ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಪ್ರೀತಿಯಿಂದ...

ಪ್ರೀತಿಯ ಇವನೇ,

 
ನಾನು ನಿನ್ನನ್ನು ಹೀಗೆ ಕರೆದಾಗಲೆಲ್ಲ  ನಕ್ಕವರು ಎಷ್ಟೋ ಜನ. ಹೆಸರಿಲ್ಲದವರಂತೆ ಕರಿಯುತ್ತಿಯೆಂದು ಹೇಳಿದವರು ಎಷ್ಟೋ ಜನ.ಅವರಿಗೇನು ಗೊತ್ತು ಕೆಲವೊಂದು ಸಂಬಂಧಗಳ ಆತ್ಮೀಯತೆ ಹೆಸರನ್ನು ಮೀರಿ ಬೆಳೆಯುತ್ತದೆ ಎಂದು. ನನಗೆ ನಿನ್ನನ್ನು ಹೀಗೆ ಕರಿಯುವುದೇ ಚಂದ.ಕೆಲವೊಮ್ಮೆ ಸಲಿಗೆ ಹೆಸರನ್ನು ಮರೆಸುತ್ತದೆ, ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಆ ಸಲಿಗೆಯೇ ನಿನ್ನನ್ನು ಹೀಗೆ ಕರೆಯಲು ಪ್ರೇರಣೆ. ನಾ ನಿನ್ನೊಡನೆ ಏಳು ಹೆಜ್ಜೆಗಳನಿಟ್ಟು ನಾಳೆಗೆ ಒಂದು ವರ್ಷಗಳೇ ಸಂದವು.
ಒಂದು ವರ್ಷ ಒಂದು ತಿಂಗಳಂತೆ ಕಳೆದಂತೆ.ಸರಿಯಾಗಿ ಒಂದು ವರ್ಷದ ಹಿಂದೆ ಕೈಯ ತುಂಬಾ ಮದರಂಗಿಯ ಚಿತ್ತಾರಗಳನನ್ನು ಬಿಡಿಸಿಕೊಂಡು ನಾಳೆಗಳ ಕನಸ ಕಣ್ಣ ತುಂಬಾ ತುಂಬಿಕೊಂಡು ಮನೆಯ ತುಂಬಾ ತುಂಬಿದ್ದ ಆತ್ಮೀಯರ ಜೊತೆಗೆ ಹರಟುತ್ತ, ಎಲ್ಲರ ಕಣ್ಣುಗಳೂ ನನ್ನ ಮೇಲೆ ಇದ್ದಿದ್ದನ್ನು ಗಮನಿಸುತ್ತ ಹೊಸ ರೇಶಿಮೆ ಸೀರೆಯನ್ನುಟ್ಟು ತಿರುಗಾಡುತ್ತಿದ್ದೆ.
ಇನ್ನು ಆ ಕ್ಷಣಗಳು ನಿನ್ನೇ ನಡೆದಂತೆ ನನ್ನ ಕಣ್ಣಿನಲ್ಲಿ ಕಟ್ಟಿ ನಿಂತಿವೆ. ಅಳುಕೋ, ಮುಜುಗರವೋ, ಪುಳಕವೋ ಹೆಸರಿಡಲಾಗದ 
ಕೆಲವೊಂದು ಭಾವಗಳು ನನ್ನೊಡನೆ ಆಟವಾಡುತ್ತಿದ್ದವು.ನೂರಾರು ಜನರ ಸಮ್ಮುಖದಲ್ಲಿ, ಮಂಗಲಾಷ್ಟಕದ ಅಕ್ಷತೆಗಳು ನನ್ನ ತಲೆಯಮೇಲೆ ಬಿಳುತ್ತಿದ್ದರೆ ನಾನು ಪರದೆಯಲ್ಲಿ ಕಾಣುತ್ತಿದ್ದ ನಿನ್ನ ಮುಖವನ್ನೇ ನೋಡುತ್ತಿದ್ದೆ.ಬೆಳ್ಳಿ ತಂಬಿಗೆಯ  ಬಾಯಿಂದ ಬಿದ್ದ ಮೂರು ಹನಿ ನೀರು ನನ್ನ ಕಯ್ಯ ಮೇಲಿಟ್ಟಿದ್ದ ತುಳಸಿಯ ದಳಗಳ ಮೇಲೆ ಬೀಳುತ್ತಿದ್ದಂತೆ ಏನೋ ಕಳೆದುಕೊಂಡ ಭಾವ. ತಲೆ ಎತ್ತಿ ನೋಡಿದಾಗ ಕಂಡಿದ್ದು ಅಮ್ಮನ ಕಣ್ಣಿಂದ ಗೊತ್ತಿಲ್ಲದೇ ಜಾರಿದ್ದ ಕಣ್ಣೀರ ಹನಿಗಳು.ಮೊದಲಬಾರಿಗೆಯ ಕರಿಮಣಿ ನನ್ನ ಕೊರಳಲ್ಲಿ ಕಂಡಾಗ ನಾನು ಒಮ್ಮೆಲೇ ಪ್ರಬುದ್ಧಳಾದೇನೇ ಎಂಬ ಭಾವ.ನಿನ್ನ ಕೈಗಳಲ್ಲಿ ನನ್ನ ಕಯ್ಯನಿತ್ತು ಅಪ್ಪ ಕಣ್ಣು ಮುಚ್ಚಿದಾಗ ಅಪ್ಪನ ಮನಸಿನಲ್ಲಿ ಮಗಳಿನ್ನು  ಸುರಕ್ಷಿತ ಎಂಬ ಭರವಸೆ. ಕೇವಲ ಎಳೇ  ಹೆಜ್ಜೆಗಳಲ್ಲಿ ಬದುಕೂ ಪೂರ್ತಿ 
ಹೇಗಿರ ಬೇಕೆಂಬ ನೀತಿ.  ಅದೇ ಸುಂದರ ಭಾವಗಳಿಗೆ, ಕಳೆದು ಹೋದ ಗಳಿಗೆಗಳಿಗೆ, ನಾಳೆಗೆ ಪೂರ್ತಿ ತುಂಬಿದ ಮೂರು ನೂರ ಐವತ್ತು ದಿನಗಳು. ಹೇಗೆ ಕಳೆದವೋ ಗೊತ್ತಿಲ್ಲ.ತಿರುಗಿ ನೋಡಿದರೆ ನನಗೆ ಕಾಣುವುದು ನನ್ನನ್ನು ಸದಾ 
ಖುಷಿಯಾಗಿಟ್ಟಿರುವ ನಿನ್ನ ತುಂಬು ಪ್ರೀತಿ,ನನ್ನ ಕಣ್ಣಲ್ಲಿ ಇಟ್ಟು ಕಾಯುವ ಕಾಳಜಿ, ನಾನು ನಿನ್ನಲ್ಲಿ ಬೇಕೆಂದೇ ತೋರುವ ಹುಸಿಮುನಿಸು , ನಿನ್ನೊಡನೆ ನಾನು ಕಳೆದ ಪ್ರತಿಯೊಂದು ಕ್ಷಣಗಳು.ಅದರೊಡನೆ ಬೆಸೆದು ಹೋದ ಸುಂದರ ಭಾವಗಳು.
 
ಇನಿಯನಾಗುವುದಕ್ಕು, ಗೆಳೆಯ ಎನಿಸಿಕೊಳ್ಳುವುದಕ್ಕು,ಕೇವಲ ಗಂಡನಾಗುವುದಕ್ಕು ತುಂಬಾ ವ್ಯತ್ಯಾಸವಿದೆ ಇವನೇ. ನೀನು ಇವೆಲ್ಲವನ್ನೂ ಮೀರಿದ ನನ್ನ ಬಾಳ ಸಂಗಾತಿ ಎನ್ನಬಲ್ಲೆ.ಅದಕ್ಕೆ ಹೇಳಿದೆ ಕೆಲವೊಂದು ಸಂಬಂಧಗಳು ಹೆಸರಿಸಲು ಸಾಧ್ಯವಾಗದಷ್ಟು ಮೀರಿ ಜೀವದೊಂದಿಗೆ ಹೊಸೆದು ಬೆಸೆದು ಬಿಟ್ಟಿರುತ್ತವೆ ಎಂದು.ನಿನ್ನೊಡನೆ ಮನುಷ್ಯ ಸದಾ ಬಯಸುವ ನೆಮ್ಮದಿ ನನ್ನೊಂದಿಗಿದೆ. ಇದಕ್ಕಿಂತ ಮಿಗಿಲು ಬೇರೇನು ಬೇಕು ಗೆಳೆಯ. ಈ ನೆಮ್ಮದಿಯಲ್ಲಿ ಪ್ರೀತಿ, ಆರಾಧನೆ, ಅನುರಾಗ,ಗೌರವ, ಖುಷಿ, ಮೆಲುವಾದ ಗದರಿಕೆ,ಹುಸಿಮುನಿಸು,ಕಾಳಜಿ,ಅನುಕಂಪ ಎಲ್ಲಾ ಇದೆ. ಎಲ್ಲವನ್ನು ಮೀರಿದ ಯಾವುದೊ ಒಂದು ಹೆಸರಿಸಲಾಗದ ಭಾವ ನನ್ನ ನಿನ್ನ ನಡುವೆ ಸೆಲೆಯಾಗಿ ಸದಾ ಹರಿಯುತ್ತಿದೆ.ಇಷ್ಟೇ ಇವನೇ ನಾನು ದೇವರನ್ನು ಬೇಡಿದ್ದು,ಬಯಸಿದ್ದು.ಆ ಕ್ರಪೆ ಯಾವತ್ತೂ ನಮ್ಮೊಂದಿಗಿರಲಿ.ಈಸೆಲೆಯ ಒರತೆ ಬತ್ತದೆ ಅದರ ಮೆಲುವಾದ ಮೊರೆತ  ಸದಾ ನಮ್ಮ ಕಿವಿಯಲ್ಲಿ ಕೇಳಿಸುತ್ತಿರಲಿ.ನಾನಿರುವ ಅಷ್ಟು ವರ್ಷಗಳೂ ಹೀಗೆಯೇ,ಇನ್ನಷ್ಟುಚಂದವಾಗಿನಿನ್ನೊಂದಿಗಿರಲಿ.
ನಮ್ಮಿಬ್ಬರ ಮನೆಯಲ್ಲಿ ನಮ್ಮಿಂದಾಗಿ ಮನೆಮಾಡಿರುವ  ನಗು ಅಲೆಯಾಗಿ  ಇನ್ನಷ್ಟು ಹೆಚ್ಚಾಗಿ  ಮತ್ತೆ ಮತ್ತೆ ಬರುತ್ತಿರಲಿ. ಆವರ 
ಹಾರೈಕೆ, ಹಿತವಚನ ಸದಾ ನಮ್ಮ ಹಿಂದಿನಂತೆ ಮುಂದೆಯೂ ಕಾಯಲಿ.ಸಂಗಾತಿತ್ವದ ಪ್ರತಿಯೊಂದು ದಿನಗಳು,ಕ್ಷಣಗಳು ನಮ್ಮಿಬ್ಬರಿಗಾಗಿ ನಾವು ಬದುಕುವಂತಿರಲಿ.ಮತ್ತಷ್ಟೂ ವರ್ಷಗಳು ಹೀಗೆಯೇ ನಮ್ಮೊಂದಿಗಿರಲಿ..
 
 
ಮದುವೆಯ ಮೊದಲ ವಾರ್ಷಿಕೋತ್ಸವದ ಶುಭಾಶಯಗಳು ನಿನಗೂ,ನಮ್ಮಿಬ್ಬರಿಗೂ!!!!!! :):)
 
ಇಂತಿ ನಿನ್ನ ಪ್ರೀತಿಯ 
ಇವಳು...
 

11 comments:

ಇವಳೇ,
ನಾನು "ಇವನಾಗಿದ್ದಕ್ಕೆ" ಧನ್ಯ :) ಯಾವಾಗಲು "ಇವನಾಗಿರುವ" ಆಸೆ....

ನಿನ್ನ ಪ್ರೀತಿಯ,
ಇವನು...

 

Many Congrats to "ಇವಳು" & "ಇವನು". Very touchy write up Vaani :)

 

ಅವನು ಇವಳ ಕಣ್ಣಲ್ಲಿ ಇವನಾದ ಬಗೆ ಅದ್ಭುತವಾಗಿದೆ.ಇವನು-ಇವಳ ಜೋಡಿ ಸದಾ ಕಾಲ ಹೀಗಿಯೇ ಇರಲಿ.

 

Sooper ... :) noorkaala heegeye nagu naguttiri.. :)

 

ಚಂದಿದ್ದು ಅಕ್ಕಾ...ಬರೆಯುತ್ತಿರಿ :)

 

ಇಬ್ಬರೂ ಹೀಗೆಯೇ ಹೆಸರಿಗೆ ಮೀರಿದ ಬೆಸುಗೆಯೊಂದಿಗೆ ನೂರ್ಕಾಲ ಬಾಳಿ ಎಂಬ ಹಾರೈಕೆ :)

 

ಇವಳ ಶ್ರೀ 'ವಾಣಿ'ಗೆ ಇವನು 'ಪ್ರಸನ್ನ' ,
ಶುಭ ಹಾರೈಕೆಗಳು,

ನಿಮ್ಮ ಸಂತಸದ ಕ್ಷಣಗಳು ಅಪರಿಮಿತವಾಗಲಿ :)

 

ಅಭಿನಂದನೆಗಳು........ಸುಂದರ ಬರಹ...ನಿಮ್ಮ ಜೀವನ ಇದೆ ರೀತಿ ಸದಾ ಹಸನಾಗಿರಲಿ.....

 

Congrats,
I am regular follower of your blog .
Wish you great journey of life ahead :-)

 

ಉತ್ತಮವಾಗಿದೆ.
ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....
http://spn3187.blogspot.in/

 

Post a Comment