ನಾನು ಬೆಂಗಳೂರಿಗೆ ಬಂದ ಹೊಸತು. ಸುಮಾರು ನಾಲ್ಕು ವರ್ಷಗಳ ಹಿಂದೆ. ಐ.ಟಿ ಉದ್ಯಮ ರಿಸೆಶನ್ ನಿಂದ ತತ್ತರಸಿ ಹೋಗಿದ್ದ ಕಾಲ. ಒಳ್ಳೆಯ ಮಾರ್ಕ್ಸ್ ಇದ್ದರೂ ಕೆಲಸಕ್ಕಾಗಿ ಪರದಾಡುತ್ತಿದ್ದ ಸಮಯ. ದಿನ ಬೆಳಗಾದರೆ ಯಾವ ಕಂಪನಿ ಅಲ್ಲಿ ಓಪನಿಂಗ್ ಇದೆ ಎಂದು ಅಲೆಯುವ ಪಚೀತಿ. ಆಗೆಲ್ಲ ನಾನು ಅವಲಂಬಿಸಿದ್ದು ಬೆಂಗಳೂರಿನ B.M.T.C ಬಸ್ ಗಳನ್ನೇ.. ಊರಲ್ಲಿ ತಾಸು ಗಟ್ಟಲೆ ಕಾದರೂ ಬರದೆ ಇರುತ್ತಿದ್ದ ಬಸ್ ಗಳನ್ನೇ ನೋಡಿದ್ದ ನನಗೆ ನಿಮಿಷಕ್ಕೊಂದರಂತೆ ಬರುತ್ತಿದ್ದ B.M.T.C ಬಸ್ಸುಗಳು ಒಂದು ರೀತಿಯಲ್ಲಿ ಆಶ್ಚರ್ಯ ಉಂಟು ಮಾಡಿದ್ದವು. ಅದರಲ್ಲಿ ಬರೆದಿರುವಂತೆ ಹೆಂಗಸರ ಸೀಟ್ ನಲ್ಲಿ ಹುಡುಗಿಯರಿಗೆ, ಹೆಂಗಸರಿಗೆ ಮಾತ್ರ ಅವಕಾಶ ವಿದ್ದಿದ್ದು ಒಂದು ರೀತಿಯ ಸೋಜಿಗವೆನಿಸುತ್ತಿತ್ತು. ಹೀಗೆ ಬರುತ್ತಿದ್ದ ಬಸ್ ಗಳ ನಡುವೆ ಹೆಚ್ಚು ಗಮನ ಸೆಳೆದಿದ್ದು ಕಡು ಕೆಂಪು ಬಣ್ಣದ ಕಿಟಕಿಗಳೇ ಇರದ ವೋಲ್ವೋ ಎಂಬ ಎ.ಸಿ ಬಸ್ಸು. ಆಗೆಲ್ಲ ನ್ನು ಅದೇ ಬಸ್ಸನ್ನು ಬೆರಗು ಕಂಗಳಿಂದ ನೋಡುತ್ತಿದ್ದೆ.. ನನ್ನ ಗೆಳತಿ ಹೇಳಿದ್ದಳು ಒಮ್ಮೆ ಅದಕ್ಕೆ ನಾರ್ಮಲ್ ಬಸ್ ಗಿಂತ ತುಂಬಾ ದುಡ್ಡು ಜಾಸ್ತಿ ಎಂದು. ಅದರಲ್ಲಿ ಆರಾಮಾಗಿ ಕುಳಿತು ಪುಸ್ತಕ ಓದುವವರು,ಹಾಡು ಕೇಳುವವರು ಇನ್ನೇನೋ ಮಾಡುತ್ತಿರುವವರನ್ನು ನೋಡಿ ನಾನು ಒಮ್ಮೆ ಕುಳಿತು ಕೊಳ್ಳಬೇಕು ಎಂದು ಆಸೆಯಾಗಿದ್ದು ಆಗಿನ ಕಾಲಕ್ಕೆ ಸುಳ್ಳಲ್ಲ. ಯಾವದಕ್ಕೂ ಮೊದಲು ಕೆಲಸ ಸಿಗಲಿ ಆಮೇಲೆ ನೋಡೋಣ ಎಂದು ಅಂದು ಕೊಂಡು ಮತ್ತೆ ಅದೇ ಬಸ್ ನ್ನ ತಿರುಗಿ ತಿರುಗಿ ನೋಡುತ್ತಾ ಇರುತ್ತಿದ್ದೆ.
ಅವಾಗ ಸೋಜಿಗ ಎನಿಸುತ್ತಿದ್ದ ಈ ಬಸ್ ಈಗ ವಿಚಿತ್ರ ಎನಿಸುತ್ತಿದೆ. ಬೆಳಗಾದರೆ ಅದೇ ಬಸ್ ನಲ್ಲಿ ಕೆಲಸಕ್ಕೆ ಹೋಗುತ್ತೇನೆ. ಮತ್ತೆ ಅದೇ ಬಸ್ ಅಲ್ಲಿ ಮನೆಗೆ ಬರುತ್ತೇನೆ. ಒಮ್ಮೊಮ್ಮೆ ನನ್ನ ಹಳೆ ಯೋಚನೆಗಳನ್ನು ನೆನೆದು ನನಗೆ ನಗು ಬರುತ್ತದೆ. ನನ್ನ ದಿನ ನಿತ್ಯದ ೧೦ ನಿಮಿಷದ ಪ್ರಯಾಣದಲ್ಲಿ ಏನೇನಲ್ಲ ನೋಡಿರುತ್ತೇನೆ. ಅದು ಕೆಟ್ಟ ಅಭ್ಯಾಸವೋ ಒಳ್ಳೆಯ ಅಭ್ಯಾಸವೋ ಚಟವೋ ನಾನರಿಯೆ. ಎಲ್ಲಾದರೂ ಹೊರಟಾಗ ಮಾತನಾಡದೆ ಸುತ್ತಲೂ ನೋಡುತ್ತಾ ಎಲ್ಲವನ್ನು ಗಮನಿಸುತ್ತಾ ಹೋಗುವುದು ನನ್ನ ಚಾಳಿ. ಅದು ವೋಲ್ವೋ ಬಸ್ ಗು ಹೊರತಾಗಿಲ್ಲ. ಬಸ್ ಹತ್ತುತ್ತಿದ್ದಂತೆಯೇ ರಪ್ ಅಂದು ಬಂದು ಅರಚುವ f.mನ ಜಾಹಿರಾತುಗಳು, ಗಮ್ಮೆಂದು ರಾಚುವ ಸೆಂಟ್ ನ ಪರಿಮಳ . ಹೊರಗೆ ಬಿಸಿಲೇ ಇಲ್ಲವೇನೋ ಎನ್ನುವಂತ ತಂಪು ವಾತಾವರಣ. ಕಿಟಕಿಗಳೇ ಇಲ್ಲದ ಕಾರಣ ಇತರರ ಉಸಿರನ್ನೇ ನಾವು ಉಸಿರಾಡಿಸ ಬೇಕಾದ ಅನಿವಾರ್ಯತೆ . ಎಲ್ಲಿ ಬೇಕಾದರೂ ಕುಳಿತು ಕೊಳ್ಳುವ ಸ್ವಾತಂತ್ರ್ಯ. ನಗುವೇ ಇಲ್ಲವೇನೋ ಅವರ ಜೀವನದಲ್ಲಿ ಎನ್ನುವ ಬಿಗಡು ಗಂಟು ಮುಖಗಳು . ಕಿವಿ ಗೆ ear ಫೋನ್ ಸಿಕ್ಕಿಸಿ ಹಾಡು ಕೇಳುವವರು ಒಂದೆಡೆ ಯಾದರೆ, ಎದುರಿಗೆ ಪಕ್ಕದಲ್ಲಿರುವವರಿಗೆ ಎಲ್ಲ ತೋರಿಸಿಕೊಂಡು ತಿಂಡಿ ತಿನ್ನುವವರು ಇನ್ನೊಂದೆಡೆ. ಅವರು ಮಾತನಾಡುವದು ಫೋನ್ ಮಾಡದಿದವರಿಗೆ ಕೇಳುವುದು ಹಾಗಿರಲಿ ಅವರಿಗೇ ಕೆಳುವುದಿಲ್ಲವೇನೋ ಎಂಬಂತೆ ಮಾತನಾಡುವವರು ಒಂದೆಡೆಯಾದರೆ, ಕಷ್ಟ ಹೇಳಿಕೊಂಡು ಅಳುವವರು, ಸುಖ ಎಂದು ನಗುವವರು ಇನ್ನೊಂದೆಡೆ. ಇದೆಲ್ಲರದರ ಮಧ್ಯೆ ಹನುಮಾನ್ ಚಾಲಿಸ್ ಓದುವವರು, ಕನ್ನಡಿ ನೋಡಿ ಕೊಳ್ಳುವವರು , ಪೇಪರ್ ಓದುವವರು , ನಾವೆಲ್ ಓದುವವರು, ಮೇಕ್ ಅಪ್ ಮಾಡಿ ಕೊಳ್ಳುವವರು ಇವರೆಲ್ಲ ಒಬ್ಬರಾದರೂ ಇರುತ್ತಾರೆ. ಬಸ್ ನಲ್ಲೆ ಪ್ರೀತಿ ಮಾಡುವವರು , ಮೂವಿ ನೋಡುವವರು , ಕೆಲಸ ಮಾಡುವವರು ಏನು ಕಮ್ಮಿ ಇಲ್ಲ.ಸ್ನಾನ ಮಾಡುವುದು, ಅಡಿಗೆ ಮಾಡುವುದು ಒಂದನ್ನು ಬಿಟ್ಟು ಸಹ್ಯವಾಗುವ ಎಲ್ಲ ಕೆಲಸಗಳು ಇಲ್ಲಿ ಸಾಧ್ಯವುಂಟು. ಇದೆಲ್ಲದರ ಮಧ್ಯೆ ನನ್ನಂತೆ ಒಳಗೊಳಗೇ ಇದನ್ನೆಲ್ಲಾ ನೋಡಿ ನಗುವವರು ಆಗಾಗ ಸಿಗುತ್ತಾರೆ. ಎಷ್ಟೇ ಬಾರವಾದ ಬ್ಯಾಗ್ ನಿಮ್ಮ ಕೈಯಲ್ಲಿ ಇರಲಿ ಯಾರೊಬ್ಬರು ನಿಮ್ಮನು ಏನೂ ಕೇಳುವುದಿಲ್ಲ. ನೋಡಿದರೆ ತಾನೇ ಕೇಳುವುದು . ಇಲ್ಲಿ ವಯಸ್ಸಾದವರಿಗೆ , ಮಕ್ಕಳಿರುವ ಹೆಂಗಸರಿಗೆ ವಿನಾಯತಿ ಇಲ್ಲ. ಹೋಗಲಿ ನಿಂತು ಕೊಳ್ಳುವುದಕ್ಕೆ ಒಂದು ಒಳ್ಳೆಯ ಹಿಡಿಕೆ ಕೂಡ ಇಲ್ಲ. ವೋಲ್ವೋ ಹತ್ತುತ್ತಿದ್ದಂತೆಯೇ ಕನ್ನಡ ಮರೆತು ಹೋದಂತೆ ಆಡುವವರು ಅಪರೂಪಕ್ಕೆ ಸಿಕ್ಕರೆ ಆಶ್ಚರ್ಯ ಪಡಬೇಕಾಗಿಲ್ಲ . ಟಿಕೆಟ್ ಕೊಡುವಾಗ ಚೇಂಜ್ ಇದ್ದರೂ ಇಲ್ಲ ಎನ್ನುವ ಕಂಡಕ್ಟರ್ ಭಾಯಿ, ಮರೆತೋ , ಮರೆತಂತೆ ನಟಿಸಿಯೋ ಬಸ್ ಇಳಿಯುವ ಇಂತವರ ನಡುವೆ ದುಡ್ಡು ಮಾಡುವುದು ಕಣ್ಣಿಗೆ ಕಾಣುತ್ತ ಇರುತ್ತದೆ. ಈ ರೂಟ್ ಗೆ ಬಂದರೆ ದಿನಕ್ಕೆ ೨ ಸಾವಿರಕ್ಕೆನೂ ಕಮ್ಮಿ ಇಲ್ಲ ಎನ್ನುವ ಕಂಡಕ್ಟರ್ ಡ್ರೈವರ್ ನಡುವಿನ ಮಾತುಕತೆ ಎಷ್ಟು ಜನರಿಗೆ ಅರ್ಥವಾಗಿದೆಯೋ ನಾನಂತು ಕಾಣೆ.
ಇದೆಲ್ಲ ನೋಡಿದ ಮೇಲೆ ಮೊದಲಿನ ಆಸಕ್ತಿ ಯಾಗಲಿ, ಆಸೆ ಯಾಗಲಿ ನನ್ನಲ್ಲಿ ಉಳಿದಿಲ್ಲ.ಈಗ ಅದೇ ಕೆಂಪು ಬಸ್ ಅನ್ನ ತಿರುಗಿ, ತಿರುಗಿ ನೋಡುವುದಿಲ್ಲ. ಒಮ್ಮೊಮ್ಮೆ ತಾಸಿಗೊಮ್ಮೆ ಬರುವ ಊರಿನ ಬಸ್ಸುಗಳೇ ಮೇಲೂ ಅನಿಸಿದ್ದಿದೆ. ಆದರೆ ಅವಶ್ಯಕತೆಗೆ ಅನಿವಾರ್ಯದ ಮುಖವಾಡ. ಬೇಕೋ ಬೇಡವೋ ಕೆಲವೊಂದು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವ ಅನಿವಾರ್ಯ. ಅದರಲ್ಲಿ ಇದು ಒಂದುನೋಡಿಯೂ ನೋಡದಂತೆ ಬದುಕುವ ವಿಪರ್ಯಾಸ. ಇದು ಪ್ರತಿಯೊಬ್ಬರ ಕಥೆಯೂ ಹೌದು , ವ್ಯಥೆಯೂ ಹೌದು.

