ಸರಿಯಾಗಿ ದಿನದ ಹಿಂದೆ ಬೆಳ ಬೆಳಗ್ಗೆನೇ ಫೋನ್ ಮಾಡಿದ ಗೆಳತಿ ಹುಟ್ಟು ಹಬ್ಬಕ್ಕೆ ಎಂದಿನಂತೆ ವಿಶ್ ಮಾಡುವುದನ್ನು ಮರೆತಿದ್ದನ್ನು ನೆನಪಿಸಿಕೊಳ್ಳುತ್ತಿದ್ದಳು.ಮರೆತಿದ್ದು ಎನ್ನುವುದಕ್ಕಿಂತ ಅವಳಿಗೆ ಯಾವಾಗಲೂ ಗೊಂದಲ ನನ್ನ ಹುಟ್ಟು ಹಬ್ಬದ ತಿಂಗಳ ಬಗ್ಗೆ.ತುಸುವೇ ತಡವಾಗಿದ್ದ ನನಗೆ ಫೋನ್ ನಲ್ಲಿ ಮಾತಾಡಲು ಸಮಯವಿರಲಿಲ್ಲ.ಸಂಜೆ ಮಾಡುವುದಾಗಿ ಫೋನ್ ಇಟ್ಟು ಬಿಟ್ಟಿದ್ದೆ. ಆಫೀಸ್ ಗೆ ಬಂದು ಎಂದಿನಂತೆ ಮೇಲ್ ಚೆಕ್ ಮಾಡುವಾಗ ಅದೇ ಗೆಳತಿಯಿಂದ ಒಂದು ಸುಂದರ ಮೇಲ್. ಏನಪ್ಪಾ ಎಂದು ನೋಡಿದೊಡನೆ ಒಂದು ರೀತಿಯ ಆಶರ್ಯ ಪುಳಕ ನನ್ನಲ್ಲಾಗಿತ್ತು. ಅದೇ ಗೆಳತಿ ತಾಯಿಯಾಗುವ ಸಂಭ್ರಮ ದಲ್ಲಿದ್ದಳು.ಅಯ್ಯೋ ಅದನ್ನು ಹೇಳುವುದಕ್ಕೆ ಮೊದಲೇ ಫೋನ್ ಇಟ್ಟು ಬಿಟ್ಟೆನಲ್ಲ ಎನ್ನುವ ಹಪ ಹಪಿ ನನ್ನಲ್ಲಿ. ಒಂದು ಕ್ಷಣ ಅವಳ ಮನಸ್ಥಿತಿಯ ಬಗ್ಗೆ ಯೋಚನೆ ಮಾಡಿದ್ದೆ ಖುಷಿ ಸಂತಸ.ಮೇಲ್ ನೋಡಿದ ಪ್ರತಿಯೊಬ್ಬರಿಗೂ ಇದೆ ಖುಷಿಯಲ್ಲಿ ಭಾಗಿಯಾಗುವ,ನಮ್ಮೆಲ್ಲರ ಒಳಗೆ ಒಂದಾಗಿದ್ದ ಅವಳನ್ನು ಈ ಸ್ಥಾನದಲ್ಲಿ ಒಮ್ಮೆ ನೋಡಬೇಕೆಂಬ ಆಸೆ.ಪ್ರಶ್ನೆಗಳ ಸುರಿಮಳೆಯೇ ಅವಳ ಮೇಲೆ. ಅವಳ ಖುಷಿ ನೋಡಿ ನಾವು ಹಿಗ್ಗಿದ್ದೆವು.ಒಂದು ಮಗುವಿನ ತಾಯಿಯಾಗುವ ಸುಖವೇ ಆ ತರವೋ ನಾ ಕಾಣೆ.ಅದನ್ನು ಅನುಭವಿಸುತ್ತಿರುವ ಅವಳನ್ನೇ ಕೇಳಿ ತಿಳಿಯಬೇಕು.
ಇಷ್ಟೆಲ್ಲಾ ಹೇಳುತ್ತಿರುವುದು,ಹಂಚಿ ಕೊಳ್ಳುತ್ತಿರುವುದು ಸರಿಯಾಗಿ ಎರಡು ವರ್ಷದ ಹಿಂದೆ ನನ್ನ ಕನಸಿನ ಕೂಸು ಮಾನಸರಂಗ ಜನ್ಮ ತಳೆದಾಗ,ನನ್ನದೇ ಹೆಸರಿನಲ್ಲಿ ಬ್ಲಾಗ್ ಪ್ರಪಂಚದಲ್ಲಿ ಕಣ್ಣು ಬಿಟ್ಟಾಗ ನನ್ನಲ್ಲೂ ಇಂತದ್ದೇ ಒಂದು ಬಗೆಯ ತಳಮಳ,ಖುಷಿ,ಪುಳಕ ವಿತ್ತು.ಮೊತ್ತ ಮೊದಲ ಬಾರಿಗೆ ನನ್ನ ಬರಹಕ್ಕೆ ಪ್ರತಿಕ್ರಿಯೆ ದೊರೆತಾಗ ನಾನು ಹೀಗೆ ಖುಷಿ ಪಟ್ಟಿದ್ದೆ.ನನ್ನ ಮಾನಸರಂಗವನ್ನು ಬಹು ಜೋಪಾನವಾಗಿ,ಪ್ರೀತಿಯಿಂದ ಬೆಳೆಸಬೇಕೆಂಬ ಸಂಕಲ್ಪ ಮಾಡಿದ್ದೆ.ಅದೇ ಮಾನಸರಂಗಕ್ಕೆ ಇಂದಿಗೆ ಎರಡು ವರ್ಷಗಳು.ಬಹು ಪ್ರೇಮದಿಂದ,ಕಾಳಜಿಯಿಂದ ಈ ಕನಸಿನ ಕೂಸನ್ನು ಇಲ್ಲಿಯವರೆಗೆ ಬೆಳಸಿದ್ದೇನೆ.ಇನ್ನು ಹೆಚ್ಚು ಬೆಳೆಸಬೇಕೆಂಬ ಆಸೆ ನನ್ನದು.ಕಳೆದ ವರ್ಷದಲ್ಲಿ ಸಮಯದ ಅಭಾವದಿಂದಲೋ,ಜೀವನದ ಮಹತ್ವದ ದಿನಗಳ ಹೊತ್ತ ವರ್ಷ ವಾಗಿದ್ದರಿಂದಲೋ ನನ್ನ ಆರೈಕೆ ಸ್ವಲ್ಪ ಕಡಿಮೆಯೇ.ಅದು ಈ ವರ್ಷದಲ್ಲಿ ಮರುಕಳಸಿದೆ, ಕೂಸು ಬಡವಾಗದಂತೆ ಕಾಳಜಿ ವಹಿಸಬೇಕು ಅಂದು ಕೊಂಡಿದ್ದೇನೆ.ಜೊತೆಗೆ ಹೆಜ್ಜೆ ಹಾಕುತ್ತ ಓದಿ ಬೆನ್ನು ತಟ್ಟಲು,ತಪ್ಪಿದರೆ ಬೈದು ತಿದ್ದಲು ಈ ವರ್ಷದಲ್ಲಿ ಹಲವರು ಸೇರಿದ್ದಾರೆ.ಎಂದಿನಂತೆ ನಿಮ್ಮ ಅಭಿಮಾನ ನಿರಂತರವಾಗಿರಲಿ.ಬಯಕೆ ನನ್ನದು ,ಪ್ರೋತ್ಸಾಹ ನಿಮ್ಮದು..
ಧನ್ಯವಾದಗಳೊಂದಿಗೆ
ವಾಣಿಶ್ರೀ ಭಟ್

