ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಪ್ರೀತಿಯಿಂದ...

ಪ್ರೀತಿಯ ಇವನೇ,

 
ನಾನು ನಿನ್ನನ್ನು ಹೀಗೆ ಕರೆದಾಗಲೆಲ್ಲ  ನಕ್ಕವರು ಎಷ್ಟೋ ಜನ. ಹೆಸರಿಲ್ಲದವರಂತೆ ಕರಿಯುತ್ತಿಯೆಂದು ಹೇಳಿದವರು ಎಷ್ಟೋ ಜನ.ಅವರಿಗೇನು ಗೊತ್ತು ಕೆಲವೊಂದು ಸಂಬಂಧಗಳ ಆತ್ಮೀಯತೆ ಹೆಸರನ್ನು ಮೀರಿ ಬೆಳೆಯುತ್ತದೆ ಎಂದು. ನನಗೆ ನಿನ್ನನ್ನು ಹೀಗೆ ಕರಿಯುವುದೇ ಚಂದ.ಕೆಲವೊಮ್ಮೆ ಸಲಿಗೆ ಹೆಸರನ್ನು ಮರೆಸುತ್ತದೆ, ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಆ ಸಲಿಗೆಯೇ ನಿನ್ನನ್ನು ಹೀಗೆ ಕರೆಯಲು ಪ್ರೇರಣೆ. ನಾ ನಿನ್ನೊಡನೆ ಏಳು ಹೆಜ್ಜೆಗಳನಿಟ್ಟು ನಾಳೆಗೆ ಒಂದು ವರ್ಷಗಳೇ ಸಂದವು.
ಒಂದು ವರ್ಷ ಒಂದು ತಿಂಗಳಂತೆ ಕಳೆದಂತೆ.ಸರಿಯಾಗಿ ಒಂದು ವರ್ಷದ ಹಿಂದೆ ಕೈಯ ತುಂಬಾ ಮದರಂಗಿಯ ಚಿತ್ತಾರಗಳನನ್ನು ಬಿಡಿಸಿಕೊಂಡು ನಾಳೆಗಳ ಕನಸ ಕಣ್ಣ ತುಂಬಾ ತುಂಬಿಕೊಂಡು ಮನೆಯ ತುಂಬಾ ತುಂಬಿದ್ದ ಆತ್ಮೀಯರ ಜೊತೆಗೆ ಹರಟುತ್ತ, ಎಲ್ಲರ ಕಣ್ಣುಗಳೂ ನನ್ನ ಮೇಲೆ ಇದ್ದಿದ್ದನ್ನು ಗಮನಿಸುತ್ತ ಹೊಸ ರೇಶಿಮೆ ಸೀರೆಯನ್ನುಟ್ಟು ತಿರುಗಾಡುತ್ತಿದ್ದೆ.
ಇನ್ನು ಆ ಕ್ಷಣಗಳು ನಿನ್ನೇ ನಡೆದಂತೆ ನನ್ನ ಕಣ್ಣಿನಲ್ಲಿ ಕಟ್ಟಿ ನಿಂತಿವೆ. ಅಳುಕೋ, ಮುಜುಗರವೋ, ಪುಳಕವೋ ಹೆಸರಿಡಲಾಗದ 
ಕೆಲವೊಂದು ಭಾವಗಳು ನನ್ನೊಡನೆ ಆಟವಾಡುತ್ತಿದ್ದವು.ನೂರಾರು ಜನರ ಸಮ್ಮುಖದಲ್ಲಿ, ಮಂಗಲಾಷ್ಟಕದ ಅಕ್ಷತೆಗಳು ನನ್ನ ತಲೆಯಮೇಲೆ ಬಿಳುತ್ತಿದ್ದರೆ ನಾನು ಪರದೆಯಲ್ಲಿ ಕಾಣುತ್ತಿದ್ದ ನಿನ್ನ ಮುಖವನ್ನೇ ನೋಡುತ್ತಿದ್ದೆ.ಬೆಳ್ಳಿ ತಂಬಿಗೆಯ  ಬಾಯಿಂದ ಬಿದ್ದ ಮೂರು ಹನಿ ನೀರು ನನ್ನ ಕಯ್ಯ ಮೇಲಿಟ್ಟಿದ್ದ ತುಳಸಿಯ ದಳಗಳ ಮೇಲೆ ಬೀಳುತ್ತಿದ್ದಂತೆ ಏನೋ ಕಳೆದುಕೊಂಡ ಭಾವ. ತಲೆ ಎತ್ತಿ ನೋಡಿದಾಗ ಕಂಡಿದ್ದು ಅಮ್ಮನ ಕಣ್ಣಿಂದ ಗೊತ್ತಿಲ್ಲದೇ ಜಾರಿದ್ದ ಕಣ್ಣೀರ ಹನಿಗಳು.ಮೊದಲಬಾರಿಗೆಯ ಕರಿಮಣಿ ನನ್ನ ಕೊರಳಲ್ಲಿ ಕಂಡಾಗ ನಾನು ಒಮ್ಮೆಲೇ ಪ್ರಬುದ್ಧಳಾದೇನೇ ಎಂಬ ಭಾವ.ನಿನ್ನ ಕೈಗಳಲ್ಲಿ ನನ್ನ ಕಯ್ಯನಿತ್ತು ಅಪ್ಪ ಕಣ್ಣು ಮುಚ್ಚಿದಾಗ ಅಪ್ಪನ ಮನಸಿನಲ್ಲಿ ಮಗಳಿನ್ನು  ಸುರಕ್ಷಿತ ಎಂಬ ಭರವಸೆ. ಕೇವಲ ಎಳೇ  ಹೆಜ್ಜೆಗಳಲ್ಲಿ ಬದುಕೂ ಪೂರ್ತಿ 
ಹೇಗಿರ ಬೇಕೆಂಬ ನೀತಿ.  ಅದೇ ಸುಂದರ ಭಾವಗಳಿಗೆ, ಕಳೆದು ಹೋದ ಗಳಿಗೆಗಳಿಗೆ, ನಾಳೆಗೆ ಪೂರ್ತಿ ತುಂಬಿದ ಮೂರು ನೂರ ಐವತ್ತು ದಿನಗಳು. ಹೇಗೆ ಕಳೆದವೋ ಗೊತ್ತಿಲ್ಲ.ತಿರುಗಿ ನೋಡಿದರೆ ನನಗೆ ಕಾಣುವುದು ನನ್ನನ್ನು ಸದಾ 
ಖುಷಿಯಾಗಿಟ್ಟಿರುವ ನಿನ್ನ ತುಂಬು ಪ್ರೀತಿ,ನನ್ನ ಕಣ್ಣಲ್ಲಿ ಇಟ್ಟು ಕಾಯುವ ಕಾಳಜಿ, ನಾನು ನಿನ್ನಲ್ಲಿ ಬೇಕೆಂದೇ ತೋರುವ ಹುಸಿಮುನಿಸು , ನಿನ್ನೊಡನೆ ನಾನು ಕಳೆದ ಪ್ರತಿಯೊಂದು ಕ್ಷಣಗಳು.ಅದರೊಡನೆ ಬೆಸೆದು ಹೋದ ಸುಂದರ ಭಾವಗಳು.
 
ಇನಿಯನಾಗುವುದಕ್ಕು, ಗೆಳೆಯ ಎನಿಸಿಕೊಳ್ಳುವುದಕ್ಕು,ಕೇವಲ ಗಂಡನಾಗುವುದಕ್ಕು ತುಂಬಾ ವ್ಯತ್ಯಾಸವಿದೆ ಇವನೇ. ನೀನು ಇವೆಲ್ಲವನ್ನೂ ಮೀರಿದ ನನ್ನ ಬಾಳ ಸಂಗಾತಿ ಎನ್ನಬಲ್ಲೆ.ಅದಕ್ಕೆ ಹೇಳಿದೆ ಕೆಲವೊಂದು ಸಂಬಂಧಗಳು ಹೆಸರಿಸಲು ಸಾಧ್ಯವಾಗದಷ್ಟು ಮೀರಿ ಜೀವದೊಂದಿಗೆ ಹೊಸೆದು ಬೆಸೆದು ಬಿಟ್ಟಿರುತ್ತವೆ ಎಂದು.ನಿನ್ನೊಡನೆ ಮನುಷ್ಯ ಸದಾ ಬಯಸುವ ನೆಮ್ಮದಿ ನನ್ನೊಂದಿಗಿದೆ. ಇದಕ್ಕಿಂತ ಮಿಗಿಲು ಬೇರೇನು ಬೇಕು ಗೆಳೆಯ. ಈ ನೆಮ್ಮದಿಯಲ್ಲಿ ಪ್ರೀತಿ, ಆರಾಧನೆ, ಅನುರಾಗ,ಗೌರವ, ಖುಷಿ, ಮೆಲುವಾದ ಗದರಿಕೆ,ಹುಸಿಮುನಿಸು,ಕಾಳಜಿ,ಅನುಕಂಪ ಎಲ್ಲಾ ಇದೆ. ಎಲ್ಲವನ್ನು ಮೀರಿದ ಯಾವುದೊ ಒಂದು ಹೆಸರಿಸಲಾಗದ ಭಾವ ನನ್ನ ನಿನ್ನ ನಡುವೆ ಸೆಲೆಯಾಗಿ ಸದಾ ಹರಿಯುತ್ತಿದೆ.ಇಷ್ಟೇ ಇವನೇ ನಾನು ದೇವರನ್ನು ಬೇಡಿದ್ದು,ಬಯಸಿದ್ದು.ಆ ಕ್ರಪೆ ಯಾವತ್ತೂ ನಮ್ಮೊಂದಿಗಿರಲಿ.ಈಸೆಲೆಯ ಒರತೆ ಬತ್ತದೆ ಅದರ ಮೆಲುವಾದ ಮೊರೆತ  ಸದಾ ನಮ್ಮ ಕಿವಿಯಲ್ಲಿ ಕೇಳಿಸುತ್ತಿರಲಿ.ನಾನಿರುವ ಅಷ್ಟು ವರ್ಷಗಳೂ ಹೀಗೆಯೇ,ಇನ್ನಷ್ಟುಚಂದವಾಗಿನಿನ್ನೊಂದಿಗಿರಲಿ.
ನಮ್ಮಿಬ್ಬರ ಮನೆಯಲ್ಲಿ ನಮ್ಮಿಂದಾಗಿ ಮನೆಮಾಡಿರುವ  ನಗು ಅಲೆಯಾಗಿ  ಇನ್ನಷ್ಟು ಹೆಚ್ಚಾಗಿ  ಮತ್ತೆ ಮತ್ತೆ ಬರುತ್ತಿರಲಿ. ಆವರ 
ಹಾರೈಕೆ, ಹಿತವಚನ ಸದಾ ನಮ್ಮ ಹಿಂದಿನಂತೆ ಮುಂದೆಯೂ ಕಾಯಲಿ.ಸಂಗಾತಿತ್ವದ ಪ್ರತಿಯೊಂದು ದಿನಗಳು,ಕ್ಷಣಗಳು ನಮ್ಮಿಬ್ಬರಿಗಾಗಿ ನಾವು ಬದುಕುವಂತಿರಲಿ.ಮತ್ತಷ್ಟೂ ವರ್ಷಗಳು ಹೀಗೆಯೇ ನಮ್ಮೊಂದಿಗಿರಲಿ..
 
 
ಮದುವೆಯ ಮೊದಲ ವಾರ್ಷಿಕೋತ್ಸವದ ಶುಭಾಶಯಗಳು ನಿನಗೂ,ನಮ್ಮಿಬ್ಬರಿಗೂ!!!!!! :):)
 
ಇಂತಿ ನಿನ್ನ ಪ್ರೀತಿಯ 
ಇವಳು...
 

ಕನಸು- ನನಸು..



ನೂರಾರು ಹೊಸ ಕನಸುಗಳ ಸಾಲಾಗಿ ಜೋಡಿಸುತ್ತ

ಎಲ್ಲವನ್ನು ನನಸಾಗಿಸುವ ಹೊತ್ತಿಗೆ ದಿನ ಕಳೆದು ಹೋಗಿದ್ದೆ ಗೊತ್ತಾಗಿರಲಿಲ್ಲ..



ಎಲ್ಲಾ ಮೊಗ್ಗುಗಳು ಅರಳುವಂತೆ ಬದುಕು ಅರಳುತ್ತದಂತೆ

ಎಲ್ಲೋ ಓದಿದ ನೆನಪು ಮತ್ತೆ ನೆನಪಾದಂತೆ...

ಗುಂಡಿಗೆಯ ಮೂಲೆಯಲ್ಲಿ ಬಚ್ಚಿಟ್ಟಿದ್ದ ಕನಸಿನ ಮೂಟೆಯ ಬಿಚ್ಚುವ ಮನಸ್ಸಾಗಿತ್ತು..



ನೂರರುಗಳ ಮಧ್ಯ ತಡಕಾಡಿ ಹುಡುಕುವುದೆನು ಜಾಸ್ತಿ ಇರಲಿಲ್ಲ...

ಮೂಟೆಯ ತುಂಬೆಲ್ಲ ತುಂಬಿದ್ದ ಕನಸುಗಳು ನಿನ್ನ ವಿಳಾಸದಲ್ಲೇ ಇದ್ದವಲ್ಲ..



ಮತ್ತೆ ಹೊಸ ಕನಸುಗಳ ನಿನ್ನ ವಿಳಾಸಕ್ಕೆ ತಲುಪಿಸುವ ಹೊತ್ತಿಗೊಂದು ದಿನ ನಿಗದಿಯಾಗಿತ್ತು..

ನಾಚಿಕೊಂಡ ನನ್ನ ಕೆನ್ನೆಗಳೆರಡು ನೀನು ಆವತ್ತಿತ್ತ ಕೆಂಗುಲಾಬಿಯಂತೆ ರಂಗಾಗಿತ್ತು...



ಬದುಕು ಇಂದಿಗೂ ನೀನು ಅವತ್ತಿತ್ತ ಉಂಗುರದ 'ಬಿಳಿ' ಹರಳಿನಂತೆ ಮಿನುಗುತ್ತಿದೆ..

ಖುಷಿಯ ಬಿತ್ತಿ, ಬದುಕು ಹಸನಾದ 'ಹಸಿರು' ನಿನ್ನ ಕೈಗಳಲ್ಲಿ ಹೊಳೆಯುತ್ತಿದೆ..



ಒಂದು ಬೆಳಗ್ಗೆ..


ಇಂದು ಬೆಳಗ್ಗೆ ಎದ್ದಾಗಿನಿಂದ ಮನೆಯ ನೆನಪು ಯಾಕೋ ತುಂಬಾನೇ ಬರ್ತಾ ಇದೆ. ಮೊದಲ ಚೌತಿ ಯನ್ನು ಇಲ್ಲೇ ಕಳಿಯಬೇಕಾದ ಅನಿವಾರ್ಯತೆಯಿಂದಲೋ, ನಿನ್ನೆ ಅಮ್ಮ ಫೋನ್ ಮಾಡಿ ಬೇಸರಿಸಿ ಕೊಂಡಿದ್ದರಿಂದಲೋ ಅರ್ಥವಾಗುತ್ತಿಲ್ಲ. ಯಾಕೋ ಏನೋ ಕಳೆದುಕೊಂಡಂತೆ, ಅರಿವಿಲ್ಲದೆ ಮನಸ್ಸು ದುಃಖಿಸುತ್ತಿದೆ.ಇತ್ತಿಚಿಗೆ  ಸರಿಯಾಗಿ ಮನೆಯಲ್ಲಿ ಎರಡು ದಿನ ಕಳೆದ ನೆನಪೇ ಇಲ್ಲ. ಮೊದಲೆಲ್ಲ ವಾರಗಟ್ಟಲೆ ಮನೆಯಲ್ಲಿ ಉಳಿಯುತ್ತಿದ್ದವಳಿಗೆ ಈಗ ಸರಿಯಾಗಿ ಒಂದುದಿನ ಉಳಿಯುವ ಅವಕಾಶವು ಸಿಗುತ್ತಿಲ್ಲ. ಹೋದಾಗಲೆಲ್ಲ ಅಲ್ಲೋ ಇಲ್ಲೋ,ಅವರ ಮನೆ, ಇವರ ಮನೆ ಎನ್ನುವದರಲ್ಲೇ ಕಳೆದು ಹೋಗುತ್ತಿದೆ.ಪ್ರತಿದಿನದ ಒಂದೇ ದಿನಚರಿಯಲ್ಲಿ ಎರಡು ದಿನ ಬಿಡುವು ಮಾಡಿಕೊಂಡು ಎರಡು ದಿನವಾದರೂ ಹುಟ್ಟಿದ ಮನೆಯಲ್ಲಿ ಆರಾಮಾಗಿ ಕಳೆದು ಬರುವ ಆ ಎರಡು ದಿನಗಳು ಎಂದು ಬರುತ್ತವೋ ಗೊತ್ತಿಲ್ಲ. ಮತ್ತೆ ಮೊದಲಿನಂತೆ ಮನೆಗೆ ಹೋಗಿ, ಆರಾಮಾಗಿ ಹರಟೆ ಹೊಡೆದು, ಅಮ್ಮ, ದೊಡ್ಡಮ್ಮ ಪ್ರೀತಿಯಿಂದ ಮಾಡಿಕೊಡುವ ನನ್ನಿಷ್ಟದ ತಿಂಡಿಯನ್ನೆಲ್ಲ ತಿಂದು, ಹೊತ್ತು ಮುಳುಗುವ ವರೆಗೂ ಮಲಗಿ, ಮತ್ತೆ ಎದ್ದು ಶಾಲೆ ಮನೆಯ ಕಟ್ಟೆಯ ಮೇಲೆ ಕುಳಿತು ತಂಗಿಯೊಂದಿಗೆ ಹರಟೆ ಹೊಡೆದ ದಿನಗಳ ನೆನಪು ಗಳೆಲ್ಲ ಒಮ್ಮೆಲೇ ನುಗ್ಗಿ, ಅಂತರಂಗದ ಮೂಲೆಯಲ್ಲಿ ನಾನೆ ಬಚ್ಚಿಟ್ಟು ಕೊಂಡಿದ್ದ ನೋವುಗಳನ್ನೆಲ್ಲಾ ಕೆದಕಿ ಗೊತ್ತಿಲ್ಲದಂತೆ  ಕಣ್ಣುಗಳಲ್ಲಿ ಬಿಂದುಗಳೆರಡು ಉದುರಿ  ಕುಟ್ಟುತ್ತಿದ್ದ ಲ್ಯಾಪ್ ಟಾಪ್ ನ ಕೀ ಬೋರ್ಡ್ ನ ಮೇಲೆ ಬಿದ್ದಾಗಲೇ  ನೆನಪಾಗಿದ್ದು ನಾನು ಆಫೀಸ್ ನಲ್ಲಿ ಇರುವೆನೆಂದು.

ಇದಕ್ಕೆ ಜವಾಬ್ಧಾರಳು ನಾನೇ.ಯಾವಾಗ ಈ ಮದುವೆಯಾಗಿ ಒಂದು ವರ್ಷ ಆಗೋತ್ತೋ ಅನ್ನುವ  ಭಾವನೆ ನಮ್ಮಿಬ್ಬರಿಗೂ ಈಗಲೇ ಬಂದು ಬಿಟ್ಟಿದೆ.ಮನೆಗೆ ಹೋಗುವ ದಿನದ ತಿಂಗಳ ಮೊದಲೇ ಯಾರ್ಯಾರ ಮನೆಗೆ ಹೋಗಬೇಕೆಂಬ ನಮ್ಮ ಪ್ರವಾಸದ ದಿನಾಂಕ ಮತ್ತು ಸಮಯಗಳು ನಮಗೆ ಗೊತ್ತಿಲ್ಲದಂತೆ ನಿರ್ಧಾರವಾಗಿ ಬಿಟ್ಟಿರುತ್ತವೆ.ಯಾರ ಮನೆಗೂ ಹೋಗ ಬಾರದಂತಲ್ಲ. ಆಗಲೋ ಈಗಲೋ ಸಿಗುವ ನಮ್ಮ ರಜೆಗಳಲ್ಲಿ ಮನೆಗೆ ಮುಖ ತೋರಿಸುವುದೇ ಅಪರೂಪ ವಾಗಿರುವಾಗ ಮುಗಿಯದ ಮದುವೆ ನಂತರದ ಓಡಾಟಗಳು ನನ್ನಲ್ಲಿ ಸಿಟ್ಟು ಮೂಡಿಸುತ್ತಿವೆ. ಎಷ್ಟೋ ಬಾರಿ ಅಪ್ಪ ಅಮ್ಮನಿಗೂ ಇದರ ಬಗ್ಗೆ ಹೇಳಿದಾಗ ಮನೆಗೆ ಬರಲಾರೆ ಎಂದು ಬೈದಿ ದ್ದಿದೆ. ನಿನ್ನೆ ಅಮ್ಮ ಫೋನ್ ಮಾಡಿ ತುಂಬಾ ಬೇಸರಿಸಿ ಕೊಂಡಾಗ ಹೋಗಲಾಗದ ನನ್ನ ಅನಿವಾರ್ಯತೆಗೋ,ಸಿಕ್ಕರೂ ಹಾಕಲಾಗದ ನನ್ನ ಆಫೀಸ್ ರಜೆಯಾ ಮೇಲೆ ಸಿಟ್ಟು ಬಂದು ನಿನ್ನೆಯಿಂದ ಮನಸ್ಸು ಅದನ್ನೇ ಚಿಂತಿಸುತ್ತಾ ಮತ್ತೆ ಮತ್ತೆ ನೆನಪು ಕಾಡುತ್ತಿದೆ. ಇಲ್ಲಿಯವರೆಗೂ ಒಂದು ಹಬ್ಬವನ್ನು ನಾನು ಮಿಸ್ ಮಾಡಿದ ದಾಖಲೆ ಇಲ್ಲ. ಏನೇ ಇದ್ದರೂ ಮನೆ ಎಂದರೆ ಎಲ್ಲವನ್ನು ಬಿಟ್ಟು ಹೊರಡುತ್ತಿದ್ದ ನಾನು ನಮ್ಮಿಬ್ಬರ ಮೊದಲ ಹಬ್ಬಕ್ಕೆ ಹೋಗಲ್ಲಗುತ್ತಿಲ್ಲವಲ್ಲ ಎನ್ನುವುದೇ ನನ್ನಲ್ಲಿ ಹೆಚ್ಚು ದುಃಖವನ್ನು ಉಂಟು ಮಾಡಿದೆ..

ಇಷ್ಟೆಲ್ಲಾ ಮತ್ತೆ ಆಗುವುದು ಬೇಡವೆಂದು, ನನ್ನ ಕ್ಯಾಲೆಂಡರ್ ನೋಡಿ, ಮುಂದಿನ ತಿಂಗಳು ಎರಡು ದಿನವನ್ನು ಗುರುತು ಮಾಡಿ, ಮನೆಗೆ ಹೋಗುತ್ತಿರುವೆನೆಂಬ ಸಣ್ಣ ವಾಕ್ಯದೊಂದಿಗೆ ನನ್ನ ಮ್ಯಾನೇಜರ್ ಗೆ ಮ್ ರಜೆ ಗಾಗಿ ಮೇಲ್ ಕಳಿಸಿದ ಮೇಲೆ ನನ್ನ ಕಣ್ಣು ಗಳಿಂದ ನೀರು ಬರುವುದು ನಿಂತಿದ್ದು. ಈ ಬಾರಿ ಏನೇ ಆಗಲಿ ನಾನು ಎಲ್ಲಿಗೂ ಹೋಗುವುದಿಲ್ಲ.ಮನೆಯಲ್ಲಿ ಯಾರೂ ಕೇಳಿದರು ಇದೆ ನನ್ನ ಉತ್ತರ ಅಷ್ಟೇ.

ಹೀಗೆಕೆ ಬಂತು?????.....

ಅಲ್ಲೊಂದು ಶಾಲೆ. ರಸ್ತೆಯ ಪಕ್ಕದ್ದು. ಶಾಲೆಯ ಮುಂದೊಂದು ಹಳೆಯದಾದ ಧ್ವಜದ ಕಟ್ಟೆ. ವರುಷಕ್ಕೆ ಸರಿಯಾಗಿ ಎರಡು ಸಲ ಅಲ್ಲಿ ಹಳೆಯ ,ಮಾಸಲಿನ ದ್ವಜ ಧೂಳು ಕುಡಗಿಕೊಂಡು ಹಾರಾಡ ಬಹುದು. ದಿನಕ್ಕೆ ಲೆಕ್ಕ ಮಾಡಿ ಆರು ಬಸ್ಸುಗಳು ಹೋಗಬಹುದೇನೋ ಆ ರಸ್ತೆಯಲ್ಲಿ. ಉಳದಿದ್ದು ಬರಿ ಮೋಟರ್ ಸೈಕಲ್ಲುಗಳು,ಸೈಕಲ್ಲುಗಳು,ಅಪ್ಪಿ ತಪ್ಪಿ ಓಡಾಡುವ ಲಾರಿ,ಕಾರು ಮತ್ತು ಜೀಪುಗಳು.ಆದರೆ ಬಸ್ಸನ್ನು ಹಿಂದಿಕ್ಕಿ ಓಡಿಸಿಕೊಂಡು ಹೋಗುವ ಟೆಂಪೋಗಳು ಬಸ್ಸಿಗಿಂತ ಒಂದೈದು ಜಾಸ್ತಿನೆ ಅಂತ ಹೇಳಬಹುದು.ಅಲ್ಲಿ ಓಡಾಡುವ ಜನರು, ದೂರದ ಊರಿಗೆ ಕಾಲೇಜ್ ಗೆ,ಹೈಸ್ಕೊಲ್ ಗೆ ತೆರಳುವವರು ನಂಬಿ ಕೊಂಡಿರುವುದು ಅದೇ ರಸ್ತೆಯನ್ನು,ಅದೇ ಆರು ಬಸ್ಸು ಮತ್ತು ಹೆಚ್ಚಿರುವ ಟೆಂಪೋಗಳನ್ನು.ಈ ರಸ್ತೆಯೇ ನನ್ನ ಈ ಬರಹದ ಜೀವಾಳ. ಇಲ್ಲೇ ನಾನು ಅಧುನಿಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕಂಡಿದ್ದು.ಅದೇ ರಸ್ತೆಯ ಎಡ ಪಕ್ಕದ ಮಣ್ಣು ಹಾದಿ ಹಿಡಿದು ಐದು ನಿಮಿಷ ಹೆಜ್ಜೆ ಹಾಕಿದರೆ ಸಿಗುವುದೇ ನಾನು ಹುಟ್ಟಿ ಬೆಳೆದ ಊರು.ಅದೊಂದು ದಿನ ನಾನು ಯಾವದೋ ಕೆಲಸದ ಮೇರೆಗೆ ಊರಿಗೆ ಹೋಗಿದ್ದೆ. ಬರುವುದು ಎರಡುದಿನ ತಡವಾಗುವುದಿತ್ತು. ಅದು ಹಳ್ಳಿಯಾಗಿದ್ದರಿಂದ ಮೊಬೈಲ್ ಸಂಪರ್ಕ ಅಲ್ಲಿ ಇಲ್ಲ. ಮೊಬೈಲ್ ಸಿಗ್ನಲ್ ಬೇಕೆಂದರೂ ಅದೇ ರಸ್ತೆಯ ಜಾಡನ್ನೇ ಹಿಡಿಯಬೇಕು. ಏರ್ಟೆಲ್, ವೊಡಪೋನ,ಬಿ ಎಸ ಏನ್ ಎಲ್ ಈ ತರಹೇವಾರಿ ಜಾತಿಯ ಸಿಗ್ನಲ್ ಗಳನ್ನು ಎಲ್ಲೋ ದೂರದ ಟವರ ಗಳಿಂದ ಆ ರಸ್ತೆ ಅಲ್ಪ ಸ್ವಲ್ಪ ಹಿಡಿದಿಟ್ಟು ಕೊಂಡಿರುವದರಿಂದ, ಸುತ್ತ ಮುತ್ತಲು ಮೊಬೈಲ್ ಇದೆ ಎಂದು ತೋರಿಸಿ ಕೊಳ್ಳುವ ಎಲ್ಲರಿಗೂ ಅದು ಅಚ್ಚು ಮೆಚ್ಚು.ನನಗೆ ನನ್ನ ಮ್ಯಾನೇಜರ್ ಗೆ ಫೋನ್ ಮಾಡಿ ನಾನು ಬರುವುದು ಟಿಕೆಟ್ ಸಿಗದೇ ತಡವಾಗಿದೆ ಎಂದು ಸುಳ್ಳು ಹೇಳಿ ರಜೆ ಪಡೆಯ ಬೇಕಾಗಿತ್ತು.ಆ ದಿನ ಅದೇ ಕಾರಣಕ್ಕೆ ನಾನು ಆ ರಸ್ತೆಯನ್ನೇ ಅಶ್ರಯಿಸಿದ್ದೆ. ಆ ರಸ್ತೆಯ ಬಗ್ಗೆ, ಅಲ್ಲಿ ಓಡಾಡುವ ಬಸ್ಸುಗಳ ತೊಂದರೆಯ ಬಗ್ಗೆ ಅದೇ ಊರಿನವಳಾದ ನನಗೂ ಚೂರು ಹೆಚ್ಚಿಗೆನೆ ಗೊತ್ತು.ಎಲ್ಲರ ನಂಬಿಕೆನು ಆ ಬಸ್ಸಿನ ಮೆಲಿರುವದರಿಂದ ಅದು ಆಗೊಮ್ಮೆ, ಈಗೊಮ್ಮೆ ಮುಖ ತೋರಿಸುವಾಗ ಅಲ್ಲಿನವರು, ಪಕ್ಕದ ಊರಿನವರು ತಗಾದೆ ತೆಗೆದು, ಪ್ರತಿಭಟನೆ ನಡೆಸಿದ್ದು ದೂರದ ಊರಿನಲ್ಲಿ ಕೆಲಸದ ನಿಮಿತ್ತ ಇರುವ ನನ್ನ ಕಿವಿಗೂ ಬಿದ್ದಿತ್ತು.ಆಗಾಗ ಅಲ್ಲಿ ಬಸ್ಸಿನ ವಿಷಯವಾಗಿ,ಊರವರಿಂದ ಶಾಲೆಯ ಮಕ್ಕಳಿಂದ ಗಲಾಟೆ ಯಾಗುವುದು ನನಗೂ ಗೊತ್ತಿತ್ತು. ಆ ರಸ್ತೆಯ ದಾಟಿ ನಾಲ್ಕು ಹೆಜ್ಜೆ ಹಾಕಿದರೆ ಅಲ್ಲೊಂದು ಮನೆ. ಆ ಮನೆಗೂ ನನಗೂ ಏನೋ ನಂಟು. ನಾನು ಊರಿಗೆ ಹೋದಾಗಲೆಲ್ಲ ಅಲ್ಲಿಗೆ ಹೋಗಿ ಪಟ್ಟಾಂಗ ಹೊಡೆದು ಬರದೆ ಬಿಡುವವನಲ್ಲ. ಅಂದು ಹಾಗೆ ಸುಳ್ಳು ಹೇಳಿ, ಕೊನೆಗೂ ನನ್ನ ಮ್ಯಾನೇಜರ್ ಒಪ್ಪಿಗೆ ಪಡೆದುಕೊಂಡ ಖುಷಿಯಲ್ಲಿ ನಾನಿದ್ದೆ.ತಿರುಗಿ ಮನೆಗೆ ಹೋಗುವಾಗ ದಾರಿಯಲ್ಲಿ ಸಿಗುವ ಆ ಮನೆಗೆ ಎಂದಿನಂತೆ ನನ್ನ ಕಾಲುಗಳು ಪ್ರಯಾಣ ಬೆಳೆಸಿದ್ದವು.



ಆ ಮನೆಯಲ್ಲಿ ನನಗೆ ಬಲು ಇಷ್ಟದ ಜಾಗ ವೆಂದರೆ ಆ ಮನೆಯ ಮೆತ್ತು. ಮೆತ್ತು ಅಂದರೆ ನಮ್ಮಲ್ಲಿ ಕನ್ನಡದ ಉಪ್ಪರಿಗೆ. ಅಲ್ಲಿ ಕುಳಿತು ಇರುವ ಒಂದೇ ಒಂದು ಕಿಟಕಿಯಲ್ಲಿ ಇಣುಕಿದರೆ ನಾನು ಮೇಲೆ ಹೇಳಿರುವ ರಸ್ತೆ,ಪಕ್ಕದ ವಿಶಾಲವಾದ ಬೆಟ್ಟ,ಶಾಲೆ ಎಲ್ಲ ಕಾಣುತ್ತದೆ.ಮಾತಾಡಿ ಸುಸ್ತಾಗಿ ಕುಡಿಯಲು ಮಜ್ಜಿಗೆ ತಂಬುಳಿ ನೀಡುವಂತೆ ಕೇಳಿ ನಾನು ಮೆತ್ತು ಹತ್ತಿ ಕುಳಿತಿದ್ದೆ.ರಸ್ತೆ ಎಂದಿಗಿಂತ ಶಾಂತವಾಗಿತ್ತು.ಶಾಲೆ ಯಾಕೋ ಇಂದು ರಜೆ ಪಡೆದು ಕೊಂಡಂತೆ ಇತ್ತು.ನನಗೆ ತಿಳಿದಿರುವ ಹಾಗೆ ಬೆಳಗ್ಗೆನೇ ಮಕ್ಕಳೆಲ್ಲ ಶಾಲೆಗೆ ಹೋಗಿದ್ದರು. ಅವರೆಲ್ಲ ಶಾಲೆಗೆ ಹೋಗುತ್ತೇವೆಂದು ಹೇಳಿ ಆಮೇಲೆ ಎಲ್ಲಿಗೆ ಹೋದರು ಎನ್ನುವುದರ ಬಗ್ಗೆ ನಾನು ಹೆಚ್ಚಿಗೆ ತಲೆ ಕೆಡಿಸಿ ಕೊಳ್ಳಲಿಲ್ಲ. ಹಾಗೆ ರಸ್ತೆಯ ಮೇಲೆ ನೋಡ ನೋಡುತ್ತಿದ್ದಂತೆ ಅದೇ ನೀಲಿ ಬಿಳಿ ಬಣ್ಣದ ಬಸ್ಸು ತಿರುವು ದಾಟಿ ಬಂತು.ಹೆಚ್ಚಿಗೆ ಜನ ಇದ್ದಂತೆನು ನನಗೆ ಅನಿಸಲಿಲ್ಲ. ಇದ್ದರು ನನಗೆ ಅಷ್ಟು ದೂರದಿಂದ ಸರಿಯಾಗಿ ಒಳಗೆ ಕಾಣಿಸುತ್ತಲೂ ಇರಲಿಲ್ಲ.ಇಳಿದವರು ಎರಡೋ ಮೂರೋ ಜನ. ಇನ್ನೇನು ಬಸ್ಸು ಹೊರಡಬೇಕು, ಹೊರಟು ಅಲ್ಲೇ ಇರುವ ಘಟ್ಟ ಹತ್ತಬೇಕು ದಡ ದಡ ಸದ್ದು. ಎಲ್ಲಿದ್ದರೋ ಅಷ್ಟು ಮಂದಿ. ಕೋಲು, ಕತ್ತಿ ಸಮೇತ ಬಸ್ಸು ಅಡ್ಡ ಗಟ್ಟೆ ಬಿಟ್ಟರು. ಸಿಕ್ಕಿದ್ದನ್ನೆಲ್ಲ ಒಡೆದು, ಒಳಗಿದ್ದವರನ್ನೆಲ್ಲ ಎಳೆದು ತಂದರು. ಪಕ್ಕದ ಬೆಟ್ಟದಿಂದ ಒಣಗಿದ ಹುಲ್ಲುಗಳ ಮಧ್ಯದಿಂದ ಮತ್ತೊಂದಷ್ಟು ಜನ. ಎಲ್ಲರದ್ದು ಒಂದೇ ತರಹದ ಬಿಳಿ ಬಣ್ಣದ ಅಂಗಿ, ಬಿಳಿ ಪಂಚೆ.ಮೊದಲೇ ಸಿದ್ದಮಾಡಿ ಹೊಚು ಹಾಕಿ ಕುಳಿತಿದ್ದರು ಎನಿಸುತ್ತದೆ.ಕಣ್ಣು ಸುಳ್ಳು ಹೇಳುತ್ತಿದೆಯೋ ಎನ್ನುವಂತೆ ನಡೆದೇ ಹೋಯಿತು ರಕ್ತ ಪಾತ. ಕೂಗಿದರು,ಬೇಡಿ ಕೊಂಡರು ಯಾರನ್ನೂ ಬಿಡಲಿಲ್ಲ.ಸಿಟ್ಟು ಇದ್ದಿದ್ದು ರಸ್ತೆ ಸರಿ ಮಾಡದ, ಬಸ್ಸನ್ನು ಸರಿಯಾಗಿ ಓಡಿಸದ ಆಡಳಿತದ ಮೇಲೆ. ಸಿಟ್ಟು ಹರಿದಾಡಿದ್ದು ಅಮಾಯಕ ಜನರ ಮೇಲೆ. ಕೇಳಿದ್ದು, ಓದಿದ್ದು ನನ್ನ ಕಣ್ಣಳತೆಯ ದೂರದಲ್ಲಿ ನಡೆದು ಹೋಗಿತ್ತು. ನನಗಾಗಲಿ, ನಾನಿರುವ ಮನೆಯವರಿಗಾಗಲಿ ಹೊರಗೆ ಬರುವ ಧೈರ್ಯವಾಗಲಿ, ಹುಂಭತನವಾಗಲಿ ಇರಲಿಲ್ಲ. ಅದೆಷ್ಟು ಹೊತ್ತು ಎಲ್ಲಿ ಇದ್ದರೋ ಆ ಶಾಲೆಯ ಮಕ್ಕಳು. ಒಮ್ಮೆಲೇ ಎದುರಿಗೆ ಬಂದು ಜೈಕರ ಹಾಕಿ.,ಧ್ವಜ ಏರಿಸಿ ರಾಷ್ಟ್ರಗೀತೆ ಹಾಡೇ ಬಿಟ್ಟರು.ಕಾಲಿಗೆ ಸಿಕ್ಕವರನ್ನೆಲ್ಲ ತುಳಿಯುತ್ತ ಆ ಜನರೂ ಕೂಡ ಅವರ ಸೇರಿಕೊಂಡು ಶಿಸ್ತಿನಿಂದ ಗೀತೆ ಹಾಡಿ ಪ್ರಾರ್ಥನೆ ಸಲ್ಲಿಸಿದರು.ನನ್ನ ಹಳ್ಳಿಯಲ್ಲಿ, ಯಾರಿಗೂ ಕೇಡು ಬಯಸದ ಮುಗ್ಧ ಜನರ ನಡುವಿನಲ್ಲಿ ಈ ಕ್ರಾಂತಿಯ ಬೀಜ ಬಿದ್ದು, ಬೆಳೆದು ಹೇಗೆ ಹೆಮ್ಮರವಾಗಿ ಇಲ್ಲಿಯವರೆಗೆ ಅವರ ತಂದು ನಿಲ್ಲಿಸಿತು ಎನ್ನುವ ಪ್ರಶ್ನೆಗೆ ಉತ್ತರ ನನಗೆ ಎಷ್ಟು ಯೋಚಿಸಿದರೂ ಸಿಗಲಿಲ್ಲ. ಆಡಳಿತ ವ್ಯವಸ್ಥೆಗೆ ಬುದ್ದಿ ಕಲಿಸಲು ನಮ್ಮ ಜನರು ಹಿಂಸಾ ಮಾರ್ಗವನ್ನೇಕೆ ಹಿಡಿದರು ಎನ್ನುವುದು ನನಗೆ ಅರಿವಾಗಲಿಲ್ಲ. ಮಲೆನಾಡ ಅಕ್ರಮಿಸುತ್ತಿರುವ ನಕ್ಸಲ ಸಂಪ್ರದಾಯ ಪದ್ಧತಿ ನಮ್ಮ ಊರಿನೊಳಗೆ ಆಶ್ರಯ ಪಡೆಯಲು ಕಾರಣರಾರು ಎನ್ನುವ ಸಂಶಯ ನನ್ನಲ್ಲಿ ಹರಿದಾಡಿತು.ಪಟ್ಟಣದ ಗಾಳಿ,ಸೋಂಕು ಏನು ಅರಿಯದೆ ನಿರ್ಮಲವಾಗಿ, ನಿರ್ಜನವಾಗಿ, ನಿರುಪದ್ರವಿಯಾಗಿ ಸುಮ್ಮನೆ ತಣ್ಣನೆ ಮಲಗಿದ್ದ ಹಳ್ಳಿಗಳಿಗೆ ಹೇಗೆ ಸೋಕಿಬಿಟ್ಟಿತು ಎನ್ನುವುದೇ ನನಗೆ ತಿಳಿಯದ ಮರ್ಮ. ನಿಜಕ್ಕೂ ಬೇಸಿಗೆಯ ರಾತ್ರಿ ಬಿದ್ದ ಇಂತ ಕರಾಳ ಕನಸಿಗೆ ಬೆವರಿದ್ದೆ.ಕನಸಲ್ಲೇ ಹೆದರಿ ಕೂಗಿದ್ದೆ. ಕ್ರಾಂತಿಯ ಪುಸ್ತಕಗಳಿರಲಿ, ರಾತ್ರಿ ಹತ್ತರ ಕ್ರೈಂ ಸ್ಟೋರಿ ನಡೆಸಿಕೊಡುವ ಮನುಷ್ಯನ ಸ್ವರ ಕೇಳೆ ಹೆದರುವ ನನಗೆ ಇಂಥ ಕನಸೆಕೆ ಬಿತ್ತು ಎನ್ನುವುದು ಮಾತ್ರ ಇಂದಿಗೂ,ಈ ಕ್ಷಣದ ವರೆಗೂ ಸೋಜಿಗದ ಸಂಗತಿ.

ಜೊತೆ ಜೊತೆಯಲಿ ಎನ್ನುವುದಕ್ಕೆ ಹೀಗೊಂದು ಅರ್ಥವೇ????!......


ಮದುವೆಯ ಈ ಬಂಧ, ಅನುರಾಗದ ಅನುಬಂಧ...ಏಳೇಳು ಜನುಮದಲು ತೀರದ ಸಂಬಂಧ...

ಈ ಹಾಡಿನ   ಸಾಲುಗಳು ತುಂಬಾ ಸರಳವಾಗಿದ್ದರೂ ಇದರ ಒಳಾರ್ಥ ಅರ್ಥಪೂರ್ಣವಾಗಿದ್ದೂ,ಸಮಾಜಕ್ಕೆ ಒಂದುರೀತಿಯಲ್ಲಿ ಸಂದೇಶವನ್ನು ಸಾರುವಂತಿದೆ.

ಮದುವೆ ಎನ್ನುವುದು ಪ್ರತಿಯೊಬ್ಬ ಹೆಣ್ಣು-ಗಂಡಿನ ಅಮೂಲ್ಯವಾದ ಘಟ್ಟ.ಸಾಗಿದ ಸಹಸ್ರಾರು ದಿನಗಳ ಒಂಟಿ ಜೀವನಕ್ಕೆ ತಿರುವು ನೀಡಿ ಜಂಟಿಯಾಗುವ ಕಾಲ.ಎಲ್ಲೋ ಹುಟ್ಟಿ ಎಲ್ಲೋ ಬೆಳೆದು,ಆಚಾರ,ವಿಚಾರಗಳೆಲ್ಲವೂ  ಬೇರೆ ಬೇರೆಯಾದ ಎರಡು ಮನಗಳನ್ನು ಸೇರಿಸಿ ಸೈರಿಸಿ,ಮೂರು ಗಂಟಿನಲ್ಲಿ ಕಟ್ಟಿ,ಏಳು ಹೆಜ್ಜೆಗಳ ನಡೆದು,ಜೀವನ ಪೂರ್ತಿ ಕಷ್ಟವೋ,ಸುಖವೋ,ನಿನ್ನೊಂದಿಗೆ ನನ್ನ ಪಾಲೂ ಸೇರಲಿ ಎಂಬ ವಚನದೊಂದಿಗೆ, ಮುಂಬರುವ ದಿನಗಳಲ್ಲಿ ನಮ್ಮಿಬ್ಬರ  ನಿಲುವು ಒಂದೇ ಆಗಿರಲಿ ಎಂದು  ಕಾಯಾ, ವಾಚ, ಮನಸಾ ಪ್ರಮಾಣ ಮಾಡುವ ದಿನ. ಮದುವೆ  ನಮ್ಮ ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವನ್ನು ಹೊಂದಿದೆ.ಪುರುಷ ಮತ್ತು ಪ್ರಕೃತಿ ಈ ಸೃಷ್ಟಿಯ ಎರಡು ಕಣ್ಣುಗಳೆಂದೇ ಭಾವಿಸಿದೆ.ಒಂದು ಹೆಣ್ಣು-ಗಂಡಿನ ಸಂಬಂಧ ಕ್ಕೆ ಮದುವೆಯ ಪವಿತ್ರವಾದ ನೆಲೆಗಟ್ಟನ್ನು ನೀಡಿ ಕೇವಲ ದೈಹಿಕ ವಾಂಛೆ ಗಳ ದ್ರಷ್ಟಿಯಲ್ಲಿ ಅದನ್ನು ನೋಡದೆ ಲೌಕಿಕ ಸುಖವನ್ನು ಹೊಂದಲೆಂಬ ಉನ್ನತ ಆಶಯ ನಮ್ಮ ಭಾರತೀಯ ಸಂಸ್ಕೃತಿಯದ್ದು.ಇದು ಕೇವಲ ಇಬ್ಬರ ನಡುವಿನ ಬಾಂಧವ್ಯವಾಗಿರದೆ ಎರಡು ಕುಟುಂಬಗಳ, ಹಲವಾರು ಬಂಧು ಬಾಂಧವರ ಗಳ ನಡುವಿನ ಸಂಬಂಧವು ಹೌದು.


ಜಗತ್ತು ಹಿಂದಿಗಿಂತ ಅಭಿವೃದ್ಧಿಯಾಗಿದೆ.ಕಾಲಕ್ಕೆ ತಕ್ಕಂತೆ ನಡುವಳಿಕೆಗಳು ಬದಲಾಗುತ್ತಿವೆ.ಎಷ್ಟೋ ಸಂಗತಿಗಳು ತಮ್ಮ ಸತ್ವವನ್ನು ಕಳೆದುಕೊಂಡು ಬಡವಾಗುತ್ತಿರುವುದು ಸಾಮಾನ್ಯವೆಂಬಂತೆ ಸ್ವೀಕಾರವಾಗಿ ಬಿಟ್ಟಿದೆ.ಮದುವೆಯೂ  ಇದಕ್ಕೆ ಹೊರತಾಗಿಲ್ಲ.ಜೊತೆ ಜೊತೆಯಲಿ ಎನ್ನುವುದಕ್ಕೆ ಹೊಸ ಅರ್ಥವನ್ನೇ ಕೊಟ್ಟು,ಯಾವದೇ ಸಂಬಂಧಗಳ ಕೊಂಡಿಯನ್ನು ಬೆಸೆಯದೆ ನಾಲ್ಕು ದಿನ ಒಬ್ಬರೊಡನೆ ಕಳೆದು ಸಂಗಾತಿತ್ವದ ಸಾಮರ್ಥ್ಯವನ್ನು ಬದುಕಿದ ನಾಲ್ಕಾರು ದಿನಗಳಲ್ಲಿ ಅಳೆದು, ಕೊನೆಗೆ ಸರಿಯಿಲ್ಲವೆಂಬ ರಶೀದಿಯೊಂದಿಗೆ ಏನೂ ಆಗಿಲ್ಲವೆಂಬಂತೆ ಎದ್ದು ಹೋಗಿಬಿಡಬಲ್ಲ "Living Together"  ಎನ್ನುವ ಪಾಶ್ಚಾತ್ಯ ರೀತಿ ನಮ್ಮ ಭಾರತದಂತಹ ದೇಶದಲ್ಲೂ ನಗೆ ಬೀರುತ್ತಿದೆ ಎಂದರೆ ನಾವೆಷ್ಟು ಮುಂದುವರೆದಿದ್ದೇವೆ ಎನ್ನುವುದು ಕೇಳಿ ಕೊಳ್ಳಬೇಕಾದ ಪ್ರಶ್ನೆಯೇ. ನಂಬಿಕೆಯ ಅಡಿಗಟ್ಟಿನಲ್ಲಿ, ಪರಸ್ಪರರ ಭಾವನೆಗಳನ್ನು  ಗೌರವಿಸುವ,ಹೊಂದಿ ಕೊಳ್ಳುವ, ಇಬ್ಬರಿಗಾಗಿ ಬದುಕು ಎನ್ನುವಂತೆ ಬದಕುವ  ಮದುವೆ ಎಂಬ ಕಾಳಜಿಗೂ, ಒಬ್ಬರೊಂದೊಬ್ಬರಿಗೆ ಅವಲಂಬನೆಯೇ ಇಲ್ಲದಂತೆ ಕವಲು ದಾರಿಯಲ್ಲಿ ನಡೆಯುತ್ತಾ ಕೇವಲ ದೈಹಿಕ ಆಕರ್ಷಣೆಯ ಮುಂದೆ ಮೈಚಾಚಿ ಮಲಗುವ ಈ ಹೊಲಸು ಪದ್ಧತಿ ನಮಗೆ ಎಷ್ಟು ಸರಿ.?.ಜೀವನಪೂರ್ತಿ ಒಬ್ಬರನ್ನೇ ನೆಚ್ಚಿಕೊಂಡು ನಡೆದು ಬಂದ ಈ ದಾರಿಯಲ್ಲಿ ಇವರು ಹೊಂದದಿದ್ದರೆ ಇನ್ನೊಬ್ಬರು,ಇನ್ನೋಬ್ಬರಾಗದಿದ್ದರೆ ಮತ್ತೊಬ್ಬರು ಹೀಗೆ ಬದಲಾಯಿಸುವ ಪದ್ಧತಿ ಎಷ್ಟು ಮನಸಿಗೆ ಹಿತವಾಗಬಲ್ಲದು?. ಸಮೀಕ್ಷೆಯ ಪ್ರಕಾರ ನಮ್ಮ ದೇಶದ ಎಲ್ಲ ಮೆಟ್ರೋಪಾಲಿಟನ್ ಸಿಟಿಗಳನ್ನು ಆತಂಕಕಾರಿ ರೀತಿಯಲ್ಲಿ ಸದ್ದಿಲ್ಲದೇ ಅಕ್ರಮಿಸುತ್ತಿರುವ ಮಹಾಮಾರಿ ಇದು.


ಹೌದು.ಬದಲಾವಣೆಯ,ಆಧುನಿಕತೆಯ ಗಾಳಿ ಬೀಸಬೇಕು.ನಾವು ಮುಂದುವರಿಯಬೇಕಾದರೆ ಎಲ್ಲರೆದುರು ಮುಖವೊಡ್ಡಿ ನಿಲ್ಲಬೇಕಾದರೆ ಇದು ಅವಶ್ಯಕತೆಯಷ್ಟೇ ಅನಿವಾರ್ಯ.ಆದರೆ ಆ ಗಾಳಿ ನಮ್ಮ ಬುಡವನ್ನೇ ಅಲ್ಲಾಡಿಸ ಹೊರಟಾಗ ಎಚ್ಚೆತ್ತು ಕೊಳ್ಳಬೇಕಾಗಿರುವುದು ಅಷ್ಟೇ ಅವಶ್ಯ.ಬದುಕಿಗೆ ಬದಲಾವಣೆ ಸಕಾರತ್ಮಕ ವಾಗಿ ಬೇಕೆ ಹೊರತು ಬದಲಾವಣೆಯೇ ಬದುಕಾಗಿ, ನಕಾರಾತ್ಮಕ ಪರಿಣಾಮವನ್ನು ಸಮಾಜದ ಮೇಲೆ ಬೀರಲು ಆಸ್ಪದ ನೀಡಬಾರದಲ್ಲವೇ.?ನಮ್ಮ ಜನತೆ ಇದರ ಬಗ್ಗೆ ಗಮನಹರಿಸ ಬೇಕಾಗಿದೆ.ಪಶ್ಚಾತ್ತಾಪ ಪಡಬೇಕಾಗುವ ಮುನ್ನ ಅರಿತರೆ,ಮುನ್ನುಗ್ಗುವ ಅಬ್ಬರದೆದುರು ಅವಲೋಕನೆಯ ಕಣ್ಣಿದ್ದರೆ ನಮಗೂ ಒಳ್ಳೆಯದು.ಸಮಾಜಕ್ಕೂ ಒಳ್ಳೆಯದು.

ತುಂಬಿದವು ವರ್ಷಗಳೆರಡು....


ಸರಿಯಾಗಿ ದಿನದ ಹಿಂದೆ ಬೆಳ ಬೆಳಗ್ಗೆನೇ ಫೋನ್ ಮಾಡಿದ ಗೆಳತಿ ಹುಟ್ಟು  ಹಬ್ಬಕ್ಕೆ ಎಂದಿನಂತೆ ವಿಶ್ ಮಾಡುವುದನ್ನು ಮರೆತಿದ್ದನ್ನು ನೆನಪಿಸಿಕೊಳ್ಳುತ್ತಿದ್ದಳು.ಮರೆತಿದ್ದು ಎನ್ನುವುದಕ್ಕಿಂತ ಅವಳಿಗೆ ಯಾವಾಗಲೂ ಗೊಂದಲ ನನ್ನ ಹುಟ್ಟು ಹಬ್ಬದ ತಿಂಗಳ ಬಗ್ಗೆ.ತುಸುವೇ ತಡವಾಗಿದ್ದ ನನಗೆ ಫೋನ್ ನಲ್ಲಿ ಮಾತಾಡಲು ಸಮಯವಿರಲಿಲ್ಲ.ಸಂಜೆ ಮಾಡುವುದಾಗಿ ಫೋನ್ ಇಟ್ಟು ಬಿಟ್ಟಿದ್ದೆ. ಆಫೀಸ್ ಗೆ ಬಂದು ಎಂದಿನಂತೆ ಮೇಲ್ ಚೆಕ್ ಮಾಡುವಾಗ ಅದೇ ಗೆಳತಿಯಿಂದ ಒಂದು ಸುಂದರ ಮೇಲ್. ಏನಪ್ಪಾ ಎಂದು ನೋಡಿದೊಡನೆ ಒಂದು ರೀತಿಯ ಆಶರ್ಯ ಪುಳಕ ನನ್ನಲ್ಲಾಗಿತ್ತು. ಅದೇ ಗೆಳತಿ ತಾಯಿಯಾಗುವ ಸಂಭ್ರಮ ದಲ್ಲಿದ್ದಳು.ಅಯ್ಯೋ ಅದನ್ನು ಹೇಳುವುದಕ್ಕೆ ಮೊದಲೇ ಫೋನ್ ಇಟ್ಟು ಬಿಟ್ಟೆನಲ್ಲ ಎನ್ನುವ ಹಪ ಹಪಿ ನನ್ನಲ್ಲಿ. ಒಂದು ಕ್ಷಣ ಅವಳ ಮನಸ್ಥಿತಿಯ ಬಗ್ಗೆ ಯೋಚನೆ ಮಾಡಿದ್ದೆ ಖುಷಿ ಸಂತಸ.ಮೇಲ್ ನೋಡಿದ ಪ್ರತಿಯೊಬ್ಬರಿಗೂ ಇದೆ ಖುಷಿಯಲ್ಲಿ ಭಾಗಿಯಾಗುವ,ನಮ್ಮೆಲ್ಲರ ಒಳಗೆ ಒಂದಾಗಿದ್ದ ಅವಳನ್ನು ಈ ಸ್ಥಾನದಲ್ಲಿ ಒಮ್ಮೆ ನೋಡಬೇಕೆಂಬ ಆಸೆ.ಪ್ರಶ್ನೆಗಳ ಸುರಿಮಳೆಯೇ ಅವಳ ಮೇಲೆ. ಅವಳ ಖುಷಿ ನೋಡಿ ನಾವು ಹಿಗ್ಗಿದ್ದೆವು.ಒಂದು ಮಗುವಿನ ತಾಯಿಯಾಗುವ ಸುಖವೇ ಆ ತರವೋ ನಾ ಕಾಣೆ.ಅದನ್ನು ಅನುಭವಿಸುತ್ತಿರುವ ಅವಳನ್ನೇ ಕೇಳಿ ತಿಳಿಯಬೇಕು.

ಇಷ್ಟೆಲ್ಲಾ ಹೇಳುತ್ತಿರುವುದು,ಹಂಚಿ ಕೊಳ್ಳುತ್ತಿರುವುದು ಸರಿಯಾಗಿ ಎರಡು ವರ್ಷದ ಹಿಂದೆ ನನ್ನ ಕನಸಿನ ಕೂಸು ಮಾನಸರಂಗ ಜನ್ಮ ತಳೆದಾಗ,ನನ್ನದೇ ಹೆಸರಿನಲ್ಲಿ ಬ್ಲಾಗ್ ಪ್ರಪಂಚದಲ್ಲಿ ಕಣ್ಣು ಬಿಟ್ಟಾಗ ನನ್ನಲ್ಲೂ ಇಂತದ್ದೇ ಒಂದು ಬಗೆಯ ತಳಮಳ,ಖುಷಿ,ಪುಳಕ ವಿತ್ತು.ಮೊತ್ತ ಮೊದಲ ಬಾರಿಗೆ ನನ್ನ ಬರಹಕ್ಕೆ ಪ್ರತಿಕ್ರಿಯೆ ದೊರೆತಾಗ ನಾನು ಹೀಗೆ ಖುಷಿ ಪಟ್ಟಿದ್ದೆ.ನನ್ನ ಮಾನಸರಂಗವನ್ನು ಬಹು ಜೋಪಾನವಾಗಿ,ಪ್ರೀತಿಯಿಂದ ಬೆಳೆಸಬೇಕೆಂಬ ಸಂಕಲ್ಪ ಮಾಡಿದ್ದೆ.ಅದೇ ಮಾನಸರಂಗಕ್ಕೆ ಇಂದಿಗೆ ಎರಡು ವರ್ಷಗಳು.ಬಹು ಪ್ರೇಮದಿಂದ,ಕಾಳಜಿಯಿಂದ ಈ ಕನಸಿನ ಕೂಸನ್ನು ಇಲ್ಲಿಯವರೆಗೆ ಬೆಳಸಿದ್ದೇನೆ.ಇನ್ನು ಹೆಚ್ಚು ಬೆಳೆಸಬೇಕೆಂಬ ಆಸೆ ನನ್ನದು.ಕಳೆದ ವರ್ಷದಲ್ಲಿ ಸಮಯದ ಅಭಾವದಿಂದಲೋ,ಜೀವನದ ಮಹತ್ವದ ದಿನಗಳ ಹೊತ್ತ ವರ್ಷ ವಾಗಿದ್ದರಿಂದಲೋ ನನ್ನ ಆರೈಕೆ ಸ್ವಲ್ಪ ಕಡಿಮೆಯೇ.ಅದು ಈ ವರ್ಷದಲ್ಲಿ ಮರುಕಳಸಿದೆ, ಕೂಸು ಬಡವಾಗದಂತೆ ಕಾಳಜಿ ವಹಿಸಬೇಕು ಅಂದು ಕೊಂಡಿದ್ದೇನೆ.ಜೊತೆಗೆ ಹೆಜ್ಜೆ ಹಾಕುತ್ತ ಓದಿ ಬೆನ್ನು ತಟ್ಟಲು,ತಪ್ಪಿದರೆ ಬೈದು ತಿದ್ದಲು ಈ ವರ್ಷದಲ್ಲಿ ಹಲವರು ಸೇರಿದ್ದಾರೆ.ಎಂದಿನಂತೆ ನಿಮ್ಮ ಅಭಿಮಾನ ನಿರಂತರವಾಗಿರಲಿ.ಬಯಕೆ ನನ್ನದು ,ಪ್ರೋತ್ಸಾಹ ನಿಮ್ಮದು..


ಧನ್ಯವಾದಗಳೊಂದಿಗೆ
ವಾಣಿಶ್ರೀ ಭಟ್

ಪ್ರೀತಿ...














ವರುಷದ ಹಿಂದೆ ಅರಿವಿಲ್ಲದೆ ನೀ ಬಂದಾಗ,ನೀನಾರೋ ನಾನಾರೋ ..
ಸಂಧಿಸುವಂತೆ ಮಾಡಿದ್ದು ಪರಿಸ್ಥಿತಿಯೋ,ಕಾಣದೆ ಕಾಯುವ ಕಯ್ಯೋ..
ಮನಸಿನಲ್ಲಿ ನನ್ನ ಆಗ ಕಾಡಿದ್ದು ಇದೆಲ್ಲ ಈಗಲೇ ಬೇಕೆ?...

ಕೇಳುವವರ ಕಣ್ಣ ತಪ್ಪಿಸಿ ನಾ ತಿರುಗುವಾಗ..
ಕನಸಲ್ಲೂ ಅದೊಂದೇ ಭೀತಿ, ನನ್ನ ಭವಿಷ್ಯವನ್ನಾಡಿದ ಅವನ ಮಾತಿನ ರೀತಿ..
ಗುರು ಬಲವು  ಹಿಂಬದಿಯಲ್ಲೇ ಇರುವಾಗ ಯಾವ ಹರನ ನಾ ಬೇಡಿದರೇನು..
ಅವ ತಾನೇ ಏನು ಮಾಡಿಯಾನು...

ಅಲ್ಲೇ ನಿಶ್ಚಯಿಸಿದಂತೆ,ನೀ  ಬದುಕಿಗೆ ಹೊಸ ಮುನ್ನುಡಿ ಬರೆದಾಗ
ಖಾಲಿಯಾಗಿದ್ದ ಮನಸಲ್ಲಿ ತುಂಬಿ ಕೊಂಡಿದ್ದು ಅದೇ ಹುಚ್ಚು ಪ್ರೀತಿ...
ನನ್ನ ನಾ ನೋಡಿಕೊಂಡಂತೆ ನಿನ್ನನ್ನೂ ಬೆಚ್ಚಗಿಡುವ ನೀತಿ....

ಮತ್ತೆ ಮುಂದಿನದು ಇಬ್ಬರಿಗೂ ಗೊತ್ತು,
ಹೇಗೆ ಕಳೆದವೋ..ವರುಷದ ಹನ್ನೆರಡರಲ್ಲಿ ಹತ್ತು...

ಮೊನ್ನೆ ಮೊನ್ನೆ ಅಷ್ಟೇ ನಿನ್ನೊಡನೆ ಏಳು ಹೆಜ್ಜೆ ಇಟ್ಟಾಗ..
ಸರಿದಾಡಿದ ರೇಶಿಮೆ ಸೀರೆಯ ಸದ್ದು ಇನ್ನು ನನ್ನ ಕಿವಿಯಲ್ಲಿ..
ಹತ್ತಿರಿದ್ದವರ ಕಣ್ಣ ತಪ್ಪಿಸಿ ಹಿಡಿದ ಕೈಯ್ಯ ಮೆದುವಾಗಿ
ಅದುಮಿದ ನೆನಪೇ ನನ್ನ ಇತ್ತೀಚಿನ ಕನಸುಗಳಲ್ಲಿ...

 ನಾ ಕಳೆದ ಎಷ್ಟೋ ಕ್ಷಣಗಳ ಮಧುರ ನೆನಪುಗಳು ನನ್ನ ಸೆರಗಿನಲ್ಲಿ..
ಬಾ ತುಂಬಿಕೊ ನೀನಗೂ ನೀಡುವೆ ಒಂದಿಷ್ಟ ನನ್ನ  ಪುಟ್ಟ ಬೊಗಸೆಯಲ್ಲಿ...

ಹೂವು......

ಮೊಗ್ಗಾಗಿ ಮೂಡಿತು ಕನಸು...

ಭಾವಗಳ ಬಣ್ಣವ ತಳೆದು,

ಸೊಗಸಾಗಿ ಅರಳುವ ಸೂಚನೆಯ

ನಿರೀಕ್ಷೆಯ ಕಂಪು ನೆಟ್ಟವರ ಮನದಲ್ಲಿ......


ಒಂದೊಂದು ಎಸಳಲು ಒಂದೊಂದು ಭಾವ...

ಬಿಚ್ಚಿಕೊಳ್ಳುವ ಬಯಕೆ ಅರಳುವ ಮುನ್ನ..

ಬುಡದಲೇ ಸಡಿಲವಾಯಿತೆ ಅರಿವಿಲ್ಲದೆಯೆ...

ಮುದುಡಿತು ಉದುರುವ ಭಯದ ನಡುಕದಲ್ಲಿ....



ಯಾರದು ತಪ್ಪು, ಯಾರದು ಒಪ್ಪು...

ಮಣ್ಣೇ ಕ್ಷೀಣವೋ,ಬಿತ್ತಿದ್ದೇ ಸರಿಯಿಲ್ಲವೊ..

ಇಲ್ಲ ಎರೆದ ನೀರಿನಲ್ಲಿ ಹೊಕ್ಕಿದ ವಿಷವೊ....

ತಪ್ಪಿಲ್ಲದೆ ನರಳಿತು ಹೂವು ಮಾತ್ರ ಮ್ಲಾನದಲ್ಲಿ......