ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಹೊಸದಾರಿ...

[ಬಹಳದಿನದಿಂದ ಬರೆಯಬೇಕು ಅಂದು ಕೊಳ್ಳುತ್ತಿದ್ದೇನೆ..ಬರೆಯಲು ಕುಳಿತುಕೊಳ್ಳುತ್ತೇನೆ..ಬರೆಯಲು ಸಾಧ್ಯವಾಗುತ್ತಿಲ್ಲ.ಎಲ್ಲೋ ಅಕ್ಷರಗಳು ನನ್ನಿಂದ ಜಾರುತ್ತಿವೆ.ಹಿಡಿಯಲು ಬಯಸಿದಂತೆ ಮತ್ತೆ ಮತ್ತೆ ಅಡಗುತ್ತಿವೆ.ಸಾಲೊಂದು ನೆನಪಾಗುತ್ತೆ.ಮತ್ತೆ ಕೈಗೆ ಸಿಗದೇ ತಪ್ಪಿಸಿ ಕೊಳ್ಳುತ್ತಿದೆ.ಮತ್ತೆ ಮೊದಲಿನಂತೆ ಬರೆಯ ಬೇಕಾಗಿದೆ..ಬರೆಯ ಬಲ್ಲೆ ಎಂಬ ಛಲವಿದೆ ಕಷ್ಟಪಟ್ಟು ಬಹಳ ದಿನಗಳಿಂದ ಕಾಡುತ್ತಿದ್ದ ಒಂದಿಷ್ಟು ಸಾಲನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.ಓದಿ ಅಭಿಪ್ರಾಯ ತಿಳಿಸಿ ]
 ಎಂದಿನಂತೆ ಜೋರು ಜಡಿಮಳೆ ಹಟಬಿಡದೆ ಸುರಿಯುತ್ತಿತ್ತು.ಕಿಟಕಿಯ ಪಕ್ಕ ಹಾಗೆ ಎಂದಿನಂತೆ ಕಾಫಿ ಹಿಡಿದ ಆಕೆಯ ಕಂಗಳು ದೂರದ ಹಾದಿಯನ್ನು ದಿಟ್ಟಿಸುತ್ತಿದ್ದರೂ ಮನಸು ಸವೆದ ಬದುಕಿನ ದಿನಗಳ ಮೆಲುಕು ಹಾಕುತ್ತಿತ್ತು.ಬರೋಬ್ಬರಿ ಆರು ವರ್ಷಗಳ ಇಂತದ್ದೆ ಜಡಿಮಳೆಯಲ್ಲಿ ಅಲ್ಲವೇ ಅವನು ಸಿಕ್ಕಿದ್ದು.ಸದಾ ಲೈಬ್ರರಿಯಲ್ಲಿ ಕಳೆಯುತ್ತಿದ್ದವಳಿಗೆ ಆ ದಿನವು ಹೊರತಾಗಿರಲಿಲ್ಲ."ನಿರಾಕರಣ"ದ ಒಳಗೆ ಇಳಿದು ಹೋಗಿದ್ದ ಅವಳಿಗೆ ಸುರಿಯುವ ಮಳೆಯೂ ಜೊತೆಗೂಡಿ ಸಮಯವನ್ನು ಮರೆಸಿತ್ತು.ಲೈಬ್ರರಿಯಿಂದ ಹೊರ ಬಂದಾಗ ಇಳಿಸಂಜೆಯ ಸೋಭಗಿಗೆ ಮಳೆಯ ಮೆರುಗು ಸೇರಿ ವಾತಾವರಣ ಕಳೆ ಕಟ್ಟಿತ್ತು.ತಂದಿದ್ದ ಬ್ಯಾಗ್ ನೊಳಕ್ಕೆ ಇಣುಕಿ ನೋಡಿದಾಗಲೇ ಗೊತ್ತಾಗಿದ್ದು ಎಂದು ಮರೆಯದ ಕೊಡೆಯನ್ನು ಇಂದು ಮರೆತು ಬಂದಿದ್ದು.ತನ್ನ ಮರೆವನ್ನು ಹಳಿಯುತ್ತ ಆಗಸ ನೋಡಿದವಳಿಗೆ ಮಳೆ ಜೋರಾಗಿ ಸುರಿವುವ ಹಂಬಲವನ್ನು ಸೂಚಿಸಿತ್ತು..ಹೊರಡಲೇ ಬೇಕಾದ ಅನಿವಾರ್ಯತೆ,ಜೊತೆಗೆ ಯಾರಿಲ್ಲವೆಂಬ ಹೆದರಿಕೆ ಸುತ್ತಲೂ ಕಣ್ಣು ಹಾಯಿಸಿ ಹುಡುಕ ಹೊರಟವಳಿಗೆ ಪಕ್ಕದಲ್ಲಿ ನಿಂತಿದ್ದ ಅವನು ಕಂಡಿದ್ದು.ಇವತ್ತಲ್ಲದೆ ಅವನನ್ನು ಹಲವು ಬಾರಿ ನೋಡಿದ್ದಳು.ತನ್ನಂತೆ ಅವನು ಲೈಬ್ರರಿಗೆ ಬರುವುದನ್ನು ಗಮನಿಸಿದ್ದಳು.ಆಗೊಮ್ಮೆ,ಈಗೊಮ್ಮೆ ತಾನು ದಿನ ನಡೆದು ಬರುವ ಹಾದಿಯಲ್ಲೂ ಅವನನ್ನು ಕಂಡಿದ್ದಳು.ತಟ್ಟನೆ ಏನೋ ನೆನಪಾದಂತೆ ಅವನೆಡೆಗೆ ನೋಡಿದ್ದಳು.ಅವನೊಮ್ಮೆ ಅವಳೆಡೆಗೆ ನೋಡಿ ನಕ್ಕು ತಾನು ನಿಮ್ಮ ಪರಿಸ್ಥಿತಿಯಲ್ಲೇ ಇದ್ದೆನೆಂಬ ಸೂಚನೆ ಕೊಟ್ಟಿದ್ದ.ನಗು ಮಾತಾಗಿ ಇಬ್ಬರು ಅದೇ ಹಾದಿಯಲ್ಲಿ ಹೋಗುವರೆಂಬದು ಗೊತ್ತಾಗಿ ಜೊತೆಗೆ ನಡೆಯುವ ಮನಸ್ಸು ಮಾಡಿದ್ದರು.ಹೆಜ್ಜೆಯ ಜೊತೆಗೆ,ಮಾತು ಕೂಡಿ ಹಾದಿ ಕಳೆದಿದ್ದು ಇಬ್ಬರಿಗೂ ತಿಳಿದಿರಲಿಲ್ಲ.ಅಂದಿನ ಪರಿಚಯ ಸ್ನೇಹವಾಗಿ ತಿರುಗಿದ್ದು,ಇಬ್ಬರ ಅಭಿರುಚಿಗಳು ಒಂದೇ ಎನಿಸಿದ್ದು,ಓದಿದ,ಓದುವ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತಿದ್ದದು,ಆಗೊಮ್ಮೆ ಈಗೊಮ್ಮೆ ಜೊತೆಗೆ ತಿಂದ ಜೋಳದ ಸಿಹಿ,ಐಸ್ಕ್ರೀಂನತಂಪುಪ್ರೇಮಕ್ಕೆತಿರುಗಲು  ಜಾಸ್ತಿಸಮಯಬೇಕಾಗಿರಲಿಲ್ಲ.ಮನಸ್ಸು ಬೆರೆತಿದ್ದರೂ ಜಾತಿಯ ಅಡ್ಡಗೋಡೆ ಇಬ್ಬರನ್ನೂ ಕಾಡಿತ್ತು.
ಆದರೆ  ಒಪ್ಪಿಸಿ ಮದುವೆ ಆಗುವ ಧೈರ್ಯ ಇಬ್ಬರಲ್ಲೂ ಇರಲಿಲ್ಲ..ಎದುರಿಸಿ ಮದುವೆ ಆಗುವ ಹುಂಬ ಹಠವೂ ಇರಲಿಲ್ಲ.ಎಲ್ಲರ ಬದುಕಿನಿಂದ ದೂರ ಹೋಗುವುದೊಂದೇ ಇಬ್ಬರಿಗೂ ಉಳಿದ ದಾರಿ.ಆರಿಸಿ ಆಗಿತ್ತು.ಆಯ್ದುಕೊಳ್ಳುವುದು ಬಾಕಿ ಇತ್ತು.ದೂರದ ಊರಿನ ಬಸ್ ಹತ್ತುವಾಗ ಇಬ್ಬರಲ್ಲಿ ಇದ್ದಿದ್ದು,ತಂದಿದ್ದ ಬ್ಯಾಗ್,ಕಣ್ಣು ತುಂಬಾ ಕನವರಿಸುತ್ತಿದ್ದ ಮುಂದಿನ ಬದುಕು,ಬೊಗಸೆಯ ತುಂಬಾ ತುಂಬಿ ಕೊಂಡಿದ್ದ ಹುಚ್ಚು ಪ್ರೀತಿ.

ಅಂದಿನಿಂದ ಇಂದಿನವರೆಗೂ ಪಡೆದಿದ್ದು,ಗಳಿಸಿದ್ದು ಎಲ್ಲ ಬರಿ ನೆನಪು,ಮತ್ತೆ ಮತ್ತೆ ಮೆಲುಕು ಹಾಕುವ ನನಸಾದ ಕನಸು.ಇದೆಲ್ಲ ಅವಳಿಗೆ ನೆನಪಾದದ್ದು ಇಂದು ದಾರಿಯಲ್ಲಿ ಸಿಕ್ಕ ತನ್ನಗೆಳತಿತನ್ನತವರನೆನಪಿಸಿದಾಗಲೇ.ಅವನಹುಚ್ಚುಪ್ರೀತಿಯಲ್ಲಿಕಳೆದುಹೋಗಿದ್ದು ನೆನಪಾಗಿದ್ದು ಅವಳು ಎಚ್ಚರಿಸಿದಾಗಲೇ
.ತವರುತನ್ನ ಮರೆಯದೆಇದ್ದಿದ್ದು,ಜೊತೆ ಹುಟ್ಟಿದವರು ತನಗಾಗಿ ಪರಿತಪಿಸುತ್ತಿದ್ದದು,ಹಾಸಿಗೆ ಹಿಡಿದ ಅಪ್ಪ ತನ್ನ ಬರುವಿಕೆಯನ್ನು
ಕಾಯುತ್ತಿದ್ದದು ,ತನಗಾಗಿ ಹುಡುಕಾಟ ನಡೆಸಿದ್ದು ಎಲ್ಲ ಅವಳ ಇಷ್ಟು ದಿನದ ಮುಚ್ಚಿಟ್ಟ ನೋವನ್ನು ಒಮ್ಮೆಲೇನುಂಗಿ ಮರೆಯಾಗಿದ್ದವು.
ಕಣ್ಣು ತನ್ನವನ ಬರುವಿಕೆಯನ್ನು ದಿಟ್ಟಿಸುತ್ತಿತ್ತು.ಕಾಲುಗಳು ತನ್ನವರ ಸೇರಲು ಕಾಯುತ್ತಿದ್ದವು.ಖುಷಿಯ ಕಂಗಳು ಮತ್ತೆ ಪಡೆಯಲಿದ್ದ ದಿನಗಳ ಕಾಣುವ ಕಾತುರತೆಯಲ್ಲಿದ್ದವು.ನೆನಪುಗಳಲ್ಲಿ ಕಳೆದು ಹೋಗಿದ್ದವಳನ್ನು ಎಚ್ಚರಿಸಿತ್ತು ಮನೆಯ ಕಾಲಿಂಗ್ ಬೆಲ್.ಎಷ್ಟೋ ಹೊತ್ತಿನಿಂದ ನಿಂತಿದ್ದ ಆಕೆಯ ಕಾಲ್ಗಳು ಇಷ್ಟನ್ನೂ ಹೇಳಿಬಿಡುವ ಹಂಬಲದಲ್ಲಿ ಮನೆಯ ಬಾಗಿಲಕಡೆ ಎಂದಿನಂತಿರದೇ ಹೊಸ ದಾರಿ ಹುಡುಕಿ ಹೊರಟಿವೆಯೋ ಎನ್ನುವಂತೆ ಹೊರಟಿದ್ದವು........

10 comments:

ನಿಮ್ಮ ಬರಹದ ನೆನಪುಗಳ ನಿರೂಪಣೆ ಚೆನ್ನಾಗಿದೆ ವಾಣಿಶ್ರೀ ರವರೆ, ಅಭಿನ೦ದನೆಗಳು.

 

ತುಂಬಾ ಸುಂದರ ಸಾಲುಗಳು...

 

ಅರಿಯದೇ ಮೂಡಿದ ಪ್ರೀತಿ..... ತಪ್ಪೆನ್ನಲಾದೀತೇ....
ಯಾವುದೋ ಒಂದು ಕ್ಷಣ ಪ್ರೀತಿಯ ಪರವಾಗಿ ನಿರ್ದಾರವೂ ಮೂಡಿಬಿಡುತ್ತೆ.
ಮುಂದೆ..
ಅಪ್ಪ ಅಮ್ಮ ಮಕ್ಕಳ ಮೇಲಿಟ್ಟ ಭರವಸೆ... ಕಟ್ಟಿದ ಕನಸು, ಹೆತ್ತವರ ಸಂಕಟ... ದುಃಖ....
ಇದರ ಬಗ್ಗೇನೂ ನಿನ್ನ ಬರವಣಿಗೆ ಬಂದ್ರೆ ಓದವು ಅಂದ್ಕೋತಿದ್ದೆ....

ತುಂಬಾ ಚಂದಾ ಬರೀದ್ಯೇ.... ಹಿಂಗೇ ಬರ್ತಾ ಇರ್ಲಿ.....

 

adbhutavaagi barediddiri.... kelave saalugalalli bhaavanegala bharapuravaagi badisiddiri. onde usiralli odisuva tamma bhaasye mattu shaili aparupa

 

ಕತೆಯೆಂದುಕೊಳ್ಳಲಾ? ಎರಡೂ ಕಡೆಯ ಪ್ರೀತಿಯನ್ನು ಉಳಿಸಿಕೊಳ್ಳಬಯಸುವ almost ಎಲ್ಲ ಹೆಣ್ಣುಮಕ್ಕಳ ತುಡಿತಗಳೂ,ಹಂಬಲಗಳೂ,ತಲ್ಲಣಗಳೂ ಇಲ್ಲಿವೆ ಅಥವಾ ಇಲ್ಲೇ ಆಜೂ-ಬಾಜು ಇರಬಹುದೇನೋ ಅನ್ನಿಸುತ್ತದೆ.

-Venkatraman Bhat

 

ತುಂಬಾ ಚೆನ್ನಾಗಿ ಬರೆದಿದ್ದೀರಾ.. ವಾಸ್ತವಿಕವಾಗಿ ಮನಸ್ಸಿಗೆ ಹತ್ತಿರದ್ದು ಅನ್ನಿಸಿತು.

 

ವಾಣಿ, ನಿಮ್ಮ ಬರಹ ಚನ್ನಾಗಿದೆ. ಕಥೆಯ ಸ್ವಾರಸ್ಯವೂ ನಾಜೂಕಾಗಿದೆ. ಕೊನೆಯಲ್ಲಿ ಓದುಗರ ಕುತೂಹಲ ಕೆರಳಿಸಲು ಅರ್ಧಕ್ಕೆ ನಿಲ್ಲಿಸಿದಂತೆ ಅನಿಸಿತು. ಈ ಕಥೆ ಮುಂದುವರೆಯುವುದೇ?

 

"ದೂರದ ಊರಿನ ಬಸ್ ಹತ್ತುವಾಗ ಇಬ್ಬರಲ್ಲಿ ಇದ್ದಿದ್ದು,ತಂದಿದ್ದ ಬ್ಯಾಗ್,ಕಣ್ಣು ತುಂಬಾ ಕನವರಿಸುತ್ತಿದ್ದ ಮುಂದಿನ ಬದುಕು,ಬೊಗಸೆಯ ತುಂಬಾ ತುಂಬಿ ಕೊಂಡಿದ್ದ ಹುಚ್ಚು ಪ್ರೀತಿ"
ವಾಹ್ ಸೂಪರ್ರೋ
ಪ್ರೀತಿಯ ಅಂತ್ಯ ಯಾವತ್ತೂ ಸುಖಮಯವಾಗಿರಲ್ಲ ಅಲ್ವಾ?

 

niruupanaashaili sundaravaagide.

 

Post a Comment