ಇಂದು ಬೆಳಗ್ಗೆ ಎದ್ದಾಗಿನಿಂದ ಮನೆಯ ನೆನಪು ಯಾಕೋ ತುಂಬಾನೇ ಬರ್ತಾ ಇದೆ. ಮೊದಲ ಚೌತಿ ಯನ್ನು ಇಲ್ಲೇ ಕಳಿಯಬೇಕಾದ ಅನಿವಾರ್ಯತೆಯಿಂದಲೋ, ನಿನ್ನೆ ಅಮ್ಮ ಫೋನ್ ಮಾಡಿ ಬೇಸರಿಸಿ ಕೊಂಡಿದ್ದರಿಂದಲೋ ಅರ್ಥವಾಗುತ್ತಿಲ್ಲ. ಯಾಕೋ ಏನೋ ಕಳೆದುಕೊಂಡಂತೆ, ಅರಿವಿಲ್ಲದೆ ಮನಸ್ಸು ದುಃಖಿಸುತ್ತಿದೆ.ಇತ್ತಿಚಿಗೆ ಸರಿಯಾಗಿ ಮನೆಯಲ್ಲಿ ಎರಡು ದಿನ ಕಳೆದ ನೆನಪೇ ಇಲ್ಲ. ಮೊದಲೆಲ್ಲ ವಾರಗಟ್ಟಲೆ ಮನೆಯಲ್ಲಿ ಉಳಿಯುತ್ತಿದ್ದವಳಿಗೆ ಈಗ ಸರಿಯಾಗಿ ಒಂದುದಿನ ಉಳಿಯುವ ಅವಕಾಶವು ಸಿಗುತ್ತಿಲ್ಲ. ಹೋದಾಗಲೆಲ್ಲ ಅಲ್ಲೋ ಇಲ್ಲೋ,ಅವರ ಮನೆ, ಇವರ ಮನೆ ಎನ್ನುವದರಲ್ಲೇ ಕಳೆದು ಹೋಗುತ್ತಿದೆ.ಪ್ರತಿದಿನದ ಒಂದೇ ದಿನಚರಿಯಲ್ಲಿ ಎರಡು ದಿನ ಬಿಡುವು ಮಾಡಿಕೊಂಡು ಎರಡು ದಿನವಾದರೂ ಹುಟ್ಟಿದ ಮನೆಯಲ್ಲಿ ಆರಾಮಾಗಿ ಕಳೆದು ಬರುವ ಆ ಎರಡು ದಿನಗಳು ಎಂದು ಬರುತ್ತವೋ ಗೊತ್ತಿಲ್ಲ. ಮತ್ತೆ ಮೊದಲಿನಂತೆ ಮನೆಗೆ ಹೋಗಿ, ಆರಾಮಾಗಿ ಹರಟೆ ಹೊಡೆದು, ಅಮ್ಮ, ದೊಡ್ಡಮ್ಮ ಪ್ರೀತಿಯಿಂದ ಮಾಡಿಕೊಡುವ ನನ್ನಿಷ್ಟದ ತಿಂಡಿಯನ್ನೆಲ್ಲ ತಿಂದು, ಹೊತ್ತು ಮುಳುಗುವ ವರೆಗೂ ಮಲಗಿ, ಮತ್ತೆ ಎದ್ದು ಶಾಲೆ ಮನೆಯ ಕಟ್ಟೆಯ ಮೇಲೆ ಕುಳಿತು ತಂಗಿಯೊಂದಿಗೆ ಹರಟೆ ಹೊಡೆದ ದಿನಗಳ ನೆನಪು ಗಳೆಲ್ಲ ಒಮ್ಮೆಲೇ ನುಗ್ಗಿ, ಅಂತರಂಗದ ಮೂಲೆಯಲ್ಲಿ ನಾನೆ ಬಚ್ಚಿಟ್ಟು ಕೊಂಡಿದ್ದ ನೋವುಗಳನ್ನೆಲ್ಲಾ ಕೆದಕಿ ಗೊತ್ತಿಲ್ಲದಂತೆ ಕಣ್ಣುಗಳಲ್ಲಿ ಬಿಂದುಗಳೆರಡು ಉದುರಿ ಕುಟ್ಟುತ್ತಿದ್ದ ಲ್ಯಾಪ್ ಟಾಪ್ ನ ಕೀ ಬೋರ್ಡ್ ನ ಮೇಲೆ ಬಿದ್ದಾಗಲೇ ನೆನಪಾಗಿದ್ದು ನಾನು ಆಫೀಸ್ ನಲ್ಲಿ ಇರುವೆನೆಂದು.
ಇದಕ್ಕೆ ಜವಾಬ್ಧಾರಳು ನಾನೇ.ಯಾವಾಗ ಈ ಮದುವೆಯಾಗಿ ಒಂದು ವರ್ಷ ಆಗೋತ್ತೋ ಅನ್ನುವ ಭಾವನೆ ನಮ್ಮಿಬ್ಬರಿಗೂ ಈಗಲೇ ಬಂದು ಬಿಟ್ಟಿದೆ.ಮನೆಗೆ ಹೋಗುವ ದಿನದ ತಿಂಗಳ ಮೊದಲೇ ಯಾರ್ಯಾರ ಮನೆಗೆ ಹೋಗಬೇಕೆಂಬ ನಮ್ಮ ಪ್ರವಾಸದ ದಿನಾಂಕ ಮತ್ತು ಸಮಯಗಳು ನಮಗೆ ಗೊತ್ತಿಲ್ಲದಂತೆ ನಿರ್ಧಾರವಾಗಿ ಬಿಟ್ಟಿರುತ್ತವೆ.ಯಾರ ಮನೆಗೂ ಹೋಗ ಬಾರದಂತಲ್ಲ. ಆಗಲೋ ಈಗಲೋ ಸಿಗುವ ನಮ್ಮ ರಜೆಗಳಲ್ಲಿ ಮನೆಗೆ ಮುಖ ತೋರಿಸುವುದೇ ಅಪರೂಪ ವಾಗಿರುವಾಗ ಮುಗಿಯದ ಮದುವೆ ನಂತರದ ಓಡಾಟಗಳು ನನ್ನಲ್ಲಿ ಸಿಟ್ಟು ಮೂಡಿಸುತ್ತಿವೆ. ಎಷ್ಟೋ ಬಾರಿ ಅಪ್ಪ ಅಮ್ಮನಿಗೂ ಇದರ ಬಗ್ಗೆ ಹೇಳಿದಾಗ ಮನೆಗೆ ಬರಲಾರೆ ಎಂದು ಬೈದಿ ದ್ದಿದೆ. ನಿನ್ನೆ ಅಮ್ಮ ಫೋನ್ ಮಾಡಿ ತುಂಬಾ ಬೇಸರಿಸಿ ಕೊಂಡಾಗ ಹೋಗಲಾಗದ ನನ್ನ ಅನಿವಾರ್ಯತೆಗೋ,ಸಿಕ್ಕರೂ ಹಾಕಲಾಗದ ನನ್ನ ಆಫೀಸ್ ರಜೆಯಾ ಮೇಲೆ ಸಿಟ್ಟು ಬಂದು ನಿನ್ನೆಯಿಂದ ಮನಸ್ಸು ಅದನ್ನೇ ಚಿಂತಿಸುತ್ತಾ ಮತ್ತೆ ಮತ್ತೆ ನೆನಪು ಕಾಡುತ್ತಿದೆ. ಇಲ್ಲಿಯವರೆಗೂ ಒಂದು ಹಬ್ಬವನ್ನು ನಾನು ಮಿಸ್ ಮಾಡಿದ ದಾಖಲೆ ಇಲ್ಲ. ಏನೇ ಇದ್ದರೂ ಮನೆ ಎಂದರೆ ಎಲ್ಲವನ್ನು ಬಿಟ್ಟು ಹೊರಡುತ್ತಿದ್ದ ನಾನು ನಮ್ಮಿಬ್ಬರ ಮೊದಲ ಹಬ್ಬಕ್ಕೆ ಹೋಗಲ್ಲಗುತ್ತಿಲ್ಲವಲ್ಲ ಎನ್ನುವುದೇ ನನ್ನಲ್ಲಿ ಹೆಚ್ಚು ದುಃಖವನ್ನು ಉಂಟು ಮಾಡಿದೆ..
ಇಷ್ಟೆಲ್ಲಾ ಮತ್ತೆ ಆಗುವುದು ಬೇಡವೆಂದು, ನನ್ನ ಕ್ಯಾಲೆಂಡರ್ ನೋಡಿ, ಮುಂದಿನ ತಿಂಗಳು ಎರಡು ದಿನವನ್ನು ಗುರುತು ಮಾಡಿ, ಮನೆಗೆ ಹೋಗುತ್ತಿರುವೆನೆಂಬ ಸಣ್ಣ ವಾಕ್ಯದೊಂದಿಗೆ ನನ್ನ ಮ್ಯಾನೇಜರ್ ಗೆ ಮ್ ರಜೆ ಗಾಗಿ ಮೇಲ್ ಕಳಿಸಿದ ಮೇಲೆ ನನ್ನ ಕಣ್ಣು ಗಳಿಂದ ನೀರು ಬರುವುದು ನಿಂತಿದ್ದು. ಈ ಬಾರಿ ಏನೇ ಆಗಲಿ ನಾನು ಎಲ್ಲಿಗೂ ಹೋಗುವುದಿಲ್ಲ.ಮನೆಯಲ್ಲಿ ಯಾರೂ ಕೇಳಿದರು ಇದೆ ನನ್ನ ಉತ್ತರ ಅಷ್ಟೇ.
