ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ,ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....
ಅದ್ಭುತವಾದ ಅರ್ಥಪೂರ್ಣ ಸಾಲುಗಳು.ಪ್ರತಿಬಾರಿಯೂ ಈ ಹಾಡು ಕೇಳಿದ ಐದು ನಿಮಿಷ ನನ್ನನ್ನೇ ಮರೆಸುವ ಸಾಲುಗಳಿವು.ಹೌದು.ಈ ಜೀವನದ ಹಲವಾರು ಸನ್ನಿವೇಶಗಳಲ್ಲಿ,ಹಂತದಲ್ಲಿ ಅರಿತು ಕೊಳ್ಳುವುದು ಎನ್ನುವುದು ಎಷ್ಟು ಮುಖ್ಯವಾಗಿರುತ್ತದೆ ಎನ್ನುವುದು ಕೆಲವೊಮ್ಮೆ ನಮ್ಮ ಅನುಭವಕ್ಕೆ ಬಂದಾಗಲೇ ಅರ್ಥವಾಗುವಂತದ್ದು.ಮೊನ್ನೆ ನನ್ನ ಗೆಳೆಯನೊಬ್ಬ ’ಅರಿತು ಕೊಳ್ಳುವುದು ಎಂದರೇನು,ಇದು ಅನಿವಾರ್ಯ ಎಂದೆಕೆ ನಾವು ಅಂದು ಕೊಳ್ಳುತ್ತೇವೆ?’ ಹೀಗೆ ಆಕಸ್ಮಿಕವಾಗಿ ನನ್ನ ಕೇಳಿದಾಗ ಮತ್ತೆ ನನಗೆ ಈ ಹಾಡು ನೆನಪಾಗಿತ್ತು.ಆ ಕ್ಷಣದಲ್ಲಿ ನಾನು ಉತ್ತರಕ್ಕಾಗಿ ಹುಡುಕಾಡಿದರೂ ದಿನ ಮುಗಿಯುವುದರಲ್ಲಿ ನಾನು ತಕ್ಕ ಮಟ್ಟಿನ ಉತ್ತರ ನೀಡುವಲ್ಲಿ ಸಫಲಳಾಗಿದ್ದೆ.ಆದರೆ ಉತ್ತರ ನೀಡಿದ ಮೇಲೂ ಈ ಪ್ರಶ್ನೆ ನನ್ನ ಕಾಡುವುದನ್ನು ನಿಲ್ಲಿಸಲಿಲ್ಲ.ಹೌದಲ್ಲವೇ ಎಷ್ಟೋ ಸಂಗತಿಗಳನ್ನು ಅರಿಯುವದನ್ನು ನಾವು ಮರೆಯುತ್ತೇವೆ.ಮರೆತು ಪೇಚಾಡುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಮೇಲ್ನೊಟಕ್ಕೆ ಸರಳವಾಗಿ ಕಂಡರೂ, ಸಂಬಂಧಗಳ ಪರಿಧಿಯಲ್ಲಿ ಬಂದಾಗ ಇದು ಅತ್ಯಂತ ಸೂಕ್ಷ್ಮವಾದ,ಒಮ್ಮೊಮ್ಮೆ ಬಿಡಿಸಲಾಗದ ಕಗ್ಗಂಟು.ಮಾತು ಎನ್ನುವುದು ಮನುಷ್ಯನಿಗೆ ತನ್ನ ಭಾವನೆಗಳನ್ನು ಒಂದರ್ಥದಲ್ಲಿ ಹೊರ ಹಾಕಲು ಅನುವು ಮಾಡಿ ಕೊಟ್ಟರೂ ಎಲ್ಲವನ್ನು ಮಾತಿನಲ್ಲಿ ವ್ಯಕ್ತಪಡಿಸಲು,ಹೊರ ಪ್ರಪಂಚಕ್ಕೆ ತಿಳಿಯಪಡಿಸಲು ಅವನು ಅಸಮರ್ಥ.ಮೌನವೇ ಕೆಲವೊಂದಕ್ಕೆ ಉತ್ತರ.ಹೀಗಿರುವಾಗ ಅರಿವುದು, ನಾವು ನಿಮ್ಮ ಅರಿತಿದ್ದೇವೆ ಎನ್ನುವುದು ಮತ್ತೊಬ್ಬರ ಕ್ರತಿಯ ಮೂಲಕವೇ ಹೊರಬರಬೇಕು.ನಾವು ನಿತ್ಯ ಹಲವಾರು ಜನರನ್ನು ನೋಡುತ್ತೇವೆ.ಒಬ್ಬರು ಮತ್ತೊಬ್ಬರಿಗಿಂತ ಭಿನ್ನರು.ಒಂದಿಷ್ಟು ಜನ ತಮಗೆ ಅನ್ನಿಸಿದ್ದನ್ನು ಹೇಳಬಲ್ಲರು,ಮತ್ತೊಂದಷ್ಟು ಜನ ತಮ್ಮಲ್ಲೇ ಅನಿಸಿಕೆಯನ್ನು ಇಟ್ಟು ಕೊಳ್ಳುವವರು.ಇಂತಹ ವಿಭಿನ್ನತೆಗಳ ಮಧ್ಯವೇ ನಮ್ಮ ಬದುಕು ಸಾಗಬೇಕು.ಇಂತಹ ಸ್ಥಿತಿಯಲ್ಲಿ ಈ ಅರಿತುಕೊಳ್ಳುವುದು ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಅನಿವಾರ್ಯ ಎನಿಸುತ್ತದೆ.
ಅರಿತು ಕೊಳ್ಳುವುದು ಎನ್ನುವುದಕ್ಕೆ ಅರ್ಥ ಹುಡುಕುವುದು ಸ್ವಲ್ಪ ಕಷ್ಟವೇ.ಕೆಲವೊಮ್ಮೆ ಅರಿವನ್ನೆ ಅರಿತುಕೊಳ್ಳಲು ನಾವು ಹೆಣಗಾಡುತ್ತೇವೆ.ಪ್ರತಿಯೊಬ್ಬನೂ ಅರಿವುದನ್ನು ತಮ್ಮ ಹತ್ತಿರದವರಿಂದ,ಅತ್ಮೀಯರಿಂದ ಒಂದಲ್ಲ ಒಂದು ರೀತಿಯಲ್ಲಿ ಬಯಸುತ್ತಾನೆ.ಛೇ ಅವರು ನನ್ನ ಅರ್ಥ ಮಾಡಿಕೊಳ್ಳುವುದೇ ಇಲ್ಲ ಎಂದು ಅಲವತ್ತು ಕೊಳ್ಳುತ್ತಾನೆ.ನಿಜ. ಸಂಪೂರ್ಣವಾಗಿ ನಾವು ಇನ್ನೊಬ್ಬರ ಮನಸನ್ನು ಅರಿಯಲು ಸಾಧ್ಯವಿಲ್ಲ.ಅದರಂತೆ ಅಲ್ಪವನ್ನಾದರೂ ಅರಿಯದೇ ಹೋಗಲೂ ಸಾಧ್ಯವಿಲ್ಲ.ಅದರ ಪ್ರಮಾಣ ಸಂಬಂಧದ ಅಳೆತೆ ಗೋಲಿನ ಮೇಲೆ ನಿರ್ಧಾರವಾಗುತ್ತದೆ. ಅರಿವುದನ್ನೇ ಮರೆತದ್ದರಿಂದ ಎಷ್ಟೊ ಸಂಬಂಧಗಳು ಹಳಸಿದ್ದನ್ನು,ಮುರಿದದ್ದನ್ನು ನಾವು ಕಾಣುತ್ತೇವೆ,ಕೇಳುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಒಂಥರ Inbuilt Expectations. .ಇದು ಇರಲೇ ಬೇಕು. ಆದರೆ ಅತಿಯಾದರೇ ಅಮ್ರತವು ವಿಷವಂತೆ.ಎದುರಿಗಿರುವ ವ್ಯಕ್ತಿ ನಮ್ಮನ್ನೂ ಸಂಪೂರ್ಣವಾಗಿ ಅರಿಯಲಾರ ಎನ್ನುವ ಸತ್ಯದ ಅರಿವು ನಮಗಿರಬೇಕು.ಬಯಸುವುದು ಕೇವಲ ಕೋರಿಕೆಯಾಗಿರಬೇಕೆ ಹೊರತು ಹೇರುವಿಕೆ ಆಗಬಾರದು.ಪರಿಸ್ಥಿತಿ,ಕಾಲ,ಸಮಾಜ ಇವೆಲ್ಲದರ ಮಧ್ಯೆ ನಾವಿದ್ದಾಗ ನಮ್ಮತನದೊಂದಿಗೆ ಇತರರ ಮನಸ್ಸನ್ನೂ ನಾವು ಅರಿತಾಗ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ.ಇದೊಂದು ಉತ್ತರವಿಲ್ಲದ ಪ್ರಶ್ನೆಯೋ ಅಥವಾ ಉತ್ತರವನ್ನು ಅರಿತುಕೊಳ್ಳುವಲ್ಲಿ ನಾವು ಹೆಡ್ಡರೋ ಇದು ಇನ್ನೂ ನನ್ನಲ್ಲಿ ಪ್ರಶ್ನೆಯೆ.ಹೌದು ನಮ್ಮ ಎಷ್ಟೋ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿಲ್ಲ.
ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವಾ....??!!!!!
ಮತ್ತೊಮ್ಮೆ ಮತ್ತೊಂದು ಬರಹದೊಂದಿಗೆ ವಾಪಸ್ಸಾಗುತ್ತೇನೆ.