"ಸುಮ್ಮನೆ ಬೇಜಾರು ಮಾಡ್ತಾ ಎಂಥಕ್ಕೆ ಟೈಮ್ ಹಾಳು ಮಾಡ್ತೆ. ಎಂತದನ್ನಾದ್ರೂ ಬರಿ,ಆಮೇಲೆ ನಿಂಗೆ ಆ ಬರವಣಿಗೆ ಬಿಟ್ಟೆ ಹೋಗ್ತು.ಹಂಗೆ ಅಪಲೇ ಬಿಡಡಾ,ಅದನ್ನ ಮುಂದುವರೆಸು" ಆವತ್ತು ಬೆಳಗ್ಗಿನ ಇದೊಂದು ಮಾತು ಇವತ್ತಿನ "
ಮಾನಸರಂಗ"ದ ಹುಟ್ಟಿಗೆ ಕಾರಣ.ನನ್ನ ಮನಸಿನ ಮಾತುಗಳಿಗೆಲ್ಲ ಅಕ್ಷರರೂಪ ಕೊಟ್ಟು ಅದನ್ನ ನಿಮ್ಮ ಮುಂದೆ ಇಡಲು ಅಪ್ಪನ ಅದೊಂದು ಮಾತಿಗಾಗಿ ಕಾಯುತ್ತಿದ್ದೆ ಅಂತ ಅನ್ನಿಸುತ್ತದೆ.ನನ್ನ ಪ್ರತಿಯೊಂದು ನಿರ್ಧಾರದ ಹಿಂದೆ ನನ್ನವರ ಸಲಹೆ ಹಾಗು ಬೆಂಬಲ ಸದಾ ಇದೆ.ಅದಕ್ಕೆ ನನಗೆ ಅವರು ಎಂದೂ ಸ್ನೇಹಿತರಂತೆಯೇ.ಹೀಗೆ ಮನೆಯಲ್ಲಿದ್ದಾಗ ಅವರಿಗೆ ಇಂಟರ್ನೆಟ್ ಬಗ್ಗೆ ಹೇಳುತ್ತಾ ನಾನು ತಪ್ಪದೆ ಓದುತ್ತಿದ್ದ ಬ್ಲಾಗ್ ಗಳ ಬಗ್ಗೆ ಹೇಳಿದ್ದೆ. ಅದನ್ನು ನೋಡಿಯೇ ಅವರು ಹೇಳಿದ್ದರು "ನೀನ್ಯಾಕೆ ಈ ರೀತಿ ಬರೆಯಬಾರದು".ಅಲ್ಲಿಯವರೆಗೆ ನನ್ನಲ್ಲಿ ಕಲ್ಪನೆ ಇದ್ದರು ನಾನು ಬರೆಯುವ ಮನಸ್ಸು ಹಾಗು ಪ್ರಯತ್ನ ಮಾಡಿರಲಿಲ್ಲ.ಕೇವಲ ಕ್ಲಾಸಿನಲ್ಲಿ ಬೋರ್ ಅದಾಗ ಪುಸ್ತಕದ ಹಿಂದೆ,ಸುಮ್ಮನೆ ಒಬ್ಬಂಟಿ ಯಾಗಿ ಕೂತಾಗ ಮೂಡಿದ ಸಾಲುಗಳನ್ನು ನನ್ನ ಡೈರಿಯಲ್ಲಿ ಬರೆಯುತ್ತ ಇದ್ದೆ.ಅದನ್ನು ಯಾರಿಗೂ ತೋರಿಸುತ್ತಲು ಇರಲಿಲ್ಲ.ನಾನು ಬರೆದಿಡುತ್ತಿದ್ದ ಸಾಲುಗಳು ನನ್ನ ತಂಗಿಯರ ಪ್ರಬಂಧಗಳಿಗೆ ಸೇರುವುದನ್ನು ಬಿಟ್ಟರೆ ನನ್ನ ಸ್ನೇಹಿತರಿಗೆಷ್ಟೋ ಜನಕ್ಕೆ ನನ್ನ ಬರವಣಿಗೆಯ ಬಗ್ಗೆ ಗೊತ್ತಾಗಿದ್ದು ನಾನು ಬ್ಲಾಗ್ ಬರೆಯಲು ಆರಂಭಿಸಿದಮೇಲೆಯೇ..ನಾನು ಬ್ಲಾಗ್ ಪ್ರಪಂಚಕ್ಕೆ ಬಂದಮೇಲೆ ನನ್ನ ಬರಹದ ಬಗ್ಗೆ,ಬ್ಲಾಗಿನ ಹೆಸರಿನ ಬಗ್ಗೆ,ನನ್ನ ಬರವಣಿಗೆಗೆ ಯಾರು ಸ್ಫೂರ್ತಿ ಎಂದು ಹಲವಾರು ಜನ ಹಲವಾರು ಪ್ರಶ್ನೆ ಕೇಳಿದ್ದಾರೆ.ಅವರೆಲ್ಲರಿಗೂ ವರುಷದ ಹರುಷದಲ್ಲಿ ಉತ್ತರ ನೀಡುವ ಆಶಯ.
ಇದು ತುಂಬಾ ಚಿಕ್ಕಂದಿನಿಂದಲೇ ನನ್ನೊಂದಿಗೆ ಬೆಳೆದ ಹವ್ಯಾಸ.ಇದಕ್ಕೂ ನನ್ನ ತಂದೆಯವರೇ ಕಾರಣ.ನನ್ನಲ್ಲಿ ಓದುವ ಹುಚ್ಚು,ಬರೆಯುವ ಹುಚ್ಚು ಹುಟ್ಟಿದ್ದೇ ನನ್ನ ತಂದೆಯವರಿಂದ.ಪಪೆರನಲ್ಲಿ ಬರುತ್ತಿದ್ದ ಲೇಖನಗಳಿಗೆ ನನ್ನದೇ ರೀತಿಯಲ್ಲಿ ವಿಮರ್ಶಿಸುತ್ತಿದ್ದನ್ನು ನೋಡಿ ನೀನು ಬರೆಯಬಲ್ಲೆ ಎಂದಿದ್ದರು.ನಾನು ನಕ್ಕು ಬಿಟ್ಟಿದ್ದೆ.ಆಗ ನಾನು ಮೂರನೇ ಇಯತ್ತೆ.ಅವರು ನನಗೆ ಬರೆಯಲು ಕೊಟ್ಟ ವಸ್ತು 'ಬಾಳೆ ಗಿಡ'.ನಾನು ಒಂದು ತಾಸಿನಲ್ಲಿ ೪ ಪ್ಯಾರದ ಕವನ ಬರೆದು ಬಿಟ್ಟಿದ್ದೆ.(ಅದು ನನಗೆ ಈಗ ನೆನಪಿಲ್ಲ :)).ಹೀಗೆ ಬರವಣಿಗೆ ದಿನೇ ದಿನೇ ನನ್ನಲ್ಲಿ ಬೆರೆತಿದ್ದು.ಸುತ್ತ ಮುತ್ತ ನಡೆಯುತ್ತಿದ್ದ ಅಶು ಪ್ರಭಂಧ,ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಾ ಹೋದಂತೆ ನಾನು ಬರವಣಿಗೆಗೆ ಹತ್ತಿರವಾಗಿದ್ದೆ.ಅಮ್ಮನಿಗಾಗಿ ಹೊಸ ಹಾಡುಗಳು,ಭಜನೆಗಳು ಕೂಡ ನನ್ನ ರಚನೆಯಲ್ಲಿ ಸೇರಿ ಬಿಟ್ಟಿದ್ದವು.ಮತ್ತೆ P.U.C ಗೆ ಹೋದಮೇಲೆ ನಾನು ಬಹು ಹೊತ್ತು ಕಳೆಯುತ್ತಿದ್ದದ್ದು ಲೈಬ್ರರಿಯಲ್ಲಿ.ಪುಸ್ತಕದ ಹುಚ್ಚಿದ್ದ ನನಗೆ ಅಲ್ಲಿ ಪುಸ್ತಕಗಳಿಗೇನು ಬರವಿರಲಿಲ್ಲ.ಅಲ್ಲದೆ ಸಂಸ್ಕೃತ ಭಾಷೆಯ ಪರಿಣಾಮ ನನ್ನಮೇಲೆ ತುಂಬಾನೇ ಆಗಿದ್ದು ನನ್ನ ಬರವಣಿಗೆಗೆ ಪೂರಕವಾಯಿತು.ಆದರೆ ನಾನು ಬರೆಯುತ್ತಿದ್ದ ವೇಗ ಕಡಿಮೆ ಆಗುತ್ತ ಸಾಗಿತು.ಇದಕ್ಕೆ ಬಹುಶ: ಭವಿಷ್ಯದ ಒತ್ತಡ,ಸಮಯದ ಅಭಾವ ಕಾರಣವಿರಬೇಕು.ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ನಾನು ಒಂದು ವಿಷಯದ ಬಗ್ಗೆ ಸವಿಸ್ತಾರವಾಗಿ ಬರೆಯುವ ಸಾಮರ್ಥ್ಯವನ್ನೇ ಕಳೆದು ಕೊಂಡು ಬಿಟ್ಟಿದ್ದೆ.ಆದರೆ ಬ್ಲಾಗ್ ಅನ್ನೋ ಪ್ರಪಂಚದ ಅರಿವು ಮೂಡತೊಡಗಿತ್ತು. ಹೇಗೆ,ಏನು ಎಂದು ಮಾತ್ರ ಗೊತ್ತಿರಲಿಲ್ಲ.ಕೊನೆಯ ಸೆಮಿಸ್ಟರ್ ಅನ್ನೋ ಹೊತ್ತಿಗೆ ಬರೆಯಲಾರೆ ಎಂಬ ಹಠಕ್ಕಾಗಿಯೋ ಏನೋ ಒಂದು ವಿಷಯದ ಬಗ್ಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಂತೆ ಮತ್ತೆ ನನ್ನ ಕೈಯಿಂದ ಪೆನ್ನು ಸಲಿಸಾಗಿ ಬರೆಯತೊಡಗಿತು.ಬ್ಲಾಗ್ ಬರೆಯಬೇಕೆಂಬ ಕಲ್ಪನೆ ಮೂಡತೊಡಗಿತು.
ಓದು ಮುಗಿದಮೇಲೆ ಬಿಡುವಿನಲ್ಲಿ ನನ್ನ ಕನಸಿಗೆ ಅಡಿಪಾಯ ಹಾಕುವ ಆಲೋಚನೆ ಮಾಡಿದ್ದೇ ಒಂದೊಂದೇ ಹಂತವಾಗಿ ಕೊನೆಗೂ "
ಮಾನಸರಂಗ" ವೆಂಬ ವೇದಿಕೆ ಸಿದ್ಧವಾಯಿತು.ಹೆಸರಿನ ಬಗ್ಗೆ ತುಂಬಾ ಆಲೋಚಿಸಿ ನನ್ನ ಮನಸಿನ ಮಾತುಗಳಿಗೆ ಜಾಗನೀಡುವ ರಂಗವಾಗಬೇಕೆಂಬ ಉದ್ದೇಶದಿಂದ 'ಮಾನಸರಂಗ' ಎಂದು ಹೆಸರು ಕೊಟ್ಟು ನಾಮಕರಣ ಮಾಡಿಬಿಟ್ಟೆ.ನನ್ನ ಬ್ಲಾಗ್ ನ ಹೆಸರು ಹಾಗು ಟೆಂಪ್ಲೇಟ್ ಬಗ್ಗೆ ತುಂಬಾ ಜನ ಮೆಚ್ಚಿ ಮೇಲ್ ಕಳಿಸಿದವರಿದ್ದಾರೆ.ಅವರೆಲ್ಲರಿಗೂ ನಾನು ಅಭಾರಿ.
ನಾನು ಬರೆದಿರುವ ಪ್ರತಿಯೊಂದೂ ಬರಿ ನನ್ನ ಕಲ್ಪನೆ,ವಿಚಾರವೇ ಹೊರತು ಎಲ್ಲೂ ನನ್ನ ಬದುಕಿನ ಚಿತ್ರಣವಿಲ್ಲ.
ನನ್ನ ಸ್ವಭಾವಕ್ಕಾಗಲಿ ಹೋಲಿಕೆ ಇಲ್ಲ.ಆದರೆ ಒಂದು ಮಾತ್ರ ಹೇಳಬಲ್ಲೆ.ಈ ಬ್ಲಾಗ್ ಪ್ರಪಂಚ ನನಗೆ ಹಲವುದನ್ನು ಕಲಿಸಿಕೊಟ್ಟಿದೆ.ನನ್ನದೇ ಒಂದು ಐಡೆಂಟಿಟಿ ತಂದು ಕೊಟ್ಟಿದೆ.ನನ್ನ ಬರವಣಿಗೆಯಲ್ಲಿ ತಿದ್ದುಪಡಿ ಮಾಡಿದೆ.
"ನೀವು ಬರೆಯುದನ್ನು ನೋಡಿದರೆ ನಂಗೆ ಹೊಟ್ಟೆ ಉರಿ ಆಗತ್ತೆ ಕಣ್ರಿ,ಅದು ಹೇಗೆ ಭಾವಗಳನ್ನು ಹಿಡಿದಿಡುತ್ತೀರಾ? ನನ್ನ ಭಾವಗಳನ್ನು ನೀವು ಬರಿತೀರ ಅಂತ ಅನಿಸುತ್ತದೆ ಅಂತಲೋ,ನಿಮ್ಮ ಬರವಣಿಗೆಯಲ್ಲಿ ಒಂತರಾ ಪುಳಕವಿದೆ ಅಂತಲೋ,ನಿಮ್ಮ ಬರಹಗಳಲ್ಲಿ ವಯಸ್ಸಿಗೂ ಮೀರಿದ ಪ್ರಭುದ್ದತೆ ಇದೆ ಅಂತಲೋ,ವೈರೈಟಿ ಇದೆ ಅಂತಲೋ,ನಿಮ್ಮ ಬರವಣಿಗೆ ನೋಡಿದರೆ ಒಬ್ಬ ಹೆಸರಾಂತ(ಹೆಸರು ಬೇಡ :)) ಲೇಖಕರ ನೆನಪಾಗುತ್ತದೆ ಅಂತಲೋ,
ನಿನಗೂ ಕೂಡ ಹೀಗನಾ ಓದಿ ಅದನ್ನು ಫೀಲ್ ಮಾಡುವವರಿಗೆ ಮಾತ್ರ ಹೀಗೆ ಬರೆಯಲು ಸಾಧ್ಯ,ನಿಜ ಹೇಳಿ 'ಯಾಕೋ ತುಂಬಾ ನೆನಪಾಗ್ತಿಯ ಕಣೋ' ಅಂತ ಬರೆದಿದ್ದು ಬರಿ ಕಾಲ್ಪನಿಕವೇ ಅಂದಾಗಲೋ,
ಹೇಳಿ ಹೋಗು ಕಾರಣಕ್ಕೆ ದಯವಿಟ್ಟು ಒಳ್ಳೆ ಅಂತ್ಯ ಕೊಡಿ ಅಂದಾಗಲೋ,
ಮುಗಿಸುವ ಮುನ್ನ ಓದಿ ನಿಜಕ್ಕೂ ನನ್ನ ಬದುಕಿನ ನೆನಪು ಮೂಡಿ ಕಣ್ಣಿರಾದೇ ಅಂತಲೋ,
ಬದುಕೆಂದರೆ ಓದಿ ಪ್ರಖ್ಯಾತರೊಬ್ಬರು ನಿನ್ನ ವಯಸ್ಸೇಷ್ಟಮ್ಮ ಅಂತ ಕೇಳಿದಾಗಲೋ,
ನೀ ಹಿಂಗ ನೋಡಬ್ಯಾಡ ನನ್ನ ಓದಿ ಕಟ್ಟಡಕ್ಕೆ ಜೀವಕೊಟ್ಟೆ,ಇನ್ನು ಅದನ್ನು ನೋಡಿದಾಗ ಮೊದಲು ನಿನ್ನ ಬರಹವೇ ನೆನಪಾಗುವುದು ಅಂತ ಅಂದಾಗಲೋ,
ಮನ ಸೆರೆಯಾದ ಕ್ಷಣ ಓದಿ ನೀವು ಸದಾ ಗೊಂದಲದಲ್ಲೇ ಇದ್ದು ಹೀಗೆ ಬರೀರಿ ಅಂದಾಗಲೋ,ನಿನ್ನ ಬರಹಗಳ ಶೀರ್ಷಿಕೆಗಳೇ ನಮ್ಮ ಸೆಳೆಯುವುದು ಅಂದಾಗಲೋ,ನೀವೇಕೆ ನಿಮ್ಮ ವ್ರತ್ತಿ ಬಿಟ್ಟು ಪತ್ರಿಕೋದ್ಯಮಕ್ಕೆ ಬರಬಾರದು ಅಂತಲೋ ,ಕನ್ನಡ ಬರದ ನನ್ನ ಆಫೀಸಿನ ಎಷ್ಟೋ ಫ್ರೆಂಡ್ಸ್ ಗಳು ' Hey everybody told about your blog re.Please translate it into English or Hindi Yar!! Even we want to read' "ಅಂತ ನನ್ನ ಬಂದು ಕೇಳಿದಾಗ ನಾನು ಮಾತನಾಡಲಾಗದೆ ತಡವರಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ ಇನ್ನು ಅಂಬೆಗಾಲಿಡುತ್ತಿರುವ ಮಾನಸರಂಗಕ್ಕೆ.ವರ್ಷದಲ್ಲಿ ನಾನು ಗಳಿಸಿದ್ದು ನೂರಾರು ಹಾರೈಕೆ,ತಪ್ಪದೆ ಓದುವ ಹಲವಾರು ಸ್ನೇಹಿತರು,ಮೆಚ್ಚಿದ ಹಿಂಬಾಲಕರು,ತಿದ್ದುವ ಹತ್ತಿರದವರು.ಪ್ರತಿ ಒಬ್ಬರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ.ನಿಮ್ಮೆಲ್ಲರ ಪ್ರೋತ್ಸಾಹದ ವಿನಃ ಇದೆಲ್ಲ ಅಸಾಧ್ಯ.ನಿಮ್ಮ ಸಲಹೆ, ಮೆಚ್ಚುಗೆಗಳೇ ಒಳ್ಳೆಯ ಬರಹಗಳು ಬರಲು ಪ್ರೇರಣೆ.
ಅಂತು ಒಂದುವರ್ಷ ಹರುಷ ದಲ್ಲಿ ತುಂಬಿತು.ಈ ಕೂಸನ್ನು ಇನ್ನಷ್ಟು ಜತನದಿಂದ ಬೆಳೆಸುವಾಸೆ.ಮತ್ತಷ್ಟು ಗೆಜ್ಜೆದನಿಯನ್ನು ಇಲ್ಲಿ ಕೇಳಿಸುವಾಸೆ.ಹೆಜ್ಜೆಯನ್ನು ಮೂಡಿಸುವಾಸೆ.ಮನದ ಕನವರಿಕೆಗಳಿಕೆ ಅಕ್ಷರರೂಪ ಕೊಡುವಾಸೆ.ಗೊಂದಲಗಳನ್ನು ಬರಹದಲ್ಲಿ ಬಿಂಬಿಸುವಾಸೆ.ಇನ್ನಷ್ಟು ಬೆಳೆಯುವಾಸೆ.ನಿಮ್ಮ ಹಾರೈಕೆ,ಪ್ರೋತ್ಸಾಹ ನಿರಂತರವಾಗಿರಲಿ.ಮತ್ತೆ ಮತ್ತೆ ಅದೇ ಅಭಿಮಾನದೊಂದಿಗೆ ಬರುತ್ತಿರಿ.ಎಡವಿದರೆ ತಿದ್ದುತ್ತಿರಿ.ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
ತುಂಬು ಹ್ರದಯದ ಧನ್ಯವಾದಗಳೊಂದಿಗೆ
ನಿಮ್ಮಳಗೊಬ್ಬಳು