬೆಳೆದ ಅನುಭವ ಕಟ್ಟಿಕೊಟ್ಟ ನಮ್ಮೂರು,ಆಡಿ ಬೆಳೆದ ಶಾಲೆ,ತಿರುಗಿ ಸೋತ ಬೆಟ್ಟ ಗುಡ್ಡ,ಓಡಿ ಬೀಳುತ್ತಿದ್ದ ಹಾದಿ,ಕಲಿತು ನಲಿದ ಕಾಲೇಜು,ಅದರೊಂದಿಗೆ ಹಸಿರಾಗಿರುವ ನೆನಪುಗಳು,ನಮ್ಮದೆನ್ನುವ ಆಫಿಸ್,ಡೆಸ್ಕ್, ಇಷ್ಟ ಪಟ್ಟು ತೆಗೆದುಕೊಂಡ ಮೊಬೈಲ್, ನಮ್ಮ ಭಾಗವೇ ಆಗಿ ಬಿಡುವ ಲ್ಯಾಪ್ ಟಾಪ್, ಉಸಿರಂತೆ ಕಾಪಾಡುವ ಗಿಡಗಳು,ಮತ್ತೆ ಮತ್ತೆ ನೆನಪಾಗಿ ಕಾಡುವ ಕೆಲವೊಂದು ಹಾಡುಗಳು,ಸಾಲುಗಳು ಹೀಗೆ ಎಷ್ಟೋ ಹೆಸರಿಗೆ ಜೀವವಿಲ್ಲದ ವಸ್ತುಗಳಲ್ಲೂ ಭಾವಗಳನ್ನು ಕಂಡು ಬಿಡುತ್ತೇವೆ. ಅದು ಮನುಷ ಸಹಜ ಗುಣ.ಮನುಷ್ಯ ಎಷ್ಟೇ ಭಾವನಾತ್ಮಕ ನಲ್ಲ ಎಂದರೂ ಗೊತ್ತಿಲ್ಲದೇ ಅವನಲ್ಲಿ ಭಾವಗಳ ಚಿಲುಮೆ ಜೀವಂತ.ಇದು ಕೇವಲ ಮನುಷ್ಯನಿಗಷ್ಟೇ ಹೊರತಾಗಿಲ್ಲ.ಪ್ರಾಣಿ-ಪಕ್ಷಿಗಳು ಅವರ ಭಾವನೆಗಳನ್ನು ಅವರವರದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತವೆ.ತಮ್ಮವರು ಬಂದಾಗ ಪ್ರಾಣಿಗಳು ಮೈ ಸೊಕಿಸುವುದರಲ್ಲೋ,ಕಾಲ ಬಳಿ ಬಂದು ನಿಲ್ಲುವುದರಲ್ಲೋ,ಕೂಗುವುದರಲ್ಲೋ ತಮ್ಮ ಅತ್ಮೀಯತೆಯ ಸೆಳೆತವನ್ನು ತೋರಿಸುತ್ತವೆ.ಇನ್ನು ಪಕ್ಷಿಗಳು ತಮ್ಮ ಕೂಗಿನ ಮೂಲಕ ತಮ್ಮವರ ಕರೆದು ತಮ್ಮಲ್ಲಿನ ಬಾಂಧವ್ಯವನ್ನು ಹೊರಗೆ ತಿಳಿ ಪಡಿಸುತ್ತವೆ.ಒಟ್ಟಿನಲ್ಲಿ ಅವರವರ ಭಾವ ಅವರದೇ ಆದ ರೀತಿ.

ಎನೂ ತಿಳಿಯದ ಹಸುಗೂಸು ಭೂಮಿಗೆ ಬರುತ್ತಿದ್ದಂತೆ ತನ್ನ ತಾಯಿಯನ್ನು ಅರಿತಂತೆ,ಎಲ್ಲೊ ಸಿಕ್ಕ ಜೀವವೊಂದು ನಮ್ಮದಾಗಿ ಮಿಡಿದಂತೆ,ಬರಹಗಾರನಿಗೆ ತಾನು ಬರೆಯುವ ಅಕ್ಷರದಲ್ಲಿ,ಸಂಗೀತಗಾರನಿಗೆ ತನ್ನಲ್ಲಿ ಅರಳುವ ಸ್ವರದಲ್ಲಿ,ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ,ನಾಟ್ಯ ಬಲ್ಲವನಿಗೆ ತನ್ನ ಹೆಜ್ಜೆಗಳಲ್ಲಿ,ಚಾಲಕನಿಗೆ ತನ್ನ ವಾಹನದಲ್ಲಿ,ಚಿತ್ರಕಾರನಿಗೆ ತಾನು ಎಳೆವ ರೇಖೆಗಳಲ್ಲಿ,ಚಾಯಾಚಿತ್ರಗಾರನಿಗೆ ತನ್ನ ಕೈಯಲ್ಲಿ ಕ್ಲಿಕ್ ಅಗುವ ಪ್ರತಿಯೊಂದು ಚಿತ್ರದಲ್ಲಿ,ತೋಟದ ಮಾಲಿಗೆ ಉಸಿರಾದ ತನ್ನ ಗಿಡಗಳಲ್ಲಿ, ಶಿಕ್ಷಕನಿಗೆ ತಾನು ಬೋಧಿಸುವ ಪಾಠಗಳಲ್ಲಿ,ರೈತನಿಗೆ ಬೆವರ ಹರಿಸಿ ತೆಗೆವ ಹಸಿರಿನಲ್ಲಿ ಹೀಗೆ ನಮ್ಮದೆನ್ನುವ ಭಾವ ಸದಾ ಜಾಗ್ರತವಾಗಿರುತ್ತದೆ.ಅದರೊಂದಿಗೆ ಅಪ್ಯಾಯಮಾನವಾದ ಭಾವ ಬೆಳೆದು ಬಿಟ್ಟಿರುತ್ತದೆ.ಕೆಲವೊಮ್ಮೆ ಎನೂ ಅಲ್ಲದಿದ್ದರೂ ಅವರನ್ನು\ಅದನ್ನು ನೋಡಿದ ಘಳಿಗೆ ಮನಸೊಮ್ಮೆ ಮುದಗೊಂಡು ಮೆಲುನಗುವೊಂದು ಮೂಡಿ ಮರೆಯಾದರೆ,ಎಲ್ಲೋ ನೊವುಂಡ ಜನರನ್ನು ಕಂಡ ಕ್ಷಣ ಅರಿವಿಗೆ ಬಾರದಂತೆ ಅಯ್ಯೋ ಎಂದಿರುತ್ತದೆ.ಹೀಗೆ ಭಾವಗಳ ಪರಿಧಿ ಬಹು ದೊಡ್ಡದು.ಕಾಣದೆ ಅನುಭವಕ್ಕೆ ಬರುವಂತದ್ದು.ಭಾವಗಳ ಸಂಕೋಲೆಯಲ್ಲಿ ತೊಳಲಾಡುವ,ಸಂತೋಷದಲ್ಲಿ ತೇಲಾಡುವ ಜೀವನ ನಮ್ಮದು.ಒಟ್ಟಿನಲ್ಲಿ ಜೀವಕ್ಕಿರುವುದು ಭಾವಗಳೆಂಬ ಮೆರುಗು.ಭಾವ ಇದ್ದರೇನೇ ಬದುಕಾಗುವುದು ಸೊಭಗು......



[ಇದು 26 Feb ಕನ್ನಡಪ್ರಭದ ಚುಕ್ಕಿ ಯಲ್ಲಿ ಪ್ರಕಟಿತ ಲೇಖನ.http://www.kannadaprabha.com/pdf/2622011/17.pdf]



ನೀ ಹಿಂಗ ನೋಡ ಬ್ಯಾಡ ನನ್ನ!!!



ಇದು ನಾನು ತುಂಬಾ ದಿನದಿಂದ ನಿನ್ನ ಜೋಡಿ ಕೆಳಬೇಕೆಂದು ಕೊಂಡಿರುವ ಪ್ರಶ್ನೆ.ಮುಂಜಾನಿಎದ್ದು ತಯಾರಿಯಾಗಿ ಕೆಲಸಕ್ಕ ಬರೊ ಅವಸರದಾಗೂ ಗೊತ್ತಿಲ್ಲದ ನನ್ನ ಕಣ್ಣು ನಿನ್ನ ಮೇಲೆ ಬಿದ್ದಿರ್ತದ.ಯಾಕ ಅಂತ ಮಾತ್ರ ನನ್ನ ಕೇಳಬ್ಯಾಡ.ನನ್ನ ಜೋಡಿ ಉತ್ತರನೂ ಇಲ್ಲ. ಅದು ಹಂಗ.ಬದುಕಿನ್ಯಾಗ ಕೆಲವೊಂದಕ್ಕ ಕಾರಣ ಅಂತ ಇರೂದಿಲ್ಲ.ಸುಮ್ನ್ ಯಾವದೋ ಮನಸಿಗೆ ಬಂದು ಕೂತಿರ್ತದ.ತಲಿಗೆ ಹೊಳಿಯೊದರ ಒಳಗ ನಾವು ಅದರಲ್ಲಿ ಬಿದ್ದಾಗಿರ್ತದ.ನಾನು ನಿನ್ನ ಬಗ್ಗ ಆಸಕ್ತಿ ತೋರಿಸಿ ಬಿದ್ದಿದ್ದು ಹಿಂಗೆನ.ನಮ್ಮ ಬಸ್ಸಿನ ಯಾವ ಮೂಲೆಯಲ್ಲಿ ನಾನು ಕುಂತಿದ್ರೂ ನೀನು ನಿಲ್ಲೊ ಜಾಗ ಬರ್ತದ ನೋಡ ಆವಾಗ ಒಮ್ಮೆ ಕಣ್ಣು ನಿನ್ನ ಮೇಲೆ ಹಾದಿರ್ತದ.ಯಾಕ ನೀನು ನನ್ನ ಕಾಡ್ತಿಯ ಅಂತ ಮನಸ್ಸು ಕೇಳಿರ್ತದ.ಹಂಗಂತ ನೀನೆನು ನನ್ನ ಕಲ್ಪನೆಯಲ್ಲಿರುವ ನನ್ನವನಂತನೂ ಇಲ್ಲ.ಮತ್ತ ಮತ್ತ ನೋಡೋವಷ್ಟು ಚಂದನೂ ಇಲ್ಲ ಬಿಡ.

ಈ ಕೂತುಹಲ ನಂಗ ನೀನು ಬಂದು ನಿಲ್ಲಲು ಶುರುಮಾಡಿದಾಗಿನಿಂದ ನನ್ನ ತಲೆಯೊಳಗ ಇತ್ತ.ದಿನಾ ಒಂದೊಂದು ಚೊಲೊ ಅರಿವಿಯಲ್ಲಿ ಮಿಂಚತಾ ಇದ್ರ ನಾನ್ ಕಣ್ಣು ತೆಗೆಯೊದು ಆದ್ರು ಹೆಂಗ ಹೇಳು?!ಯಾರೂ ನಿನ್ನ ನೊಡ್ತಿದ್ರೊ ಇಲ್ಲೋ ನಾನ್ ಮಾತ್ರ ನಿನ್ನ ನೋಡೊದ್ ಬಿಟ್ಟಿರಲಿಲ್ಲ.ನನ್ ಕಣ್ಣಿಗ ನೀ ಕಾಣೊ ಮಟ ನನ್ನ ದ್ರಷ್ಟಿ ಇರ್ತಿದ್ದು ನಿನ್ನ ಮ್ಯಾಲ.ಎನೇ ಹೆಳ ನಿನ್ನ ಚಂದ ದಿನ ಹೊದಾಂಗ ಹುಣ್ಣಿಮೆ ಚಂದ್ರ ಬೆಳಿತಾನಲ್ಲ ಹಂಗ ಬೆಳಿತಾನೇ ಹೊಗ್ತಿದ.ಮೊದ ಮೊದಲು ನೀನಾರು,ಯಾಕ ನನ್ನ ನೊಡ್ತಿ ಅಂತ ಅನಿಸ್ತಿತ್ತು.ಒಮ್ಮೊಮ್ಮೆ ಬಸ್ಸಿನಿಂದ ಇಳಿದು ನಿನ್ನ ಕೂಡ ನಾನು ಕೇಳಿಯೇ ಬಿಡೊಣು ಅಂತ ಅನಿಸ್ತಿತ್ತು.ಅದ್ರ ನಿನ್ನ ಸುತ್ತ ಮುತ್ತ ಅಷ್ಟೋಂದು ಜನ ಇರೊದು ನೋಡಿ ನಂಗ ನಾಚಿಕೆಯಾಗಿ ಬೇಡ ಬಿಡು, ಮುಂದೆ ತಿಳಿದೇ ತಿಳಿತದ ಅಂತ ಸುಮ್ಮನಾಗಿದ್ದೆ ನಾನು ಗೊತ್ತೇನು?!.ಅದೂ ಅಲ್ದ ಈ ಹುಡುಗಿಗೆ ಯಾಕ ಇವನ ಮ್ಯಾಲ ಇಷ್ಟೊಂದು ಅಕ್ಕರೆ ಅಂತ ಒಡಾಡೊ ಜನ ನನ್ನ ನೋಡಿ ತಪ್ಪು ತಿಳಿದ್ರ ಅಂತ ಭಯ ಕೂಡ ಇತ್ತು.ಆದ್ರು ನನ್ನ ಗೆಳತಿ ಜೋಡಿ ನಿನ್ನ ಬಗ್ಗೆ ಪ್ರಶ್ನೆ ಕೇಳೊದು ಮಾತ್ರ ತಪ್ಪಿರಲಿಲ್ಲ.ಅವಳಿಗೂ ಎನು ಗೊತ್ತಿರ್ತದ ನಿನ್ನ ಬಗ್ಗೆ? ಪಾಪ ನಮ್ಮಿಬ್ಬರ ಕಲ್ಪನೆಗೂ ನೀನು ಸಿಕ್ಕಿರಲಿಲ್ಲ. ಎಲ್ಲರಂತೆ ನೀನು ಒಬ್ಬವ ಅಂತ ಒಪ್ಪಿಕೊಳ್ಳೊಕು ನಾನು ತಯಾರಿ ಇರಲಿಲ್ಲ.ದಿನಾ ನಾನು ಜಲದಿ ಬರಲಿ, ತಡಾ ಮಾಡಲಿ ನೀನು ನನ್ನ ಕಣ್ಣಿಗೆ ಬಿಳದೇ ಹೊಗ್ತಿರಲಿಲ್ಲ. ಕೆಲಸದ ಮಧ್ಯ ನಂಗ ನೀನು ನೆನಪಾಗಿದ್ದು ನೆನಪಿಲ್ಲ ಬಿಡು.ಮತ್ತ ಸಂಜಿ ಕೂಡ ನಾನು ಬರೋ ಮೊದ್ಲ ನೀನು ಅದೇ ದಾರಿಲಿ,ಅದೇ ಜಾಗದಲ್ಲಿ ನಂಗ ಕಾಯ್ತಿದ್ರ ಮತ್ತ ನನ್ನ ಕಳ್ಳ ನೋಟ ನಿನ್ನ ಮೇಲ.ಮತ್ತೆ ನನ್ನ ಬುದ್ದಿಯಲ್ಲಿ ಮತ್ತೆ ಶುರುವಾಗುತ್ತಿದ್ದ ತರ್ಕ.ನೀನಾರು?

ಕೊನೆಗೂ ನಿಂಗ ನನ್ನ ಮೇಲೆ ಕನಿಕರ ಬಂತು ಅಂತ ಕಾಣ್ತದ.ನಾನು ಕೇಳೋ ಮೊದಲ ನೀನು ನೀನಾರೆಂಬ ನನ್ನ ಪ್ರಶ್ನೆಗೆ ಉತ್ತರ ಹೇಳಿ ಬಿಟ್ಟಿದ್ದಿ.ನನ್ನ ಚಡಪಡಿಕೆಗೆ ಉತ್ತರ ಸಿಕ್ಕಿತ್ತ.ಅವತ್ತೊಂದು ದಿನ ಬೆಳಗ್ಗೆ ನಾನು ನಿನ್ನ ನೋಡುವಾಗ ಕೆಂಪು ಬಣ್ಣದ ಅಂಗಿಯಲ್ಲಿ ನಿಂತಿದ್ದಿ.ದಿನಾ ಕಾಯುವ ನನ್ನ ಕಣ್ಣುಗಳಲ್ಲಿ ಒಮ್ಮೆಲೆ ಖುಷಿ ತುಂಬಿತ್ತು.ನಿನ್ನೊಂದಿಗಿದ್ದವರು,ನಿನ್ನ ಸುತ್ತ ಮುತ್ತ ಸದಾ ಅವಸರದಿಂದ ಓಡಾಡುತ್ತ ಬೆವರ ಹರಿಸುತ್ತಿದ್ದವರು ನಿಂಗೊಂದು ಹೆಸರ ಕೊಟ್ಟಿದ್ದರು."ಬೆಂಗಳೂರ್ ಸೆಂಟ್ರಲ್" ಅಂತ.ನಾನು ಒಮ್ಮೆಲೆ ನನ್ನ ಗೆಳತಿಯ ಕಡೆ ತಿರುಗಿ ಕಣ್ಣು ಹೊಡೆದಿದ್ದೆ.ಅವಳು ನನ್ನ ಮನ ಬಲ್ಲವಳಂತೆ ತಲೆಯಾಡಿಸಿದ್ದಳು.ಆದರೂ ನಂಗ ನಿನ್ನ ಮೇಲೆ ನೀನು ನನ್ನ ಅಷ್ಟುದಿನ ಕಾಡಿಸಿದ್ದಕ್ಕ,ತಲೆಯಲ್ಲಿ ಕೊರೆಯುವ ಸಮಸ್ಯೆಯಾಗಿ ಉಳಿದಿದ್ದಕ್ಕ ಕೋಪ ಐತಿ.ಭಾಳ ದಿನ ಇಲ್ಲ ಬಿಡ.ಒಮ್ಮೆ ಬರಾಕ ಹತ್ತಿನಿ.ನಿನ್ನ ಸಮೀಪದಾಗ ಕಂಡು ಭೇಟಿ ಮಾಡ್ಕೊಂಡ ಹೋಗಾಕಿ.ಎನೇ ಹೇಳ ನೀನು ನನ್ನ ಹಂಗ ನೋಡ್ತಿದ್ದು ತಪ್ಪಲ್ವ????!!!!!!!!


( ಗಂಭೀರ ವಿಚಾರಗಳ ಬಗ್ಗೆ ಬರೆಯುವದನ್ನು ಬಿಟ್ಟು ಈ ಭಾರಿ ವಿಭಿನ್ನ ಲೇಖನ ವನ್ನು ನೀಡುವ ಪ್ರಯತ್ನ. ಓದುಗ ಮಿತ್ರರ ಕೋರಿಕೆಯ ಮೇಲೆ ಉತ್ತರ ಕರ್ನಾಟಕ ಭಾಷೆಯ ಉಪಯೋಗ ನನಗೆ ತಿಳಿದ ಮಟ್ಟಿಗೆ ಮಾಡಿದ್ದೇನೆ.ತಪ್ಪಿದ್ದರೆ ಕ್ಷಮಿಸಿ.ಈ ಲೇಖನ ಸರ್ಜಾಪುರ ರೋಡ್ ನಲ್ಲಿ ತಲೆ ಎತ್ತಿ ನಿಲ್ಲುತ್ತಿರುವ ಬೆಂಗಳೂರು ಸೆಂಟ್ರಲ್ ಬಗ್ಗೆ ಬರೆದಿದ್ದು..)