ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಮುಗಿಸುವ ಮುನ್ನ...

ವರುಷದ ತುದಿಯಲ್ಲಿ ತಿರುಗಿನೋಡಿದಾಗ....
ಹೌದು,ಕೊನೆಗೂ 2010 ಮುಗಿದೇ ಬಿಟ್ಟಿತು.ಮಾನವ ಜೀವನದ ನನ್ನ ಆಯಸ್ಸಿನ ಒಂದು ವರ್ಷ ನನ್ನ ಕೈ ಬಿಟ್ಟು ಜಾರಿತು.2009 ರ ಕೊನೆಯ ದಿನಗಳು.ನನ್ನ ಅತ್ಮೀಯರೆಲ್ಲ ಕೈಯಲ್ಲಿ ಸಂಬಳ ಹಿಡಿದು ನಿಂತಿದ್ದರು.ಕಾಲೇಜು ಜೀವನಕ್ಕೆ ವಿದಾಯ ಹೇಳುವಾಗ Highest Package ನ ಆಫರ್ ಕೈಯಲ್ಲಿ ಹಿಡಿದೂ call ಗಾಗಿ wait ಮಾಡ್ತಾ ಇದ್ದೆ..ನಮ್ಮ ಗ್ರಹಚಾರನೋ ಏನೋ ಎಲ್ಲಾ ಕಡೆಯ ದಾರಿಯು ಮುಚ್ಚಿ ಬಿಟ್ಟಿತ್ತು.ನಾನು ತುಂಬಾನೇ ಕುಗ್ಗಿ ಹೋಗಿದ್ದೆ.ಕೈ ಅಲ್ಲಿ ಮಾರ್ಕ್ಸ್ ಇದ್ದರೂ ಪ್ರಯೋಜನವಿರಲಿಲ್ಲ.ಸದಾ ಇತರರಿಗೆ ಆತ್ಮವಿಶ್ವಾಸದಲ್ಲಿ ಮಾದರಿಯಾಗಿದ್ದ ನಾನು ನನ್ನನ್ನೇ ಕಳೆದು ಕೊಂಡು ಬಿಟ್ಟಿದ್ದೆ.2010 ನನ್ನ ಪಾಲಿಗೆ ಒಳ್ಳೆಯದಾಗಿರಬೇಕೆಂದು ಬಯಸಿದ್ದೆ,ಬೇಡಿದ್ದೆ.ನನ್ನ ಬೇಡಿಕೆ ಸುಳ್ಳಾಗಲಿಲ್ಲ.ನಿಜ 2010 ನನ್ನ ಪಾಲಿನ ಮಹತ್ತರ ದಿನಗಳನ್ನು ಹೊತ್ತ ವರ್ಷ.ಈ ವರ್ಷದಲ್ಲಿ ಹಲವುಗಳು ನನ್ನ ಅಂತರಂಗದ ನೆನಪುಗಳ ಸಾಲಿಗೆ ಸೇರಿವೆ. ಮನದ ಪುಸ್ತಕದಲ್ಲಿ ಭದ್ರವಾಗಿ ಕುಳಿತಿವೆ.ಇಷ್ಟಪತ್ತಿದ್ದನ್ನೆಲ್ಲ ಎತ್ತಿಟ್ಟಿದ್ದೇನೆ.

ಪ್ರತಿಷ್ಠಿತ IT ಕಂಪನಿಯ ಗೇಟ್ ಮುಂದೆ ಇಂಟರ್ವ್ಯೂ ಗೆಂದು ಬಂದಾಗ ನಾನು ಇಲ್ಲಿಗೆ ತಕ್ಕವಳಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೇನೆ.ಹಲವಾರು ಜನರನ್ನು ದಾಟಿ ಅದು ನನಗೆ ಒಲಿದಾಗ ಖುಷಿಯಿಂದ ಬೀಗಿದ್ದೇನೆ.ದೇವರು ಕೊನೆಗೂ ನನ್ನ ಬೇಡಿಕೆಯನ್ನು ಹೊಸವರ್ಷದ ತಿಂಗಳೊಳಗೆ ಪೂರೈಸಿದಾಗ ಮನದಲ್ಲೇ ಥ್ಯಾಂಕ್ಸ್ ಅಂದಿದ್ದೇನೆ.GATE RANKERS ಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಹಠದಿಂದ ಸೇರಿಸಿ ಕೊಂಡಿದ್ದೇನೆ.ಹತ್ತಿರದವರ ವಿಶ್ವಾಸ ಗಳಿಸಿದ್ದೇನೆ.ಬಹಳಷ್ಟನ್ನು ಕಲಿತಿದ್ದೇನೆ,ಕಲಿಸಿದ್ದೇನೆ.ಬಾಲ್ಯದ ನನ್ನ ವೈದ್ಯೆ ಯಾಗುವ ಕನಸನ್ನು ನನ್ನ ತಂಗಿ ಪೂರೈಸಿದಾಗ ಹೆಮ್ಮೆಯಿಂದ ಅವಳ ಭುಜ ತಟ್ಟಿದ್ದೇನೆ.ನನ್ನ ಸಂಗೀತದ ಪಟ್ಟಿ ಮುಟ್ಟಿ ಬೈಸಿಕೊಳ್ಳುತ್ತಿದ್ದ ನನ್ನ ಚಿಕ್ಕ ತಂಗಿ ಹತ್ತಾರು ವೇದಿಕೆಗಳಲ್ಲಿ ಹಾಡುತ್ತಿದ್ದರೆ ಕಣ್ಮುಚ್ಚಿ ತಲೆದೂಗುವ ಜನಗಳನ್ನು ಕಂಡು ಖುಷಿಯಿಂದ ಕಣ್ಣೀರಾಗಿದ್ದೇನೆ.ಮೊದಲ ಸಂಬಳವನ್ನು ಹೆತ್ತವರ ಕೈಗಿತ್ತಾಗ ಹೆಮ್ಮೆಯಿಂದ ಮೈಸವರಿದ, ಅವರ ಕಣ್ಣುಗಳಲ್ಲಿ ಕಂಡ ಸಾರ್ಥಕತೆಯ ಭಾವವನ್ನು ನನ್ನ ನೆನಪಿನಾಳದಲ್ಲಿ ಬಚ್ಚಿಟ್ಟು ಕೊಂಡಿದ್ದೇನೆ.ನನ್ನ ಕನಸಿನ ಕೂಸಾದ 'ಮಾನಸರಂಗ'ವನ್ನು ಕಟ್ಟಿ ಬೆಳೆಸಿದ್ದೇನೆ.ಬ್ಲಾಗ್ ಎಂಬ ಅದ್ಭುತ ಲೋಕಕ್ಕೆ ಅಂಬೆಗಾಲಿಡುತ್ತ ಬಂದಿದ್ದೇನೆ.ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವರನ್ನು ಪಡೆದಿದ್ದೇನೆ.ಬರೆಯುತ್ತ ಎಡವಿದ್ದೇನೆ,ಎಡವುತ್ತಾ ಕಲಿತಿದ್ದೇನೆ.ನೆನಪುಗಳನ್ನು ಬಿಚ್ಚಿ ನನ್ನ ನೆಚ್ಚಿನವರನ್ನ ಭೇಟಿಯಾಗಿದ್ದೇನೆ.ಬಹಳಷ್ಟು ವರ್ಷಗಳ ನಂತರವೂ ಅವರಲ್ಲಿ ಹಾಗೆಯೇ ಉಳಿದ ಆತ್ಮೀಯತೆಯನ್ನು ಕಂಡಿದ್ದೇನೆ.ನನ್ನ ಕೈಲಾದ ಸಹಾಯ ಮಾಡಿದ್ದೇನೆ.ಸಹಾಯ ಪಡೆದು ನನ್ನ ಕಡೆಗಣಿಸಿದವರನ್ನು ಕಂಡು ಪಶ್ಚಾತ್ತಾಪ ಪಟ್ಟಿದ್ದೇನೆ. ಹೊಟ್ಟೆ ನೋವಾಗುವಷ್ಟು ನಕ್ಕಿದ್ದೇನೆ. ಒಮ್ಮೊಮ್ಮೆ ನನ್ನಲ್ಲೇ ನಾನು ಬಿಕ್ಕಿದ್ದೇನೆ.ಜನರ ಒಡನಾಟದಿಂದ ಬದುಕಿನ ಒಳ-ಹೊರಗಿನ ಕಾಳಷ್ಟನ್ನಾದರೂ ಅರಿತಿದ್ದೇನೆ.ನನ್ನಲ್ಲೇ ಬಹಳಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ತಂದು ಕೊಂಡಿದ್ದೇನೆ. ಈ ಶಹರದಲ್ಲೂ ರಕ್ತ ಸಂಬಂಧವಲ್ಲದ ಬಂಧುಗಳನ್ನು ಪಡೆದಿದ್ದೇನೆ.

ನನ್ನ ಈ ವರ್ಷದ ಖುಷಿಯಲ್ಲಿ ಪಾಲುದಾರರು ಹಲವರು..ಸದಾ ನನ್ನ ಆಸೆಗಳಿಗೆ ನೀರೆರೆವ ಅಪ್ಪ-ಅಮ್ಮ,ಚಿಕ್ಕವರಾದರೂ ಕೆಲವೊಂದಕ್ಕೆ ನನ್ನ ಮಾರ್ಗದರ್ಶಿಗಳು ಮತ್ತು ನನ್ನ ಕ್ಲೋಸ್ ಫ್ರೆಂಡ್ಸ್ ಗಳಾದ ನನ್ನ ತಂಗಿಯರು, ಏಳು ವರ್ಷಗಳಿಂದ ಸಹಮನಸಿಗಳಾಗಿ ನನ್ನ ಸುಖ-ದುಃಖ ಅರಿತ ಆತ್ಮೀಯ ಗೆಳತಿ,ಪಯಣಕ್ಕೆ ಜೊತೆಯಾಗಿ ಭಾಂಧವ್ಯ ಬೆಸೆದ roommate ,ಮಗಳಂತೆ ನೋಡಿಕೊಂಡ ಅಕ್ಕ-ಭಾವ,ನನಗೆ ಹೊರೆಯಾಗದಂತೆ ನೋಡಿಕೊಂಡ ಆಫೀಸ್ ಟೀಮ್ ,ಕೆಲಸದ ಜೊತೆಗೆ ಬದುಕನ್ನು ತಿಳಿ ಹೇಳುವ ನನ್ನ ಗುರು,ಮನ ತಟ್ಟಿದ,ಮನೆಯವರಂತಾದ PG ಅಂಕಲ್ -ಆಂಟಿ,ಕಾಲೇಜಿನ ಗೆಳೆಯರನ್ನು ನೆನಪಿಸುವ ಆಫೀಸ್ ಫ್ರೆಂಡ್ಸ್ ಗಳು,ಹಲವು ವರ್ಷಗಳ ನಂತರ ಸಿಕ್ಕ ನನ್ನ  ಆತ್ಮೀಯರು, ಪ್ರತಿ ಭೇಟಿಯಲ್ಲೂ ಆ ದಿನಗಳ ಮರುಕಳಿಸುವಂತೆ ಮಾಡುವ ದೋಸ್ತರು  ,ನನ್ನ ಮನಸಿನ ಭಾವಗಳ ಕನವರಿಕೆಗೆ ವೇದಿಕೆಯಾದ ಬ್ಲಾಗ್ ಪ್ರಪಂಚ,ಮೆಚ್ಚಿ ಓದುವ ಸಹ ಬ್ಲಾಗಿಗರು,ಹಚ್ಚಿಕೊಂಡ ಕೆಲ ಬ್ಲಾಗ್ ಮಿತ್ರರು ಹೀಗೆ ಉದ್ದ ಪಟ್ಟಿಯೇ ಇದೆ.ಇವರೆಲ್ಲರೂ ನನ್ನ ಈ ವರ್ಷದ ಪುಟಗಳಿಗೆ ಬಣ್ಣ ಹಚ್ಚಿದವರು.ಸುಖವನ್ನು ಹಂಚಬೇಕಂತೆ,ದುಃಖವನ್ನು ನುಂಗಬೇಕಂತೆ. ಅಲ್ಲೋ,ಇಲ್ಲೋ ಬಂದ ದುಃಖದ ಕ್ಷಣಗಳು ಈ ಸಂತಸದಲ್ಲಿ ಇಂಗಿ ಹೋಗಿವೆ.ಮತ್ತೆ ಎತ್ತುವ ಪ್ರಯತ್ನ ನನ್ನದಲ್ಲ.ಅಂತೂ 2010 ನ್ನು ಮುಗಿಸಿದ್ದೇನೆ.2011ನ್ನು  ನೀರಿಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದೇನೆ.2011 ರ ಪಾಲಿಗೆ ಕೆಲವೊಂದು ಕನಸುಗಳನ್ನು ಎತ್ತಿಟ್ಟಿದ್ದೇನೆ.ನನಸು ಮಾಡಿಕೊಳ್ಳಲೇ ಬೇಕೆಂಬ ಛಲವಿದೆ.ಸೋತು ಎಲ್ಲಿ ಶರಣಾಗುವೆನೋ ಎಂಬ ಭಯದ ಮನವೂ ಇದೆ.ಹೊಸ ಆಸೆ,ಕಲ್ಪನೆ,ಲವಲವಿಕೆ ಕನಸು ಕಂಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಲು ಮನಸ್ಸು ಸಜ್ಜಾಗಿದೆ. ಡಿವಿಜಿ ಯವರ ಕಗ್ಗವೊಂದು ನೆನಪಾಗ್ತಾ ಇದೆ. 

 ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆ ಯಾಗು
 ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ|
 ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ 
 ಎಲ್ಲರೊಳಗೊಂದಾಗು ಮಂಕುತಿಮ್ಮ||

                                                                             
                                                                     
ಹೊಸ ವರ್ಷದ ಹೊಸ ಮುಂಜಾವು
ತರಲಿ ನಿಮ್ಮ ಬಾಳಲ್ಲಿ ಎಲ್ಲಿಲ್ಲದ ಗೆಲುವು
  ನನಸಾಗಲಿ ಕನಸು,ಹಸನಾಗಲಿ ಮನಸು
ಚಿಗುರಲಿ ಬಾಳಲ್ಲಿ ನವೋಲ್ಲಾಸ
  ಮೂಡಲಿ ಎಲ್ಲರಲಿ ಒಂದೇ ಎಂಬ ಸಮರಸ  

    ***"ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"***

ಮನ..ಸೆರೆಯಾದ ಕ್ಷಣ..


"ನೀನೆ ಫೋನ್ ಮಾಡಲಿ ಎಂದು ಕಾಯ್ತಾ ಇದ್ದೆ..ನನ್ನ ನೆನಪೇ ಆಗೋಲ್ಲ ನಿಂಗೆ " ಎಂದ ತಂಗಿಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ ಈ ಬಾರಿ..ಹೌದು ಎಲ್ಲೋ ಏನೋ ಮರೆಯುತ್ತಿದ್ದೇನೆ..ಮನಸ್ಸು ಕಳೆದು ಹೋಗ್ತಾ ಇದೆ..ಯಾಕೆ ಕಾರಣ ಮಾತ್ರ ನಂಗೆ ಗೊತ್ತಿಲ್ಲ..ನನಗೆಂದೆ ಮೀಸಲಿಟ್ಟ ನನ್ನ ದಿನ ನಿತ್ಯದ ಒಂದಿಷ್ಟು ಸಮಯವೂ  ನನಗರಿವಿಲ್ಲದಂತೆ ಕಳೆದು ಹೋಗ್ತಾ ಇದೆ..ಹಿಗೆ ಏನು ಗೊತ್ತಾಗ್ತಾ ಇಲ್ಲ..ನೆಮ್ಮದಿಯಿಂದ ಕುಳಿತಿದ್ದ ಮನಸ್ಸು ಯಾಕೋ ಗೊಂದಲದ ಗೂಡಾಗಿ ಬಿಟ್ಟಿದೆ..ಎಲ್ಲೋ ನನ್ನ ನೀರಿಕ್ಷೆ,ಕನಸುಗಳು ನನ್ನ ಬಿಟ್ಟು ಜಾರುವಂತೆ ಭಾಸವಾಗ್ತಾ ಇದೆ..ಎಲ್ಲಾ ಕಡೆಯಿಂದಲೂ ಒಂದೇ ಪ್ರಶ್ನೆ..ಉತ್ತರ ಮಾತ್ರ ನನಗೆ ಬಿಡಿಸಲಾಗದ ಒಗಟು..

ನನ್ನ ಆತ್ಮೀಯ ಗೆಳತಿಯಾದ ಓದು,ನನ್ನ ಗುನುಗುನಿಸುವಂತೆ ಮಾಡುವ ಹಳೆಯ,ನನ್ನಿಚ್ಚೆಯ ಹಾಡುಗಳು,ಪೇಪರ್ನಲ್ಲಿ ಬರುವ ತಪ್ಪದೆ ಓದುವ ಕಾಲಂಗಳು,ನನ್ನ ಪಕ್ಕಕ್ಕೆ ಪವಡಿಸುವ ನನ್ನ laptop ಚಿಂಟು,ಇವೆಲ್ಲದಕ್ಕೂ ನಾನು ಇತ್ತೀಚಿಗೆ ಪ್ರಶ್ನೆಯಾಗಿ ಬಿಟ್ಟಿದ್ದೇನೆ..ಮೊದಲಿನ ಚಿಟಿ ಚಿಟಿ ಮಳೆಯಂತ ಮಾತು ಒಮ್ಮೊಮ್ಮೆ ನನ್ನ ಮೌನದಲ್ಲಿ ಕಳೆದು ಹೋಗ್ತಾ ಇದೆ..ಅಪರಿಚತ ಭಾವವೊಂದು ನನ್ನನು ಕಾಡ್ತಾ ಇದೆ.ಗೊತ್ತಿಲ್ಲದೇ ಸದ್ದಿಲ್ಲದೇ ಯಾರೋ ಬಂದು ಕುಳಿತು ಬಿಟ್ಟಿದ್ದಾರೆ. ಈ ಬಾರಿ ಸಿಕ್ಕಿದಾಗ ನನ್ನ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ನನ್ನ ನಗುವೊಂದೇ ಉತ್ತರವಾಗಿ ಸಿಕ್ಕಿದ್ದು ಅವರಿಗೆ..ಓದಲೆಂದು ತಂದ ಪುಸ್ತಕಗಳು  ಸಪ್ಪೆ ಮೋರೆಯಲ್ಲಿ ಇಟ್ಟಲ್ಲೆ ತೆಪ್ಪಗೆ ಕುಳಿತಿವೆ..ಮನಸಿನ ಕನಸೊಂದು ಅರಳಲು ಸಮಯವಿಲ್ಲದೆ ಪರದಾಡುತ್ತಿದೆ..ನೆಮ್ಮದಿಯ ನಿದ್ದೆಯೊಂದು ಮತ್ತೆ ನನ್ನ ಮುಖದಲ್ಲಿನ ಹೂನಗೆಗೆ ಕಾಯುತ್ತಿದೆ..ಕಾಡುತ್ತಿರುವ ಗೊಂದಲಕ್ಕೆ ಪೂರ್ಣವಿರಾಮದ ನೀರಿಕ್ಷೆ..ಇದು ಆಕಸ್ಮಿಕವೋ, ಅನಿವಾರ್ಯವೋ ನಾ ತಿಳಿಯೆ.. 

ನಾನು ಮತ್ತೆ ವಾಪಸ್ಸಾಗ ಬೇಕಿದೆ..ಮತ್ತೆ ಅದೇ ಸುಂದರ ನಿನ್ನೆಗಳಿಗೆ..ಮರೆತ ಪ್ರತಿಯೊಂದನ್ನು ಕಾಳಜಿಯಿಂದ ಎತ್ತಿ ಮತ್ತೆ ಮೊದಲಿನಂತೆ ಮುದ್ದಿಸಬೇಕಾಗಿದೆ..ಇಂದಿನ ನಗುವಿನ ಹಿಂದೆ ಮರೆಯಾದ ಅಂದಿನ ನನ್ನ ತರಹ ತರಹದ ನಗುವಿಗೆ ಹೊಸ ಭಾಷ್ಯ ಕೊಡಬೇಕಾಗಿದೆ..ಸ್ನೇಹಿತರ ಗುಂಪಿನ ನಡುವೆ ಕುಳಿತು ಮತ್ತೆ ಕಾಡಿಸಿಕೊಳ್ಳಬೇಕಾಗಿದೆ..ಹುಸಿ ಮುನಿಸಿನಿಂದ ನಾಚಿಕೊಂಡು ಮತ್ತೆ ಕೆಂಪಗಾಗಬೇಕಾಗಿದೆ..ಹೊಸವರುಷವನ್ನು ಮತ್ತೆ ಹೊಸ ಹುರುಪಿನೊಂದಿಗೆ ಆರಂಭಿಸಬೇಕಿದೆ..ಮೊಗ್ಗಾಗಿ ಅರಳಿದ ಕನಸೊಂದಕೆ ಸೊಗಸಾಗಿ, ನನಸಾಗಿ ಅರಳುವ ಮನಸಾಗಿದೆ..ಉಂಟಾದ ಗೊಂದಲಕ್ಕೆ ಮಂಗಳ ಹಾಡುವ ನೀರಿಕ್ಷೆ..ಹೊಸ ಉತ್ಸಾಹ,ಹೊಸ ಲವಲವಿಕೆಯ ಒಗ್ಗೂಡಿಸಿ ಕೊಳ್ಳುವ ಬಯಕೆ..ಮರೆತ ಅಕ್ಷರಗಳಿಗೆ,ಮೂಡಿದ ಬರಹಗಳಿಗೆ ಅಂತಿಮ ರೂಪ ಕೊಡಬೇಕೆಂಬ ಹಠದೊಂದಿಗೆ..

ನಿಮ್ಮವಳು...