ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ...



ಯುಗ ಯುಗಾದಿ ಕಳೆದರು  ಯುಗಾದಿ ಮರಳಿ ಬರುತಿದೆ.. 

ಯುಗಾದಿ ಹಬ್ಬ ಬಂದಾಗಲೆಲ್ಲ ಈ ಹಾಡು ನೆನಪಾಗುತ್ತದೆ.. ಯುಗಾದಿ ವರ್ಷದ  ಆರಂಭ.  ಭೂಮಿ ತನ್ನ ಸೂರ್ಯನ ಸುತ್ತ ಇನ್ನೊಮ್ಮೆ ಸುತ್ತಲು ತಯಾರಾಗುವ ಕಾಲ. ಯುಗಾದಿ ಎಂದರೆ ಹೊಸತನದ  ಪ್ರತೀಕ . ಜೀವನವೆಂಬ ಪಯಣದಲ್ಲಿ ಪ್ರತಿದಿನವೂ ಪ್ರತಿ ಕ್ಷಣವೂ ಹೊಸತು. ಎಷ್ಟೋ  ಸಂಗತಿಗಳನ್ನ  ಬುತ್ತಿಯಲ್ಲಿ ಇಟ್ಟೆ  ಜೀವನದ ಪ್ರತಿ ದಿನವು ಪ್ರಾರಂಭ ವಾಗುವುದು. ನಾಳೆ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ಹೊಸದೇ.  ನಿನ್ನೆಯಂತೆ ಇಂದಿಲ್ಲ , ಇಂದಿನಂತೆ ನಾಳೆಯಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ .  ಹೊಸತು  ದುಃಖ ವನ್ನೇ ದುತ್ತಗೆ ಎದುರಿಗೆ ನಿಲ್ಲಿಸಬಹುದು  ಅಥವಾ ಸುಖವನ್ನೇ ಉಡುಗರೆ ನೀಡಬಹುದು. ಎಷ್ಟೋ ದಿನಗಳ ನೆಮ್ಮದಿಯನ್ನೇ ಅಲ್ಲಾಡಿಸಬಹುದು . ನಮ್ಮ ಮಾನಸಿಕ ಸ್ತಿರತೆಯನ್ನೇ  ಪಣಕ್ಕಿಡ 
ಬಹುದು. ನಾವು ಪಡುತ್ತಿರುವ ಪ್ರಯತ್ನವೇ  ಸೋಲಬಹುದು . ಅದಕ್ಕೆ ಕಾಲನ ನಿರ್ಣಯದ  ಮುಂದೆ ಎಲ್ಲರು ತಲೆ ಬಾಗಬೇಕಾಗಿದ್ದೆ.   ಬರಿ ಸುಖವಷ್ಟೇ  ಬಂದರೆ ಅದು ಜೀವನವೂ ಅಲ್ಲ, ಜೀವನದ ರುಚಿಯೂ ಇಲ್ಲ .  ನಾನು ಸುಖಿ ಎಂದವನಿಗೂ  ನೆಮ್ಮದಿ ಇರುವುದಿಲ್ಲ . ಕಣ್ಣಿಗೆ ಕಾಣುವುದೆಲ್ಲ  ಸುಖವಾಗಿರಬೇಕೆಂದೂ  ಇಲ್ಲ .  ಅದಕ್ಕೆ ಬಹುಷ:   ಸಮರಸವೇ ಜೀವನ ಎಂದಿರಬೇಕು ಹಿರಿಯರು . ಸುಖ  ದುಃಖಗಳ ಸಮನಾದ ತೂಕವೇ ಜೀವನ . ಸುಖ ಬಂದಾಗ ಹಿಗ್ಗದೆ ದುಃಖ  ಬಂದಾಗ ಜಗ್ಗದೆ ಇರುವವನೇ  ಜೀವನ ವನ್ನು ಜಯಿಸಬಲ್ಲ , ಜಯಿಸಿ  ಮುನ್ನುಗ್ಗಬಲ್ಲ  .  ಅದಕ್ಕೆ ಇರಬೇಕು ವರ್ಷದ ಪ್ರಾರಂಭವಾದ ಯುಗಾದಿಯ ದಿನ ಬೇವು ಬೆಲ್ಲದೊಂದಿಗೆ ದಿನ ಪ್ರಾರಂಭವಾಗುವುದು.  ವರ್ಷಪೂರ್ತಿ  ದಿನಗಳು  ದುಃಖ  ಸುಖಗಳ ಮಿಶ್ರಣವಾಗಿರಬಹುದು. ಅದನ್ನು ಒಂದೇ ತರದಲ್ಲಿ ಸ್ವೀಕರಿಸಿ ಮುಂದೆ ನಡೆಯಬೇಕೆಂದು  ಇದರ ಸಂಕೇತ  

ಹೀಗೆ ಸುಮ್ಮನೆ ಏನಾದರು ಬರೆಯಬೇಕೆಂದು ಅಂದುಕೊಂಡಾಗ ಮನಸ್ಸಿಗೆ ಬಂದ  ಒಂದಿಷ್ಟು  ಸಾಲುಗಳಿವು.  ಬ್ಲಾಗ್ ಪ್ರಪಂಚಕ್ಕೆ ಬರದೆ ವರ್ಷಗಳೇ ಕಳೆದು ಬರವಣಿಗೆ ಎನ್ನುವುದು ಸ್ಥಿಮಿತಕ್ಕೆ ಸಿಗದೇ , ಆಲೋಚನೆಯೂ ಅತ್ತಿತ್ತ ಓಡಾಡುತ್ತಿರುವಾಗ  ಮತ್ತೆ ಏನಾದರು ಬರೆಯಲೇ ಎಂದಾಗ  ನೆನಪಾಗಿದ್ದಿಷ್ಟೇ. 

ಪ್ರತಿಯೊಬ್ಬರ ಜೀವನದಲ್ಲೂ ಬೇವಿನ ಕಹಿ ಕಳೆದು ಬೆಲ್ಲದ  ಸಿಹಿ ಬರಲಿ. ಮತ್ತೆ ಬರೆಯುವ ಮನಸ್ಸು ನನಗೂ ಬರಲಿ.